Advertisement

ಜು. 28ರಂದು “ಪುಣ್ಯಕೋಟಿ ದತ್ತು ಯೋಜನೆ’ಗೆ ಚಾಲನೆ: ಸಚಿವ ಪ್ರಭು ಚವ್ಹಾಣ್‌

10:05 PM Jul 23, 2022 | Team Udayavani |

ಬೆಂಗಳೂರು: ಗೋ ಸಂಪತ್ತನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಇಡೀ ದೇಶಕ್ಕೆ ಮಾದರಿಯಾಗಬಲ್ಲ “ಪುಣ್ಯಕೋಟಿ ದತ್ತು ಯೋಜನೆ’ಗೆ ಕರ್ನಾಟಕ ಸಾಕ್ಷಿಯಾಗಲಿದ್ದು, ರಾಜ್ಯ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ ಜು. 28ರಂದು ಅಧಿಕೃತ ಚಾಲನೆ ದೊರಕಲಿದೆ.

Advertisement

ವಿಕಾಸಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಶುಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್‌, ಗೋ ಸಂಕುಲವನ್ನು ಸಂರಕ್ಷಿಸಲು ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ಪೋಷಣೆ ಮತ್ತು ಪಾಲನೆಗಾಗಿ ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆಗಳು ದತ್ತು ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸಲು ನಮ್ಮ ಸರಕಾರ ರಾಷ್ಟ್ರದಲ್ಲೇ ಮೊದಲ ಬಾರಿಗೆ ಈ ಯೋಜನೆ ಪ್ರಾರಂಭಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡು ಜುಲೈ 28ಕ್ಕೆ ಒಂದು ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಅದೇ ದಿನ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

ಗೋಶಾಲೆಗಳ ಜಾನುವಾರುಗಳಿಗೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸುವುದು, ಗೋವುಗಳನ್ನು ಸಂರಕ್ಷಿಸಲು ಸಾರ್ವಜನಿಕರನ್ನು ಪ್ರೇರೇಪಿಸುವುದು, ಗೋಶಾಲೆಗಳನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಮತ್ತು ಗೋಶಾಲೆಗಳನ್ನು ಸಾರ್ವಜನಿಕರ ಸಹಕಾರದಿಂದ ನಿರಂತರವಾಗಿ ಅಡಚಣೆರಹಿತವಾಗಿ ನಡೆಸುವುದು ಯೋಜನೆಯ ಉದ್ದೇಶ ಎಂದರು.

ವಾರ್ಷಿಕ 11 ಸಾವಿರ ರೂ.
ಜಾನುವಾರುಗಳ ದತ್ತು ಯೋಜನೆಯಡಿ ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಯ ಪ್ರತಿ ಜಾನುವಾರಿಗೆ ವಾರ್ಷಿಕ 11 ಸಾವಿರ ರೂ.ಗಳನ್ನು ಪಾವತಿಸಿ ದತ್ತು ಪಡೆಯಬಹುದು. ಅದೇ ರೀತಿ ಜಾನುವಾರು ಗಳಿಗಾಗಿ “ಆಹಾರ’ (ಫೀಡ್‌ ಎ ಕೌ) ಯೋಜನೆಯಡಿ ಸಾರ್ವಜನಿಕರು ತಮ್ಮ ಜೀವನದ ವಿಶೇಷ ಸಂದರ್ಭಗಳಲ್ಲಿ ಅಂದರೆ, ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಇತ್ಯಾದಿಗಳ ಸಂದರ್ಭದಲ್ಲಿ ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಗಳಲ್ಲಿರುವ ರಾಸುಗಳಿಗೆ ಒಂದು ದಿನಕ್ಕೆ 70 ರೂ.ಗಳಂತೆ ತಮಗೆ ಇಷ್ಟವಾದಷ್ಟು ರಾಸುಗಳಿಗೆ ಆಹಾರಕ್ಕಾಗಿ ವಂತಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ರಾಜ್ಯದಲ್ಲಿ ಒಟ್ಟು 215ಕ್ಕೂ ಹೆಚ್ಚಿನ ಖಾಸಗಿ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ. 100 ಸರಕಾರಿ ಗೋಶಾಲೆಗಳನ್ನು ಹಂತಹಂತವಾಗಿ ಪ್ರಾರಂಭಿಸುತ್ತಿದ್ದು, ಇವುಗಳಲ್ಲಿ ದೇಶಿತಳಿ, ಮಿಶ್ರತಳಿ ಜಾನುವಾರಗಳು, ನಿರ್ಗತಿಕ, ನಿಶ್ಶಕ್ತ, ವಯಸ್ಸಾದ, ರೋಗಗ್ರಸ್ಥ, ರೈತರು ಸಾಕಲಾಗದೆ ತಂದು ಬಿಡುವ ಜಾನುವಾರುಗಳು, ಗಂಡು ಕರುಗಳು ಮತ್ತು ನ್ಯಾಯಾಲಯ ಹಾಗೂ ಪೊಲೀಸ್‌ ಠಾಣೆಗಳಿಂದ ಪಡೆದುಕೊಂಡ ಜಾನುವಾರುಗಳಿಗೆ ಆಶ್ರಯ ನೀಡಿ ಪೋಷಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

Advertisement

108ಕ್ಕೆ ಕರೆ ಮಾಡಿದರೆ ಆ್ಯಂಬುಲೆನ್ಸ್‌ ಲಭ್ಯ
ರೈತರು ಹಾಗೂ ಜಾನುವಾರು ಸಾಕಾಣಿಕೆದಾರರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಾನುವಾರುಗಳ ಸಂರಕ್ಷಣೆ, ಪಾಲನೆ ಮತ್ತು ಆರೋಗ್ಯ ರಕ್ಷಣೆಗಾಗಿ ಸುಸಜ್ಜಿತ ಶಸ್ತ್ರ ಚಿಕಿತ್ಸಾ ವಾಹನಗಳ ಮೂಲಕ ಪಶು ಸಂಜೀವಿನಿ ಯೋಜನೆ ಜಾರಿಗೆ ತರಲಾಗಿದೆ. ಆರೋಗ್ಯ ಸೇವೆ ತುರ್ತು ಸಂದರ್ಭಗಳಲ್ಲಿ ಜನರು 108ಕ್ಕೆ ಕರೆ ಮಾಡಿದರೆ ಆ್ಯಂಬುಲೆನ್ಸ್‌ ಬರಲಿದೆ. ಮಾತು ಬಾರದ ಜಾನುವಾರುಗಳ ಆರೋಗ್ಯ ಸಮಸ್ಯೆಗಳು ಎದುರಾದಾಗ 1962ಕ್ಕೆ ಕರೆ ಮಾಡಿದರೆ ನಿಮ್ಮ ಮನೆ ಮುಂದೆ ಸಂಚಾರಿ ಪಶು ಚಿಕಿತ್ಸಾ ವಾಹನ ಬಂದು ಚಿಕಿತ್ಸೆ ನೀಡಲಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next