ಚಂಡೀಗಢ್(ಪಂಜಾಬ್): ವಿದೇಶ ಪ್ರಯಾಣ ಮಾಡಿ ಬಂದ ಪಂಜಾಬ್ ವ್ಯಕ್ತಿಯೊಬ್ಬ ಶುಕ್ರವಾರ ಸಾವನ್ನಪ್ಪಿದ್ದು, ಈ ವ್ಯಕ್ತಿ ಬರೋಬ್ಬರಿ 23 ಜನರಿಗೆ ರೋಗ ಹಬ್ಬಿಸಿದ್ದು, ಸುಮಾರು ನೂರು ಜನರನ್ನು ಭೇಟಿಯಾಗಿದ್ದ. ಅಷ್ಟೇ ಅಲ್ಲ ಈತನ ಜತೆಗೆ ತೆರಳಿದ್ದ ಇಬ್ಬರು ಹಲವು ಗ್ರಾಮಗಳಿಗೆ ಭೇಟಿ ನೀಡಿದ್ದ ಪರಿಣಾಮ 15 ಗ್ರಾಮಗಳಿಗೆ ದಿಗ್ಭಂಧನ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಗುರುದ್ವಾರದ 70ವರ್ಷದ ಗುರುವೊಬ್ಬರು ಎರಡು ವಾರಗಳ ಜರ್ಮನಿ ಮತ್ತು ಇಟಲಿ ಪ್ರವಾಸದಿಂದ ವಾಪಸ್ ಆಗಿದ್ದರು. ಇವರ ಜತೆಗೆ ನೆರೆಯ ಗ್ರಾಮದ ಇಬ್ಬರು ಸ್ನೇಹಿತರು ಇದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾನೂನು ಪ್ರಕಾರ ಸ್ವಯಂ ಕ್ವಾರಂಟೈನ್ ಆಗಿದ್ದರು. ಇವರು ಮಾರ್ಚ್ 6ಕ್ಕೆ ದಿಲ್ಲಿಗೆ ಬಂದಿದ್ದು ನಂತರ ಪಂಜಾಬ್ ಗೆ ಆಗಮಿಸಿದ್ದರು.
ಮಾರ್ಚ್ 18ರಂದು ಈ ಕೋವಿಡ್ ಪೀಡಿತ ಗುರು ಸಾವನ್ನಪ್ಪಿದ್ದು, ಇದೀಗ ಈ ವ್ಯಕ್ತಿಯಿಂದಾಗಿ 23 ಜನರಿಗೆ ಸೋಂಕು ತಗುಲಿದ್ದು, ಸುಮಾರು ನೂರು ಜನರನ್ನು ಭೇಟಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಈತ ಮಾರ್ಚ್ 8-10ರಂದು ಆನಂದ್ ಪುರ್ ಸಾಹೀಬ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು ಎಂದು ವರದಿ ತಿಳಿಸಿದೆ.
ಕೋವಿಡ್ 19 ವೈರಸ್ ಪಾಸಿಟಿವ್ ಎಂದು ವರದಿ ಬರುವ ಮೊದಲೇ ಸುಮಾರು ನೂರು ಮಂದಿಯನ್ನು ಭೇಟಿಯಾಗಿದ್ದರು. ಈ ವ್ಯಕ್ತಿಯ ಜತೆಗೆ ತೆರಳಿದ್ದ ಇಬ್ಬರು ಸ್ನೇಹಿತರು ರಾಜ್ಯದ 15 ಗ್ರಾಮಗಳಿಗೆ ಭೇಟಿ ನೀಡಿದ್ದರು ಎಂದು ವರದಿ ವಿವರಿಸಿದೆ.
ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿರುವ ವ್ಯಕ್ತಿಯ ಕುಟುಂಬದ 14 ಸದಸ್ಯರಿಗೂ ಪರೀಕ್ಷೆ ನಡೆಸಿದಾಗ ವರದಿ ಪಾಸಿಟಿವ್ ಎಂದು ಬಂದಿದೆ. ಈ ವ್ಯಕ್ತಿಯ ಮೊಮ್ಮಗಳು, ಮೊಮ್ಮಗ ಕೂಡಾ ಹಲವಾರು ಜನರನ್ನು ಭೇಟಿಯಾಗಿ ಮಾತನಾಡಿದ್ದರು.
ಈ ಹಿನ್ನೆಲೆಯಲ್ಲಿ ಮೂವರು ವ್ಯಕ್ತಿಗಳು ಎಲ್ಲೆಲ್ಲಾ ಹೋಗಿದ್ದರು, ಯಾರನ್ನೆಲ್ಲಾ ಭೇಟಿಯಾಗಿದ್ದರು ಎಂಬ ಬಗ್ಗೆ ಪತ್ತೆಹಚ್ಚಲು ಅಧಿಕಾರಿಗಳು ಗ್ರಾಮ, ಗ್ರಾಮಕ್ಕೆ ತೆರಳುತ್ತಿದ್ದಾರೆ. 15 ಗ್ರಾಮಗಳಿಗೆ ದಿಗ್ಭಂಧನ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೂವರು ವ್ಯಕ್ತಿಗಳಿಂದಾಗಿ ನವಾನ್ ಶಾಹ್ರ, ಮೋಹಾಲಿ, ಅಮೃತ್ ಸರ್, ಹೋಶಿಯಾರ್ ಪುರ್ ಹಾಗೂ ಜಲಂಧರ್ ನಲ್ಲಿ ಕೋವಿಡ್ ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಲು ಕಾರಣರಾಗಿದ್ದಾರೆ ಎಂದು ಶಂಕಿಸಲಾಗಿದೆ. ಈಗಾಗಲೇ ಭಾರತದಲ್ಲಿ ಕೋವಿಡ್ 19 ಪೀಡಿತರ ಸಂಖ್ಯೆ 700ಕ್ಕೆ ಏರಿದ್ದು, ಸಾವಿನ ಸಂಖ್ಯೆ 17ಕ್ಕೆ ಏರಿದೆ ಎಂದು ವರದಿ ತಿಳಿಸಿದೆ.