Advertisement

ಪಂಜಾಬ್ ಸಿಎಂ ಭಗವಂತ್ ಮಾನ್ ಪುತ್ರಿಗೆ ಕೊಲೆ ಬೆದರಿಕೆ

09:37 PM Mar 31, 2023 | Team Udayavani |

ಚಂಡೀಗಢ: ಖಲಿಸ್ತಾನಿ ಪ್ರತ್ಯೇಕವಾದಿ ಅಮೃತ್‌ಪಾಲ್‌ ಸಿಂಗ್‌ನ ಹೆಡೆಮುರಿ ಕಟ್ಟಲು ಪಂಜಾಬ್‌ ಸರ್ಕಾರ ಮುಂದಾಗಿರುವ ಬೆನ್ನಲ್ಲೇ, ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಅವರ ಪುತ್ರಿ ಸೀರತ್‌ ಕೌರ್‌ಗೆ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದಾರೆ.

Advertisement

ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ಈ ಕುರಿತು ಮಾಹಿತಿ ನೀಡಿದ್ದಾರೆ. ಅಮೆರಿಕದಲ್ಲಿರುವ ಸೀರತ್‌ ಕೌರ್‌ಗೆ ಕೊಲೆ ಬೆದರಿಕೆಗಳನ್ನು ಹಾಕಲಾಗುತ್ತಿದೆ. ಇದೊಂದು ಹೇಡಿ ಕೃತ್ಯ ಎಂದು ಖಂಡಿಸಿರುವ ಅವರು, ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಸೀರತ್‌ ಅವರ ಸುರಕ್ಷತೆ ಖಾತರಿ ಪಡಿಸಿಕೊಳ್ಳಲು ಮನವಿ ಮಾಡಿದ್ದಾರೆ. ಭಗವಂತ್‌ ಮಾನ್‌ ಅವರ ಮಾಜಿ ಪತ್ನಿ ಇಂದರ್‌ ಪ್ರೀತ್‌ ಕೌರ್‌ ಅವರೊಂದಿಗೆ ಪುತ್ರಿ ಸೀರತ್‌ ಅಮೆರಿಕದಲ್ಲಿ ವಾಸವಿದ್ದಾರೆ.

ಸಿಖ್‌ ದಂಪತಿ ಮೇಲೆ ಹಲ್ಲೆ
ಆಸ್ಟ್ರೇಲಿಯಾದಲ್ಲಿರುವ ಸಿಖ್‌ ದಂಪತಿಗಳ ಮೇಲೆ ಖಲಿಸ್ತಾನಿ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. “ಪಂಜಾಬಿ ಆಸಿ ಅಸೋಸಿಯೇಷನ್‌’ ಎನ್ನುವ ಸಂಸ್ಥೆ ನಿರ್ವಹಿಸುತ್ತಿರುವ ಹರ್ಮೀತ್‌ ಕೌರ್‌ ಹಾಗೂ ರಾಜೇಶ್‌ ಠಾಕೂರ್‌ ದಂಪತಿ ಪ್ರತಿವರ್ಷವೂ ವೈಶಾಕಿ ಮೇಳ ಆಚರಿಸುತ್ತಿದ್ದಾರೆ. ಆದರೆ, ಕಳೆದ ವರ್ಷದಿಂದ ಸರಬ್ಜಿತ್‌ ಸಿಂಗ್‌ ಪಿಲ್ಪಿ ಎಂಬವರ ತಂಡ ಹಬ್ಬದ ಹೆಸರಿನಲ್ಲಿ ಧರ್ಮಕ್ಕೆ ಅವಮಾನವಾಗುತ್ತಿದೆ ಎಂದು ಆಕ್ಷೇಪಿಸುತ್ತಿದೆ. ಈ ವರ್ಷ ಆಯೋಜಕ ದಂಪತಿ ಮೇಲೆ ಹಲ್ಲೆ ನಡೆಸಿದ್ದು, ಗುಂಪು ಖಲಿಸ್ತಾನಿ ಪರವೆಂದು ದಂಪತಿ ಆರೋಪಿಸಿದ್ದಾರೆ.

ಪಾಕಿಸ್ತಾನಕ್ಕೆ ಪರಾರಿಯಾಗಲು ಅಮೃತ್‌ಪಾಲ್‌ಗೆ ಸಲಹೆ
ತಲೆಮರೆಸಿಕೊಂಡಿರುವ ಅಮೃತ್‌ಪಾಲ್‌ ಸಿಂಗ್‌, ವೈಶಾಕಿ ಹಬ್ಬಕ್ಕೂ ಮುನ್ನ ಪೊಲೀಸರಿಗೆ ಶರಣಾಗುತ್ತಾನೆಂದು ಗುಪ್ತಚರ ಮಾಹಿತಿ ಹೊರಬೀಳುತ್ತಿದ್ದಂತೆ ಅಮೃತಸರದ ಶಿರೋಮಣಿ ಅಕಾಲಿದಳದ ಮುಖ್ಯಸ್ಥ, ಲೋಕಸಭೆ ಸಂಸದ ಸಿಮ್ರನ್‌ಜಿತ್‌ ಸಿಂಗ್‌, ಪಾಕ್‌ಗೆ ಪಾರಾರಿಯಾಗುವಂತೆ ಅಮೃತ್‌ಪಾಲ್‌ಗೆ ಸಲಹೆ ನೀಡಿದ್ದಾರೆ. 1984ರಲ್ಲಿ ( ಸಿಖ್‌ ಹತ್ಯಾಕಾಂಡ ಸಂದರ್ಭ) ನಾವೂ ಪಾಕ್‌ಗೆ ಹೋಗಿದ್ದೆವು. ಇಂದು ಮತ್ತದೇ ಪರಿಸ್ಥಿತಿ. ಸರ್ಕಾರ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಅಮೃತ್‌ ಪಾಲ್‌ಗೆ ಜೀವ ಬೆದರಿಕೆ ಇದೆ. ಆತ ಶರಣಾಗಬಾರದು! ಅದರ ಬದಲು ರಾಬಿ ನದಿ ದಾಟಿ ಪಾಕ್‌ ಸೇರುವ ಮೂಲಕ ಸಿಖ್ಖರ ಇತಿಹಾಸಕ್ಕೆ ನ್ಯಾಯ ದೊರಕಿಸಬೇಕು ಎಂದಿದ್ದಾರೆ. ಅವರ ಈ ಹೇಳಿಕೆ ವಿವಾದಕ್ಕೀಡಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next