ಉಡುಪಿ: 76 ಬಡಗಬೆಟ್ಟು ಗ್ರಾಮದ ಬೈಲೂರು ಶ್ರೀನೀಲಕಂಠ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಗಳ ಕಳವು ಪ್ರಕರಣದ ಆರೋಪಿಗೆ ಉಡುಪಿ ಪ್ರಧಾನ ಸಿಜೆ ಮತ್ತು ಸಿಜೆಎಂ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿ ಜೂ. 6ರಂದು ಆದೇಶ ನೀಡಿದೆ.
ಪ್ರಕಾಶ್ (40) ಶಿಕ್ಷೆಗೆ ಗುರಿಯಾದ ಆರೋಪಿ. ಈತ 2022ರ ಅ. 30ರಂದು ದೈವಸ್ಥಾನದ ಕಾಣಿಕೆ ಡಬ್ಬ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಆಗಿನ ಪೊಲೀಸ್ ನಿರೀಕ್ಷಕ ವಾಸಪ್ಪ ನಾೖಕ್, ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಘ್ನೇಶ್ ಕುಮಾರ್ ಅವರು ಆರೋಪಿ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಒಂದು ವರ್ಷ 6 ತಿಂಗಳು ಜೈಲು ಶಿಕ್ಷೆ ಮತ್ತು 2,000 ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ ಒಂದು ತಿಂಗಳ ಸಾದಾ ಶಿಕ್ಷೆಯನ್ನು ವಿಧಿಸಿ ಆದೇಶ ನೀಡಿದ್ದಾರೆ. ಸರಕಾರದ ಪರ ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಕೆ. ವಾದ ಮಂಡಿಸಿದ್ದರು.