Advertisement

ನಿಮ್ಮೂರಲ್ಲೇ ಸಿನಿಮಾ ಶೂಟಿಂಗ್‌ ಮಾಡುವೆ

08:41 PM Mar 22, 2021 | Team Udayavani |

ಕಲಬುರಗಿ : ಆಗ ಗುಲಬರ್ಗಾ ಹೋಗಿ ಕಲಬುರಗಿ ಆಗಿತ್ತು. ಹೈದ್ರಾಬಾದ್‌ ಕರ್ನಾಟಕ ಈಗ ಕಲ್ಯಾಣ ಕರ್ನಾಟಕವಾಗಿದೆ. ಈ ಭಾಗ, ಈ ಜಿಲ್ಲೆ ನನಗೆ ಹೊಸದೇನೂ ಅಲ್ಲ. ನಿಮ್ಮ ಜಿಲ್ಲೆಯಲ್ಲಿ ನನ್ನ ಸಿನಿಮಾ ಚಿತ್ರೀಕರಣ ಮಾಡುತ್ತೇನೆ… ಇದು ಚಂದನವನದ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ ಮಾತು. “ಯುವರತ್ನ’ ಚಿತ್ರದ ಪ್ರಚಾರಕ್ಕಾಗಿ ರವಿವಾರ ನಗರಕ್ಕೆ ಆಗಮಿಸಿದ್ದ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ, ಕಲಬುರಗಿಯಲ್ಲಿ ನನ್ನ ಸಿನಿಮಾ ಶೂಟಿಂಗ್‌ ಮಾಡಲಾಗುವುದು ಎಂದು ಹೇಳಿ ಕುತೂಹಲ ಹೆಚ್ಚಿಸಿದರು. ಯಾವ ಸಿನಿಮಾದ ಶೂಟಿಂಗ್‌, ಯಾವಾಗ ಆರಂಭವಾಗುತ್ತದೆ ಎನ್ನುವುದನ್ನು ಶೀಘ್ರದಲ್ಲೇ ಪ್ರಕಟಿಸುತ್ತೇನೆ ಎಂದು ಹೇಳಿ, ಕಾತುರತೆ ಹುಟ್ಟಿಸಿದರು.

Advertisement

ಚಿಕ್ಕಂದಿನಿಂದಲೂ ನಾನು ಸುಮಾರು ಸಲ ಜಿಲ್ಲೆಗೆ ಬಂದು ಹೋಗಿದ್ದೇನೆ. ನಮ್ಮ ತಂದೆ ಡಾ| ರಾಜಕುಮಾರ ಕಾಲದಿಂದಲೂ ಒಡನಾಟವಿದೆ. “ರಸಮಂಜರಿ’ ಕಾರ್ಯಕ್ರಮಗಳಿಗಾಗಿಯೂ ನಾನು ಇಲ್ಲಿಗೆ ಬಂದಿದ್ದೆ. ಇಲ್ಲಿನ ಜನರು ನನಗೆ ಹೊಸಬರಲ್ಲ. ಇತ್ತೀಚೆಗೆ ಮೂರು ವರ್ಷಗಳಿಂದ ಬರಲು ಆಗಿರಲಿಲ್ಲ ಅಷ್ಟೇ ಎಂದು ಹೇಳಿದರು. “ಯುವರತ್ನ’ ಹವಾ: ಹೊಂಬಾಳೆ ಫಿಲಂಸ್‌ ಅಡಿ ನಿರ್ಮಾಣವಾಗಿರುವ “ಯುವರತ್ನ’ ಚಿತ್ರ ಸ್ಯಾಂಡಲ್‌ ವುಡ್‌ನ‌ಲ್ಲಿ ಬಹು ನಿರೀಕ್ಷೆ ಹುಟ್ಟು ಹಾಕಿದೆ. ಚಿತ್ರದ ಪ್ರಚಾರವನ್ನು ಬಿಸಿಲೂರಿನಿಂದಲೇ ಪ್ರಾರಂಭಿಸಿರುವುದು ವಿಶೇಷವಾಗಿದೆ. ಇದು ಸಿನಿರಸಿಕರಲ್ಲಿ ಸಂಭ್ರಮಕ್ಕೂ ಕಾರಣವಾಗಿದೆ.

ರವಿವಾರ ಬೆಳಗ್ಗೆ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ನಟರಾದ ಪುನೀತ್‌ ರಾಜಕುಮಾರ, ಡಾಲಿ ಧನಂಜಯ, ರವಿಶಂಕರ ಹಾಗೂ ನಿರ್ದೇಶಕ ಸಂತೋಷ ಆನಂದರಾಮ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ವಿಮಾನ ನಿಲ್ದಾಣಕ್ಕೆ ಬರುತ್ತಲೇ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು. ನಂತರ ಕಾರಿನಲ್ಲಿ ಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನಕ್ಕೆ ಬಂದರು. ದೇವಸ್ಥಾನದ ಗೇಟ್‌ನಿಂದಲೇ ತಮ್ಮ ನೆಚ್ಚಿನ ನಟ ಪುನೀತ್‌ ರಾಜಕುಮಾರಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.

12 ಜೆಸಿಬಿ ಮೂಲಕ ಹೂವಿನ ಮಳೆಗೆರೆದು ಸಿನಿಮಾ ಶೈಲಿಯಲ್ಲೇ ಸ್ವಾಗತಿಸಿಕೊಳ್ಳಲಾಯಿತು. ಪುನೀತ್‌ ಅಭಿಮಾನಿಗಳತ್ತ ಕೈಬೀಸಿ ಖುಷಿ ಹೆಚ್ಚಿಸಿದರು. ನಂತರ ಪುನೀತ್‌, ಡಾಲಿ ಧನಂಜಯ, ಸಂತೋಷ ಆನಂದರಾಮ ಒಟ್ಟಿಗೆ ಶರಣಬಸವೇಶ್ವರ ದೇವರ ದರ್ಶನ ಪಡೆದರು. ತದನಂತರ ಶರಣಬಸವೇಶ್ವರ ಸಂಸ್ಥಾನದ ಡಾ| ಶರಣಬಸವಪ್ಪ ಅಪ್ಪ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್‌ ಮಾತೋಶ್ರೀ ಡಾ| ದಾûಾಯಿಣಿ ಅವ್ವ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಅಪ್ಪ ಅವರು ನಟರಿಗೆ ಸನ್ಮಾನಿಸಿ, ಶುಭ ಕೋರಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಎನ್‌ಈಕೆಆರ್‌ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ್‌, ಮುಖಂಡರಾದ ನಿತಿನ್‌ ಗುತ್ತೇದಾರ, ಶರಣಕುಮಾರ ಮೋದಿ, ಸಂಸ್ಥಾನದ 9ನೇ ಪೀಠಾಧಿ ಪತಿ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪ, ಸಹೋದರಿಯರಾದ ಕೋಮಲ, ಶಿವಾನಿ, ಮಹೇಶ್ವರಿ, ಶರಣಬಸವ ವಿವಿ ಕುಲಸಚಿವ ಡಾ| ಅನಿಲಕುಮಾರ ಜಿ. ಬಿಡವೆ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್‌ಅಧ್ಯಕ್ಷ ಶ್ರೀ ಚಂದು ಪಾಟೀಲ, ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರೀ, ಡೀನ್‌ ಡಾ| ಲಕ್ಷ್ಮಿ ಪಾಟೀಲ ಮಾಕಾ ಇದ್ದರು.

Advertisement

ಮುಗಿಲು ಮುಟ್ಟಿದ ಸಂಭ್ರಮ: “ಯುವರತ್ನ’ ಚಿತ್ರದ ಪ್ರಚಾರಕ್ಕಾಗಿ ತಮ್ಮ ಮೆಚ್ಚಿನ ನಟರು ಬರುತ್ತಾರೆ ಎನ್ನುವ ಸುದ್ದಿ ತಿಳಿದು ಅಭಿಮಾನಿಗಳು ಬೆಳಗ್ಗೆಯಿಂದಲೇ ಕಾಯ್ದು ಕುಳಿತಿದ್ದರು. ಶರಣಬಸವೇಶ್ವರ ದೇವಸ್ಥಾನದ ರಸ್ತೆಗಳು ಮತ್ತು ದೇವಸ್ಥಾನದ ಆವರಣದಲ್ಲಿ ಅಭಿಮಾನಿಗಳ ದಂಡೇ ನೆರೆದಿತ್ತು.ಪುನೀತ್‌ ಮತ್ತು ಡಾಲಿ ಧನಂಜಯ ಅವರನ್ನು ಕಂಡು ಕೇಕೆ, ಸಿಳ್ಳೆ ಹಾಕಿ ಸಂಭ್ರಮಿಸಿದರು. ನಟರೊಂದಿಗೆ ಸೆಲ್ಫಿಗಾಗಿ ಮುಗಿಬಿದ್ದಿದ್ದರು. ಪುನೀತ್‌ ಅಭಿಯನದ ಸಾಂಗ್ಸ್‌ಗೆ ಕುಣಿದು ಕುಪ್ಪಳಿಸಿದರು. ಯುವಕ-ಯುವತಿಯರು ಮಾತ್ರವಲ್ಲದೇ ಮಕ್ಕಳು, ಮಹಿಳೆಯರು, ಹಿರಿಯರು ಆಗಮಿಸಿದ್ದರು. ಜನ್ಮದಿನ ಆಚರಣೆ: ಚಿತ್ರದ ಪ್ರಚಾರಕ್ಕೆ ಬಂದಿದ್ದ “ಅಪ್ಪು’ ನಗರದಲ್ಲಿ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡರು.

ಮಾ.17ರಂದು ಅವರ ಜನ್ಮದಿನವಿತ್ತು. ಆದರೆ, ಆಗ ಆಚರಣೆ ಮಾಡಿಕೊಂಡಿರಲಿಲ್ಲ. ನಿತಿನ್‌ ಗುತ್ತೇದಾರ ಸಹೋದರನ ಮನೆಗೆ ಭೇಟಿ ನೀಡಿದ ಅವರು, ಅಲ್ಲಿ ಬೃಹತ್‌ ಕೇಕ್‌ ಕತ್ತರಿಸಿ ಜನ್ಮದಿನ ಆಚರಿಸಿಕೊಂಡರು. ಅಲ್ಲಿಯೇ ಚಿತ್ರತಂಡದವರು ರೊಟ್ಟಿ, ಶೇಂಗಾದ ಹೋಳಿಗೆ ಊಟ ಸವಿದರು. ಬಳಿಕ ಅಲ್ಲಿಂದ ಬೆಳಗಾವಿಯತ್ತ ಪ್ರಯಾಣ ಬೆಳೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next