Advertisement

ಮಡುಗಟ್ಟಿದ ಶೋಕದ ನಡುವೆ ಅಪ್ಪುಗೆ ಭಾವುಕ ವಿದಾಯ

11:26 PM Oct 31, 2021 | Team Udayavani |

ಬೆಂಗಳೂರು: ಬೆಂಗಳೂರಿಗರು ರವಿವಾರ ನಿದ್ದೆಯಿಂದ ಏಳುವ ಮೊದಲೇ ನಟ ಪುನೀತ್‌ ಕುಮಾರ್‌ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

Advertisement

ಕಂಠೀರವ ಕ್ರೀಡಾಂಗಣದಿಂದ ನಸುಕಿನ 4.50ರ ಸುಮಾರಿಗೆ ಹೊರಟ ಪುನೀತ್‌ ಪಾರ್ಥಿವ ಶರೀರ 5.45ರ ಸುಮಾರಿಗೆ ಕಂಠೀರವ ಸ್ಟುಡಿಯೋ ತಲುಪಿತು.

ಸಕಲ ಸರಕಾರಿ ಗೌರವಗಳು, ಆರ್ಯ ಈಡಿಗ ಸಂಪ್ರದಾಯದಂತೆ ಎಲ್ಲ ವಿಧಿ – ವಿಧಾನಗಳನ್ನು ಪೂರೈಸಿಕೊಂಡು ಪುನೀತ್‌ ಭೂತಾಯಿಯ ಮಡಿಲು ಸೇರಿದಾಗ ಸುಮಾರು 7.30 ಆಗಿತ್ತು.

ಕುಟುಂಬ ಸದಸ್ಯರು ಕಂಠೀರವ ಸ್ಟುಡಿಯೋಗೆ ತಲುಪಿದ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸಹಿತ ಪ್ರಮುಖ ಗಣ್ಯರು ಆಗಮಿಸಿದರು. ಪೊಲೀಸರಿಂದ ರಾಷ್ಟ್ರೀಯ ನಮನ ಸಲ್ಲಿಸಿದ ಬಳಿಕ ಗಣ್ಯರು ಪುಷ್ಪನಮನ ಸಲ್ಲಿಸಿದರು. ಪೊಲೀಸ್‌ ವಾದ್ಯ ತಂಡದಿಂದ 3 ಬಾರಿ ರಾಷ್ಟ್ರಗೀತೆ ಮೂಲಕ ಗೌರವಿಸಿ, ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಲಾ ಯಿತು. ಅನಂತರ ಪಾರ್ಥಿವ ಶರೀರದ ಮೇಲಿನ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿಗಳು ಪುನೀತ್‌ ಅವರ ಪತ್ನಿ ಅಶ್ವಿ‌ನಿಗೆ ಹಸ್ತಾಂತರಿಸಿದರು. ಬೆನ್ನಲ್ಲೇ ಪಾರ್ಥಿವ ಶರೀರವನ್ನೂ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಒಡೆಯಿತು ದುಃಖದ ಕಟ್ಟೆ
ಹಾವೇರಿಯ ಆರ್ಯ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಮತ್ತು ತಂಡ ಮಂತ್ರಪಠಣ ಮಾಡಿದರು. ಅನಂತರ ರಾಘವೇಂದ್ರ ರಾಜ್‌ಕುಮಾರ್‌ ಅವರ ಪುತ್ರ ವಿನಯ್‌ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು. ಪುನೀತ್‌ ದೇಹ ಮಣ್ಣಿನಡಿ ಸೇರುತ್ತಿದ್ದಂತೆ ಕುಟುಂಬಸ್ಥರ ದುಃಖದ ಕಟ್ಟೆ ಒಡೆಯಿತು. ಈ ವೇಳೆ ಪುನೀತ್‌ ಅವರ ಪುತ್ರಿಯರಾದ ಧ್ರುತಿ ಮತ್ತು ವಂದನಾ ತಾಯಿಯನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತರು. ನೆರೆದವರ ಕಣ್ಣಾಲಿಗಳು ತೇವಗೊಂಡಿದ್ದವು.

Advertisement

ಇದನ್ನೂ ಓದಿ:ಟಿ20 ವಿಶ್ವಕಪ್‌: ನಿರ್ಗಮನ ಬಾಗಿಲಲ್ಲಿ ನಿಂತ ಭಾರತ

ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ, ವ್ಯಾಪಕ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಇದರಿಂದ ಬೇರೆ ಬೇರೆ ಊರು, ಬಡಾವಣೆಗಳಿಂದ ನೆಚ್ಚಿನ ನಟನ ಅಂತಿಮ ದರ್ಶನಕ್ಕೆ ಧಾವಿಸಿದ್ದ ಸಾವಿರಾರು ಅಭಿಮಾನಿಗಳಿಗೆ ನಿರಾಸೆಯಾಯಿತು. ಕೆಲವೆಡೆ ಆಕ್ರೋಶ ಮತ್ತೆ ಕೆಲವೆಡೆ ಜೈಕಾರ ಕೇಳಿಬಂದವು.

ಇದಕ್ಕೂ ಮುನ್ನ ಸಮಯದ ಅಭಾವದಿಂದ ಕಂಠೀರವ ಕ್ರೀಡಾಂಗಣದಲ್ಲೇ ಮರಣೋತ್ತರ ಅಷ್ಟೋತ್ತರಿಗಳು ನೆರವೇರಿದವು. ಪ್ರಣವಾನಂದ ಸ್ವಾಮೀಜಿ ದೈವ ದಶಗ, ಗುರು ಶಡ್ಗ ಮತ್ತಿತರ ಮಂತ್ರಪಠಣ ಮಾಡಿದರು. ಬೆಳಗಿನಜಾವ 2.20ಕ್ಕೆ ಶುರುವಾದ ಈ ಕಾರ್ಯವು ಸುಮಾರು 40 ನಿಮಿಷಗಳ ಕಾಲ ನಡೆಯಿತು.

ಮಗನ ಅಂತಿಮ ವಿಧಿಗೆ ಬೆಳಗಿತು ತಂದೆಯ ದೀಪ!
ಪೂಜಾ ವಿಧಿಗಳನ್ನು ನೆರವೇರಿಸುವಾಗ ಮಂಗಳಾರತಿಗೆ ಬೆಳಗಲು ದೀಪದ ಬತ್ತಿಯೇ ಇರಲಿಲ್ಲ. ತತ್‌ಕ್ಷಣ ಸಮಾಧಿ ನೋಡಿಕೊಳ್ಳುವ ಕೆಲಸದಾಳು ಪಕ್ಕದಲ್ಲೇ ಇದ್ದ ಡಾ| ರಾಜ್‌ಕುಮಾರ್‌ ಅವರ ಸಮಾಧಿ ಮುಂದಿನ ದೀಪವನ್ನು ತಂದರು. ಆಗ ಪೂಜೆ ನೆರವೇರಿತು. ಇದು ಮಡಿಲಿಗೆ ಮರಳಿದ ಮಗನನ್ನು ತಂದೆ ಆರತಿ ಬೆಳಗಿ ಸ್ವಾಗತಿಸಿದಂತಿತ್ತು.

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next