Advertisement

ಅಭಿಮಾನಿಗಳಿಗಾಗಿ ಮತ್ತೆ ಹುಟ್ಟಿ ಬನ್ನಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

08:46 PM Nov 01, 2022 | Team Udayavani |

ಬೆಂಗಳೂರು: ವರ್ಷಧಾರೆಯನ್ನೂ ಲೆಕ್ಕಿಸದೆ ನೆರೆದಿದ್ದ ಅಸಂಖ್ಯ ಅಭಿಮಾನಿಗಳ ಸಮ್ಮುಖದಲ್ಲಿ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. 13 ವರ್ಷಗಳ ನಂತರ ಪ್ರದಾನ ಮಾಡಲಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಸ್ವೀಕರಿಸಿದರು.

Advertisement

ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್‍, ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್‍.ಟಿ.ಆರ್. ಅವರು ಸಮಾರಂಭದಲ್ಲಿ ಭಾಗವಹಿಸಿ, ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ಮಳೆಯ ಕಾರಣದಿಂದ ಮೊಟಕುಗೊಳಿಸಲಾದ ಕಾರ್ಯಕ್ರಮದಲ್ಲಿ ಭಾವತೀವ್ರತೆಯದ್ದೇ ರಾಜ್ಯಭಾರ. ಅಭಿಮಾನಿಗಳು, ಚಿತ್ರರಂಗದ ಗಣ್ಯರು ಹಾಗೂ ಡಾ. ರಾಜ್‍ ಕುಮಾರ್ ಕುಟುಂಬದವರು ಸುರಿಯುವ ಮಳೆಯನ್ನೂ ಲೆಕ್ಕಿಸದೆ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ರಜನೀಕಾಂತ್ ಅವರು ಪುನೀತ್ ಅವರನ್ನು ದೇವರ ಮಗು ಎಂದು ಬಣ್ಣಿಸಿದರು. ಜ್ಯೂನಿಯರ್ ಎನ್‍.ಟಿ.ಆರ್. ನಾನು ಇಲ್ಲಿ ನನ್ನ ಸಾಧನೆಯ ಕಾರಣಕ್ಕೆ ನಿಂತಿಲ್ಲ. ಒಬ್ಬ ಆತ್ಮೀಯ ಗೆಳೆಯನಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ ಎನ್ನುವ ಮೂಲಕ ತಮ್ಮ ನಡುವಿನ ಬಾಂಧವ್ಯವನ್ನು ಬಿಚ್ಚಿಟ್ಟರು. ಪರಭಾಷೆಯಲ್ಲಿ ಮಿಂಚಿದ ಇಬ್ಬರೂ ನಟರು ಅಚ್ಚಕನ್ನಡದಲ್ಲಿ ಮಾತನಾಡುವ ಮೂಲಕ ಅಭಿಮಾನಿಗಳ ಮನಸೂರೆಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕದ ರತ್ನನಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪುನೀತ್ ರಾಜ್‍ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಧನ್ಯರಾಗಿದ್ದೇವೆ ಎಂದು ಭಾವುಕರಾಗಿ ನುಡಿದರು.

Advertisement

ಇಂದು ರಾಜ್ಯದೆಲ್ಲೆಡೆ ಪುನೀತ್ ರಾಜ್‍ ಕುಮಾರ್ ಅವರಿಗೆ ಅಭಿಮಾನದ ಸಾಗರವೇ ಹರಿದಿದೆ. ಪುನೀತ್ ಅವರು ನಮ್ಮ ನಡುವೆಯೇ ಇದ್ದಾರೆ. ನಮ್ಮೆಲ್ಲರ ಮನದಲ್ಲಿದ್ದಾರೆ ಎಂದ ಮುಖ್ಯಮಂತ್ರಿಗಳು ವರ್ಷಧಾರೆಯ ನಡುವೆಯೂ ವಿಚಲಿತರಾಗದೆ ಕಾರ್ಯಕ್ರಮ ವೀಕ್ಷಿಸಿದ ಅಭಿಮಾನಿಗಳನ್ನು ಕಂಡು, ಕನ್ನಡ ನೆಲದಲ್ಲಿ ನಿಮ್ಮ ಮೇಲಿರುವ ಪ್ರೀತಿ, ಅಭಿಮಾನಗಳಿಗಾಗಿಯಾದರೂ ಮತ್ತೆ ಹುಟ್ಟಿ ಬನ್ನಿ ಎಂದು ಹಾರೈಸಿದರು.

ನಟ ಸಾರ್ವಭೌಮ ಡಾ. ರಾಜ್‍ ಕುಮಾರ್ ಹಾಗೂ ಪಾರ್ವತಮ್ಮ ಅವರ ಆಶೀರ್ವಾದದಿಂದ ಜನಿಸಿದ ಅಪ್ಪು ಇಂದು ಎಲ್ಲರ ಮನದಲ್ಲಿ ನೆಲೆಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next