Advertisement

ಚಾಮರಾಜನಗರ : ಪುನೀತ್ ರಾಜ್‌ಕುಮಾರ್ ರಸ್ತೆ ನಾಮಕರಣಕ್ಕೆ ನಗರಸಭೆಯಲ್ಲಿ ಮೂಡದ ಒಮ್ಮತ

09:18 PM Nov 09, 2021 | Team Udayavani |

ಚಾಮರಾಜನಗರ: ನಟ ಪುನೀತ್ ರಾಜ್‌ಕುಮಾರ್ ಅವರ ತವರು ಜಿಲ್ಲೆಯ ಜಿಲ್ಲಾ ಕೇಂದ್ರವಾದ ಚಾಮರಾಜನಗರದ ಪ್ರಮುಖ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಒಮ್ಮತ ಏರ್ಪಡದ ಕಾರಣ, ಈ ಬಗ್ಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲು ತೀರ್ಮಾನಿಸಲಾಯಿತು.

Advertisement

ನಟ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ನಗರದ ಡೀವಿಯೇಷನ್ ರಸ್ತೆಗೆ ನಾಮಕರಣ ಮಾಡುವ ಸಂಬಂಧ ಮಂಗಳವಾರ ವಿಶೇಷ ಸಭೆ ಕರೆಯಲಾಗಿತ್ತು. ಸಭೆಯ ಆರಂಭದಲ್ಲೇ ಎಸ್‌ಡಿಪಿಐ ಸದಸ್ಯ ಗಾಳೀಪುರ ಮಹೇಶ್ 2015ರ ಮೇ 7 ರಂದು ನಗರಸಭೆ ಅಧ್ಯಕ್ಷ ಎಸ್.ನಂಜುಂಡಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರದ ಭುವನೇಶ್ವರಿ ವೃತ್ತದಿಂದ ಪ್ರವಾಸಿಮಂದಿರದವರಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿಡಬೇಕು ಎಂದು ನಗರಸಭೆಯಲ್ಲಿ ನಿರ್ಣಯ ಮಾಡಿ, ಅನುಮೋದನೆ ನೀಡಲಾಗಿದೆ. ಹಾಗಾಗಿ ಆ ರಸ್ತೆಗೆ ಡಾ. ಅಂಬೇಡ್ಕರ್‌ಅವರ ಹೆಸರನ್ನು ಇಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಗರಸಭೆ ನಾಮನಿರ್ದೇಶನ ಸದಸ್ಯ ನಾಗೇಶ್ ನಾಯಕ ಮಾತನಾಡಿ, ಆ ಸಭೆಯಲ್ಲಿ ನಿರ್ಣಯ ಮಾಡಲಾಗಿದೆಯೋ ಹೊರತೂ ಅನುಮೋದನೆಯಾಗಿಲ್ಲ. ಆ ರಸ್ತೆಗೆ ವೀರಯೋಧ ಪ್ರಭುಸ್ವಾಮಿ ಹೆಸರಿಡಬೇಕು ಎಂದು ಆಗ್ರಹಿಸಿದರು.

ಆಗ ಸದಸ್ಯ ಗಾಳೀಪುರ ಮಹೇಶ್ ಪ್ರತಿಕ್ರಿಯಿಸಿ ಆ ಸಂದರ್ಭದಲ್ಲಿ ನಾನು ಸಹಇದ್ದು, ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುವುದರ ಜತೆಗೆ ಅನುಮೋದನೆಯನ್ನು ನೀಡಲಾಗಿದೆ, ಅದನ್ನು ತಿಳಿಯದೇ ಮಾತನಾಡುತ್ತಿರುವುದು ಸರಿಯಲ್ಲ. ನೀವು ಅಂಬೇಡ್ಕರ್ ವಿರೋಧಿ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಕೆಲ ಸಮಯ ಗೊಂದಲದ ವಾತಾವರಣ ಉಂಟಾಯಿತು.

ಇದೇವೇಳೆ ಸದಸ್ಯ ಶಿವರಾಜ್ ಮಾತನಾಡಿ, ನಗರದ ಭುವನೇಶ್ವರಿ ವೃತ್ತದಿಂದ ಪ್ರವಾಸಿಮಂದಿರದವರಗೆ ಅಂಬೇಡ್ಕರ್ ಹೆಸರಿಡುವ ಕುರಿತು ನಿರ್ಣಯ ತೆಗೆದುಕೊಂಡಿರುವುದು ತಮಗೆ ಗೊತ್ತಿಲ್ಲ. ಅಂದಿನ ಜಿಲ್ಲಾಧಿಕಾರಿ ಅಂಬೇಡ್ಕರ್ ಹೆಸರಿಡುವ ಕುರಿತು ಅನುಮೋದನೆ ನೀಡಿದ್ದಾರೆಯೇ ಎಂಬುದನ್ನು ಕೂಲಂಕಷವಾಗಿ ಚರ್ಚಿಸಿ ಮುಂದಿನಸಾಮಾನ್ಯ ಸಭೆಯಲ್ಲಿ ಮಂಡಿಸಬೇಕು, ವಿನಾಕಾರಣ ಗೊಂದಲಬೇಡ ಎಂದರು. ಆರ್.ಪಿ.ನಂಜುಂಡಸ್ವಾಮಿ ಸೇರಿದಂತೆ ಇತರೇ ಸದಸ್ಯರು ಇದನ್ನು ಸ್ವಾಗತಿಸಿದರು.

Advertisement

ಇದನ್ನೂ ಓದಿ : ಕಾಂಗ್ರೆಸ್‌ ಹೆಸರು “ಐ ನೀಡ್‌ ಕಮಿಷನ್‌’ಎಂದು ಬದಲಾಯಿಸಲಿ: ಬಿಜೆಪಿ

ಈ ಸಂದರ್ಭದಲ್ಲಿ ಮಹೇಶ್ ಮಾತನಾಡಿ, ಮೈಸೂರು ಪ್ರವೇಶದ್ವಾರದಿಂದ ಭುವನೇಶ್ವರಿ ವೃತ್ತದವರಗೆ ಪುನೀತ್ ರಾಜ್‌ಕುಮಾರ್ ಹೆಸರಿಡಿ ಎಂದರು.

ರಾಜ್‌ಕುಮಾರ್, ಪುನೀತ್ ನಮ್ಮ ಜಿಲ್ಲೆಯವರು ಅವರ ಹೆಸರಿಡಿ: 10 ನೇ ವಾರ್ಡ್ ಸದಸ್ಯ ಮನೋಜ್ ಪಟೇಲ್ ಮಾತನಾಡಿ, ಈಗಾಗಲೇ ನಗರದ ಜಿಲ್ಲಾ ಕ್ರೀಡಾಂಗಣ, ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ, ನಗರದ ಪ್ರಮುಖ ಉದ್ಯಾನವನಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿಡಲಾಗಿದೆ. ರಾಜ್ ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರು ನಮ್ಮ ಜಿಲ್ಲೆಯವರಾಗಿದ್ದು, ಅವರ ಹೆಸರನ್ನು ನಗರದ ರಸ್ತೆಯೊಂದಕ್ಕೆ ನಾಮಕರಣ ಮಾಡಬೇಕು. ಆಮೂಲಕ ಗೌರವಸೂಚಿಸಬೇಕು ಎಂದು ಮನವಿ ಮಾಡಿದರು.

ಎಸ್‌ಡಿಪಿಐ ಸದಸ್ಯ ಅಬ್ರಾರ್ ಅಹಮದ್ ಮಾತನಾಡಿ, ಪ್ರಮುಖ ರಸ್ತೆಗಳಿಗೆ ಹೆಸರಿಡಬೇಕು ಎನ್ನುವುದು ಗಂಭೀರವಾದ ವಿಷಯ, ಆದ್ದರಿಂದ ಮುಂದಿನಸಾಮಾನ್ಯಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ಮುಂದಿನ ಕ್ರಮವಹಿಸಬೇಕು ಎಂದರು.

ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಉಪಾಧ್ಯಕ್ಷೆ ಪಿ.ಸುಧಾ, ಆಯುಕ್ತ ಕರಿಬಸವಯ್ಯ ಸೇರಿದಂತೆ ನಗರಸಭೆ ಸದಸ್ಯರು, ನಗರಸಭೆ ಸಿಬ್ಬಂದಿ ಹಾಜರಿದ್ದರು.

ಹಿಂದೆಯೂ ಡಾ. ರಾಜ್‌ಕುಮಾರ್ ಹೆಸರಿಡಲು ವಿರೋಧ ವ್ಯಕ್ತವಾಗಿತ್ತು
ವರನಟ ಡಾ. ರಾಜ್‌ಕುಮಾರ್ ಅವರು ತವರು ಜಿಲ್ಲೆಯ ಕೇಂದ್ರ ಸ್ಥಾನವಾದ ಚಾಮರಾಜನಗರದ ರಸ್ತೆಗೆ ಅವರ ಹೆಸರಿಡಲು ಹಿಂದೆಯೂ ನಗರಸಭೆಯಲ್ಲಿ ವಿರೋಧ ವ್ಯಕ್ತವಾಗಿತ್ತು.
ರಾಜ್‌ಕುಮಾರ್ ಹೆಸರಿನಲ್ಲಿ ಚಾಮರಾಜನಗರದಲ್ಲಿ ಯಾವುದೇ ಸ್ಮಾರಕ ಇಲ್ಲ. ಹಾಗಾಗಿ ರಸ್ತೆಯೊಂದಕ್ಕೆ ಅವರ ಹೆಸರಿಡಬೇಕು ಎಂದು ಕಳೆದ ಅವಧಿಯಲ್ಲಿ ನಾಮಕರಣ ಸದಸ್ಯ ಸಿ. ಕೆ. ಮಂಜುನಾಥ್ ಪ್ರಸ್ತಾವನೆ ಮುಂದಿಟ್ಟಿದ್ದರು. ಅಂದಿನ ಸಭೆಯಲ್ಲಿ ರಸ್ತೆಗೆ ರಾಜ್‌ಕುಮಾರ್ ಹೆಸರಿಡಲು ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಆ ಪ್ರಸ್ತಾವ ಬಿದ್ದು ಹೋಯಿತು. ಈಗ ಅವರ ಪುತ್ರ ಪುನೀತ್ ರಾಜ್‌ಕುಮಾರ್ ಹೆಸರಿಡಲು ಸಹ ಈ ಅವಧಿಯ ನಗರಸಭೆಯಲ್ಲಿ ವಿರೋಧ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next