ಬೆಂಗಳೂರು: ಸರ್ಕಾರದ ಹತ್ತು ಹಲವು ಕಾರ್ಯಕ್ರಮ-ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ರಾಯಭಾರಿಯಾಗಿ ಸೇವೆ ನೀಡಿದ್ದ ಪುನೀತ್ ರಾಜಕುಮಾರ್ ಅವರು 2018ರ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ಆಯೋಗದ “ಐಕಾನ್’ ಆಗಿದ್ದರು.
ಮತದಾನದ ಕುರಿತು ಜಾಗೃತಿ ಮೂಡಿಸಲು ಮತದಾನದತ್ತ ಯುವಕರನ್ನು ಸೆಳೆಯಲು ಪುನಿತ್ ರಾಜ್‌ಕುಮಾರ್ ಅವರನ್ನು ಚುನಾವಣಾ ಆಯೋಗದ “ಐಕಾನ್’ (ರಾಯಭಾರಿ) ಆಗಿ ಒಂದು ವರ್ಷದ ಅವಧಿಗೆ ನೇಮಕ ಮಾಡಲಾಗಿತ್ತು.
2018ರ ವಿಧಾನಸಭೆ ಚುನಾವಣೆಗೆ “ಒಳಗೊಳ್ಳುವ ಸುಗಮ ಮತ್ತು ನೈತಿಕ ಚುನಾವಣೆ’ ಎಂದು ಆಯೋಗ ಘೋಷಣೆ ನೀಡಿತ್ತು. ಈ ಚುನಾವಣೆಯಲ್ಲಿ ಯುವ ಮತದಾರರನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಮತದಾನ ಚಲಾಯಿಸಲು ಯುವಕರನ್ನು ಉತ್ತೇಜಿಸಲು ರಾಜ್ಯದಲ್ಲಿ ಹೆಚ್ಚು ಯುವ ಅಭಿಮಾನಿಗಳನ್ನು ಹೊಂದಿದ್ದ ಪುನೀತ್ ರಾಜ್‌ಕುಮಾರ್ ಅವರನ್ನು “ಐಕಾನ್’ ಆಗಿ ನೇಮಕ ಮಾಡಲಾಗಿತ್ತು.
ಇದನ್ನೂ ಓದಿ:ಕಿಷ್ಕಿಂದಾ ಅಂಜನಾದ್ರಿ ಪುನೀತ್ ರಾಜ್ ಕುಮಾರ್ ನೆಚ್ಚಿನ ಶ್ರದ್ಧಾಕೇಂದ್ರ
ಆಯೋಗದ ಪ್ರಸ್ತಾವನೆಯನ್ನು ಅತ್ಯಂತ ಸಂತೋಷದಿಂದ ಒಪ್ಪಿಕೊಂಡು ಸ್ವಯಂಪ್ರೇರಣೆಯಿಂದ “ನಮ್ಮ ಓಟು ನಮ್ಮ ಪವರ್’ ಎಂದು ಜಾಗೃತಿ ಮೂಡಿಸುವ ಕಾರ್ಯಕ್ಕೆ ಕೈಜೋಡಿಸಿದ್ದರು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಪುನೀತ್ ಅವರನ್ನು ನೆನಪಿಸಿಕೊಂಡರು.
ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್, ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಕ್ರಿಕೇಟಿಗ ರಾಹುಲ್ ಡ್ರಾವೀಡ್ ಮತ್ತಿತರರ ಜೊತೆಗೆ ಪುನೀತ್ ರಾಜ್‌ಕುಮಾರ್ ಅವರು ಆಯೋಗದ “ಐಕಾನ್’ ಆಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ 15.42 ಲಕ್ಷ 18ರಿಂದ 19 ವರ್ಷದ ಮತದಾರರು ಇದ್ದರು.