ಅಂದು ಪುನೀತ್ ರಾಜಕುಮಾರ್ ನಿರ್ಮಾಪಕರ ಸ್ಥಾನದಲ್ಲಿದ್ದರು. ನಿರ್ಮಾಣ ಪುನೀತ್‌ಗೆ ಹೊಸದಲ್ಲ. ವಜ್ರೆàಶ್ವರಿ ಸಂಸ್ಥೆ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿದೆ. ಅವೆಲ್ಲವನ್ನು ಪುನೀತ್ ನೋಡಿಕೊಂಡೆ ಬೆಳೆದವರು. ಆದರೆ, ಅವರು ಯಾವತ್ತೂ ಒಂದು ಸಿನಿಮಾ ಮುಹೂರ್ತದಲ್ಲಿ ನಿರ್ಮಾಪಕರ ಸ್ಥಾನದಲ್ಲಿ ಕೂತು ಮಾತನಾಡಿರಲಿಲ್ಲ. ಆದರೆ, ಈ ಬಾರಿ ಅವರು ನಿರ್ಮಾಪಕರಾಗಿ ಸಿನಿಮಾ ಬಗ್ಗೆ ಮಾತನಾಡಿದರು. ತಮ್ಮ ಕನಸುಗಳನ್ನು ಕೂಡಾ ಹಂಚಿಕೊಂಡರು. ಇದಕ್ಕೆ ಸಾಕ್ಷಿಯಾಗಿದ್ದು “ಪಿಆರ್‌ಕೆ’ ಮತ್ತು “ಕವಲು ದಾರಿ’. “ಪಿಆರ್‌ಕೆ’ ಪುನೀತ್ ರಾಜಕುಮಾರ್ ಅವರು ಆರಂಭಿಸಿರುವ ಹೊಸ ಬ್ಯಾನರ್. “ಕವಲು ದಾರಿ’ ಆ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರ. “ಪಿಆರ್‌ಕೆ’ ಮೂಲಕ ಹೊಸ ಬಗೆಯ, ತುಂಬಾ ಇಷ್ಟವಾದ ಕಥೆಗಳನ್ನು ಸಿನಿಮಾ ಮಾಡುವ ಕನಸು ಪುನೀತ್ ಅವರಿಗಿದೆ. ಪುನೀತ್ ತಮ್ಮ ತಾಯಿಯ ಹೆಸರಿನಲ್ಲಿ ಆರಂಭಿಸಿರುವ ಬ್ಯಾನರ್ ಇದು. ಪಿಆರ್‌ಕೆ ಎಂದರೆ ಪಾರ್ವತಮ್ಮ ರಾಜಕುಮಾರ್.
“ನನಗೆ ಚಿಕ್ಕ ವಯಸ್ಸಿನಿಂದಲೇ ನಮ್ಮ ಬ್ಯಾನರ್‌ನಲ್ಲಿ ತುಂಬಾ ಸಿನಿಮಾ ಮಾಡಬೇಕೆಂಬ ಆಸೆ. ಈಗಾಗಲೇ ನಮ್ಮ ಬ್ಯಾನರ್‌ನಲ್ಲಿ ನಮ್ಮ ತಾಯಿ 80ಕ್ಕೂ ಹೆಚ್ಚು ಸಿನಿಮಾ ನಿರ್ಮಿಸಿದ್ದಾರೆ. ಅದನ್ನು 100 ದಾಟಿಸಬೇಕೆಂಬ ಆಸೆ ಇದೆ. ಪಿಆರ್‌ಕೆ ಕೂಡಾ ವಜ್ರೆàಶ್ವರಿಯಡಿಯಲ್ಲೇ ಬರುವ ಒಂದು ಬ್ಯಾನರ್’ ಎನ್ನುವುದು ಪುನೀತ್ ಮಾತು.
ಪಿಆರ್‌ಕೆ ಬ್ಯಾನರ್‌ನಲ್ಲಿ ಪುನೀತ್ ಮೊದಲ ಚಿತ್ರವಾಗಿ “ಕವಲು ದಾರಿ’ ನಿರ್ಮಿಸುತ್ತಿದ್ದಾರೆ. “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರ ನಿರ್ದೇಶಿಸಿದ ಹೇಮಂತ್ ರಾವ್ ಈ ಚಿತ್ರದ ನಿರ್ದೇಶಕರು. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತವಾಗಿದೆ. ಶಿವರಾಜಕುಮಾರ್ ಕ್ಲಾéಪ್ ಮಾಡಿ, ಶುಭ ಹಾರೈಸಿದ್ದಾರೆ. ಪುನೀತ್‌ಗೆ ಹೇಮಂತ್ ರಾವ್ ಮಾಡಿಕೊಂಡಿರುವ ಕಥೆ ತುಂಬಾ ಇಷ್ಟವಾಯಿತಂತೆ. 15ಕ್ಕೂ ಹೆಚ್ಚು ಬಾರಿ ಚರ್ಚೆಗಳು ನಡೆದು ಅಂತಿಮವಾಗಿ ಈ ಸಿನಿಮಾವನ್ನು ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಿಸಲು ನಿರ್ಧರಿಸಿದರಂತೆ ಪುನೀತ್. “ಇದೊಂದು ಹೊಸ ಬಗೆಯ ಸಿನಿಮಾ. ನನಗೆ ತುಂಬಾ ಇಷ್ಟವಾದ ಕಥೆ ಕೂಡಾ. ಇತ್ತೀಚಿನ ಮೂರ್‍ನಾಲ್ಕು ವರ್ಷಗಳಲ್ಲಿ ಕನ್ನಡದಲ್ಲಿ ವಿಭಿನ್ನ ಸಿನಿಮಾಗಳು ಬರುತ್ತಿವೆ ಮತ್ತು ಅವುಗಳನ್ನು ಜನ ಸ್ವೀಕರಿಸುತ್ತಿದ್ದಾರೆ ಕೂಡಾ. ಅದೇ ತರಹದ ಒಂದು ಸಿನಿಮಾ “ಕವಲು ದಾರಿ” ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ ಪುನೀತ್. ಪುನೀತ್‌ಗೆ ಈ ಬ್ಯಾನರ್ ಮೂಲಕ ಹೊಸ ಬಗೆಯ, ನೈಜತೆಗೆ ಹತ್ತಿರವಾಗಿರುವಂತಹ ಸಿನಿಮಾಗಳನ್ನು ಮಾಡುವ ಆಲೋಚನೆ ಇದೆ. ಹಾಗಾದರೆ ಯಾವ ಜಾನರ್‌ನ ಸಿನಿಮಾಗಳನ್ನು ನಿರೀಕ್ಷಿಸಬಹುದೆಂದು ನೀವು ಕೇಳಬಹುದು. ಪುನೀತ್ ಅದಕ್ಕೂ ಉತ್ತರಿಸುತ್ತಾರೆ. “ಇಲ್ಲಿ ಜಾನರ್ ಮುಖ್ಯವಾಗೋದಿಲ್ಲ. ಕೆಲವು ಸಿನಿಮಾಗಳಿಗೆ ಜಾನರ್ ಕೂಡಾ ಇರೋದಿಲ್ಲ. ಹಾಗೇ ಇಷ್ಟವಾಗಿಬಿಡುತ್ತವೆ. ಆ ತರಹದ ಸಿನಿಮಾಗಳನ್ನು ಮಾಡುವ ಆಸೆ ಇದೆ’ ಎಂದು ತಮ್ಮ ಸಿನಿಮಾ ನಿರ್ಮಾಣದ ಕನಸಿನ ಬಗ್ಗೆ ಹೇಳುತ್ತಾರೆ.
ನಿರ್ದೇಶಕ ಹೇಮಂತ್ ರಾವ್ ಕೂಡಾ ಖುಷಿಯಾಗಿದ್ದರು. ತಮ್ಮ ನಿರ್ದೇಶನದ ಎರಡನೇ ಸಿನಿಮಾ ದೊಡ್ಡ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಖುಷಿ ಅವರಲ್ಲಿತ್ತು. ಆ ಖುಷಿಯೊಂದಿಗೆ “ಕವಲು ದಾರಿ’ ಬಗ್ಗೆ ಮಾಹಿತಿ ನೀಡಿದರು ಹೇಮಂತ್. ಪುನೀತ್ ಬ್ಯಾನರ್‌ನ ಮೊದಲ ಸಿನಿಮಾ ನಿರ್ದೇಶಿಸುವ ಅವಕಾಶ ಸಿಕ್ಕಿದೆ. ಇದು ದೊಡ್ಡ ಜವಾಬ್ದಾರಿ ಎನ್ನುತ್ತಲೇ ಮಾತಿಗಿಳಿದ ಹೇಮಂತ್, “ಕವಲು ದಾರಿ’ ಒಂದು ಥ್ರಿಲ್ಲರ್ ಸಿನಿಮಾ. ನಾಯಕ ತಾನು ತನಿಖಾಧಿಕಾರಿ ಆಗಬೇಕೆಂದು ಕನಸು ಕಂಡು ಪೊಲೀಸ್ ಇಲಾಖೆಗೆ ಸೇರುತ್ತಾನೆ. ಆದರೆ, ಆತನನ್ನು ಟ್ರಾಫಿಕ್‌ಗೆ ಹಾಕುತ್ತಾರೆ. ಹೀಗಿರುವಾಗಲೇ ಒಂದು ಕೊಲೆಯಾಗುತ್ತದೆ. ಅದರ ತನಿಖೆಯನ್ನು ನಾಯಕ ಎತ್ತಿಕೊಳ್ಳುತ್ತಾನೆ. ಈ ಮೂಲಕ ಚಿತ್ರ ಸಾಗುತ್ತದೆ’ ಎಂದು ಚಿತ್ರದ ವಿವರ ನೀಡಿದರು ಹೇಮಂತ್. ಇದು ಬೆಂಗಳೂರು ಕೇಂದ್ರಿತ ಕಥೆಯಾಗಿದ್ದು, ಮೈಸೂರಿನಲ್ಲಿ ಸುಮಾರು 30 ದಿನಗಳ ಕಾಲ ಚಿತ್ರೀಕರಣ ಮಾಡಲಿದ್ದಾರಂತೆ ಹೇಮಂತ್. ಇಲ್ಲಿ ಪೊಲೀಸ್ ಇಲಾಖೆ, ಅಲ್ಲಿನ ಅಧಿಕಾರಿಗಳ ಜೊತೆಗೆ ಸರಿ ಮತ್ತು ತಪ್ಪು, ಸಾವು- ಬದುಕು, ಜೊತೆಗೊಂದು ಗೊಂದಲದ ಮನಸ್ಥಿತಿಯ ಸುತ್ತ ಕೂಡಾ ಈ ಕಥೆ ಸಾಗುತ್ತದೆಯಂತೆ. ಈ ಕಥೆಗಾಗಿ ಹೇಮಂತ್ ಅನೇಕ ಪೊಲೀಸ್ ಅಧಿಕಾರಿಗಳನ್ನು ಕೂಡಾ ಭೇಟಿಯಾಗಿದ್ದಾರಂತೆ.
ನಾಯಕ ರಿಷಿಗೆ ಇದು ಎರಡನೇ ಸಿನಿಮಾ. “ಆಪರೇಷನ್ ಅಲಮೇಲಮ್ಮ’ ಬಳಿಕ ಮಾಡುತ್ತಿರುವ “ಕವಲು ದಾರಿ’ ಬಗ್ಗೆ ರಿಷಿಗೂ ಸಾಕಷ್ಟು ನಿರೀಕ್ಷೆಗಳಿವೆ.”ನಾನು ಅಪ್ಪು ಅವರ ಅಭಿಮಾನಿ. ಈಗ ಅವರ ಬ್ಯಾನರ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಈ ಚಿತ್ರದಲ್ಲಿ ನಾನು ತನಿಖಾಧಿಕಾರಿಯಾಗಿ ನಟಿಸುತ್ತಿದ್ದೇನೆ. ಚಿತ್ರದಲ್ಲಿ ಅನಂತ್‌ನಾಗ್ ಸೇರಿದಂತೆ ಅನೇಕ ಹಿರಿಯ ನಟರ ಜೊತೆ ನಟಿಸುವ ಅವಕಾಶವಿದೆ’ ಎಂದರು ರಿಷಿ.
ಚಿತ್ರದಲ್ಲಿ ಅನಂತ್‌ನಾಗ್ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅವರಿಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಪಿಆರ್‌ಕೆ ಬ್ಯಾನರ್‌ನ ಮೊದಲ ಸಿನಿಮಾದಲ್ಲಿ ನಟಿಸುತ್ತಿರುವಅವರ ನೆನೆಪು “ಕಾಮನ ಬಿಲ್ಲು’, “ಭಕ್ತ ಪ್ರಹ್ಲಾದ’ ಸಮಯಕ್ಕೆ ಜಾರಿತು. “”ಕಾಮನಬಿಲ್ಲು’, “ಭಕ್ತಪ್ರಹ್ಲಾದ’ ಚಿತ್ರಗಳಲ್ಲಿ ನೀವೊಂದು ಪಾತ್ರ ಮಾಡಬೇಕೆಂದು ಪಾರ್ವತಮ್ಮ ಕೇಳಿದ್ದರು. ಅದಕ್ಕೆ ನೀವು ಕೇಳಬೇಕಾ, ಪಾತ್ರ ಫಿಕ್ಸ್ ಮಾಡಿ ಕರೆದರೆ ಮಾಡುತ್ತೇನೆ ಅಂದೆ. ಈಗ ಪುನೀತ್ ಬ್ಯಾನರ್ ಆರಂಭಿಸಿದ್ದಾರೆ. ಬೇರೆ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ.
ಹೇಮಂತ್ ರಾವ್ ಅವರ ಸ್ಕ್ರಿಪ್ಟ್ ಓದಿದೆ. ತುಂಬಾ ಚೆನ್ನಾಗಿದೆ. ಕೆಲವು ಸಿನಿಮಾಗಳಲ್ಲಿ “ಅನ್‌ನ್ಪೋಕನ್ ಥಿಂಗ್ಸ್’ ಎಂಬುದಿರುತ್ತದೆ. ಥಿಯೇಟರ್‌ನಿಂದ ಹೊರಬಂದ ನಂತರವೂ ಅವು ನಮ್ಮನ್ನು ಕಾಡುತ್ತವೆ. ಅದು ಈ ಸ್ಕ್ರಿಪ್ಟ್ನಲ್ಲಿದೆ’ ಎಂದರು ಅನಂತ್‌ನಾಗ್. ಚಿತ್ರದಲ್ಲಿ ರೋಶನಿ ಪ್ರಕಾಶ್ ನಾಯಕಿ. ಅಪ್ಪ ಮಾಡಿದ ತಪ್ಪಿನ ಜವಾಬ್ದಾರಿ ಹೊರುವ ಮಧ್ಯಮ ವರ್ಗದ ಹುಡುಗಿಯಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಅದ್ವೆ„ತ ಗುರುಮೂರ್ತಿ ಛಾಯಾಗ್ರಹಣವಿದೆ.
ರವಿ ಪ್ರಕಾಶ್ ರೈ