Advertisement

ಪೂರ್ಣಾಂಕ ಸಾಧಕನ ಕೆಲಸಕ್ಕೆ ಇನ್ನು ಅಲ್ಪ ವಿರಾಮ !

11:58 PM Jun 05, 2022 | Team Udayavani |

ಮಲ್ಪೆ : ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಗಳಿಸಿದ ಸಾಧನೆ ಪುನೀತ್‌ ನಾಯ್ಕನ ಜೀವನ ವಿಧಾನದಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ಫ‌ಲಿತಾಂಶದ ಮರುದಿನದಿಂದ ಈವರೆಗೂ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಮಲ್ಪೆಯಲ್ಲಿ ಮೀನು ಹೊರುವ ಕಾಯಕ ಮುಂದುವರಿಸಿರುವ ಆತ ಇನ್ನು ಪ್ರಥಮ ಪಿಯುಸಿ ತರಗತಿಗೆ ಹಾಜರಾಗಲಿದ್ದಾನೆ.

Advertisement

ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನಿನ ಬುಟ್ಟಿಗಳನ್ನು ಹೊತ್ತು ಕೂಲಿ ಮಾಡಿ ಬದುಕು ನಡೆಸುತ್ತಿದ್ದ ಕೊಪ್ಪಳ ಜಿಲ್ಲೆಯ ಯಲಬುರ್ಗಿ ತಾಲೂಕಿನ ವಲಸೆ ಕಾರ್ಮಿಕರ ಮಗ, ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಎಸೆಸೆಲ್ಸಿ ವಿದ್ಯಾರ್ಥಿ ಪುನೀತ್‌ ನಾಯ್ಕ 625ರಲ್ಲಿ 625 ಅಂಕ ಪಡೆದು ರಾಜ್ಯವೇ ತನ್ನತ್ತ ತಿರುಗಿ ನೋಡುವಂತ ಸಾಧನೆ ಮಾಡಿದ್ದಾನೆ. ಆದರೆ ಈತ ತಾನು ಟಾಪರ್‌ ಆಗಿದ್ದರೂ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಮರುದಿನ ಎಂದಿನಂತೆ ಮೀನು ಹೊರುವ ಕೆಲಸಕ್ಕೆ ಹಾಜರಾಗಿದ್ದಾನೆ. ಮಲ್ಪೆ ಬಂದರಿನಲ್ಲಿ ಜೂ. 5, ರವಿವಾರದ ವರೆಗೆ ಮೀನು ಖಾಲಿ ಮಾಡಲು ಅವಕಾಶ ಇದ್ದುದರಿಂದ ಅಲ್ಲಿಯತನಕವೂ ಈತ ಕೆಲಸ ಮಾಡಿದ್ದಾನೆ. ಇನ್ನು ಸ್ವಲ್ಪಸಮಯ ಮೀನುಗಾರಿಕೆಗೆ ನಿಷೇಧ ಇರುವುದರಿಂದ ಪುನೀತನ ಕೆಲಸಕ್ಕೂ ಅಲ್ಪ ವಿರಾಮ.

ಕಲ್ಲಪ್ಪ ಮತ್ತು ಲಲಿತಾ ದಂಪತಿ 10 ವರ್ಷದ ಹಿಂದೆ ಜೀವನೋಪಾಯಕ್ಕಾಗಿ ಉಡುಪಿಗೆ ಬಂದಿದ್ದರು. ಆ ಬಳಿಕ ಕಲ್ಲಪ್ಪ ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ತ್ಯಜಿಸಿಹೋದ ಕಾರಣ ಮಕ್ಕಳನ್ನು ಸಾಕುವ ಜವಾಬ್ದಾರಿಯನ್ನು ಹೊತ್ತ ಲಲಿತಾ ಕಲ್ಮಾಡಿಯಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ಮುಂಜಾನೆ 4 ಗಂಟೆಗೆ ಬಂದರಿಗೆ ಹೋಗಿ ಮೀನು ಹೊತ್ತು ಬದುಕಿನ ನೊಗ ಹಿಡಿದರು. ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿ, ಇಬ್ಬರು ಗಂಡು ಮಕ್ಕಳಾದ ಕಿರಣ್‌, ಪುನೀತ್‌ಗೆ ಶಿಕ್ಷಣ ಕೊಡಿಸಿದರು.

ಕೊರೊನಾದಿಂದ ತತ್ತರಿಸಿದ ಬದುಕು
3 ವರ್ಷಗಳ ಹಿಂದೆ ಕೊರೊನಾದಿಂದ ಬದುಕು ತತ್ತರಿಸಿದ ಸಂದರ್ಭದಲ್ಲಿ ಕಿರಣ್‌ ಮತ್ತು ಪುನೀತ್‌ ತಾಯಿಗೆ ಹೆಗಲು ಕೊಟ್ಟು ದುಡಿದರು. ಅಂದಿನಿಂದ ಇವತ್ತಿನವರೆಗೂ ಪುನೀತ್‌ ಬೆಳಗ್ಗೆ 4 ಗಂಟೆಗೆ ಎದ್ದು 9ರ ವರೆಗೆ ಬಂದರಿನಲ್ಲಿ ಮೀನು ಹೊತ್ತು ಸಿಕ್ಕ ಹಣವನ್ನು ತಾಯಿಗೆ ನೀಡಿ ಬಳಿಕ ಶಾಲೆಗೆ ಹೋಗುತ್ತಿದ್ದ. ತಾನು ಕಲಿಯುವ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದರೂ ಪುನೀತ್‌ ಮಾತ್ರ ಯಾವುದೇ ಟ್ಯೂಶನ್‌ ಪಡೆಯದೇ ಸಾಧನೆ ಮಾಡಿದ್ದಾನೆ. ಪ್ರಸ್ತುತ ಪುನೀತ್‌ ಕಡಿಯಾಳಿಯ ಜ್ಞಾನಸುಧಾ ಪಿ.ಯು.ಕಾಲೇಜಿಗೆ ಸೇರಿದ್ದಾನೆ. ಮುಂದಿನ ಶಿಕ್ಷಣದ ಬಗ್ಗೆ ಯಾವುದೇ ರೀತಿಯ ನೆರವನ್ನು ನೀಡಲು ಸಿದ್ದನಿದ್ದೇನೆ ಎಂದು ಬೆಳಗಾವಿ ಜಿಲ್ಲೆಯ ಕುಡಜಿ ಶಾಸಕ ರಾಜೀವ ಎಂಬವರು ಫೋನ್‌ ಮಾಡಿ ತಿಳಿಸಿದ್ದಾರೆ ಎನ್ನುತ್ತಾನೆ ಪುನೀತ್‌.

ಮನೆಗೆ ತೆರಳಿ ಅಭಿನಂದನೆ
ಕೆಲಸಕ್ಕೆ ಹೋದರೂ ಶಾಲೆಗೆ ಎಂದೂ ಗೈರಾಗು ತ್ತಿರಲಿಲ್ಲ. ಶಾಲೆ ಬಿಟ್ಟ ಅನಂತರ ರಾತ್ರಿಯ ವರೆಗೆ ಮನೆಯಲ್ಲಿ ಓದು. ಮುಂದೆ ಜಿಲ್ಲಾಧಿ ಕಾರಿ ಯಾಗಬೇಕೆಂಬ ಇರಾದೆ ಇದೆ ಎನ್ನುತ್ತಾರೆ ಪುನೀತ್‌ ನಾಯ್ಕ. ಅವರ ಸಾಧನೆಯನ್ನು ಕಂಡು ಜಿಲ್ಲಾಡಳಿತ ಸೇರಿದಂತೆ ಹಲವಾರು ಮಂದಿ ಸಮ್ಮಾನ ಮಾಡಿದ್ದಾರೆ. ಶಾಸಕ ಕೆ. ರಘುಪತಿ ಭಟ್‌, ಶಾಲಾ ಹಿರಿಯ ಶಿಕ್ಷಕಿ ಸಂಧ್ಯಾ ಹಾಗೂ ಶಿಕ್ಷಕ ವರ್ಗ, ಕೆಎಫ್‌ಡಿಸಿ ಸಮ್ಮಾನಿಸಿದೆ.

Advertisement

ಮನೆಯಲ್ಲಿ ಬಡತನ. ಹಾಗಾಗಿ ಬೆಳಗ್ಗೆ 4 ಗಂಟೆಗೆ ಎದ್ದು ಕೆಲಸಕ್ಕೆ ಹೋಗಿ ತಾಯಿಗೆ ಸಹಾಯ ಮಾಡುತ್ತೇನೆ. ಶಾಲೆಯಲ್ಲಿ ಯಾವುದೇ ಸಂಶಯಗಳಿದ್ದರೆ ಶಿಕ್ಷಕರಲ್ಲಿ ಕೇಳಿಕೊಂಡು ಸಮಸ್ಯೆ ಪರಿಹರಿಸುತ್ತಿದ್ದೆ. ಪೂರ್ಣ ಅಂಕ ಸಿಗುವುದೆಂದು ನಿರೀಕ್ಷೆ ಇತ್ತು. ಎಲ್ಲರ ಪ್ರೋತ್ಸಾಹ, ಶ್ರದ್ಧೆಯಿಂದ ಓದಿದ್ದ ಕಾರಣ ಉನ್ನತ ಅಂಕ ಗಳಿಸಲು ಸಾಧ್ಯವಾಯಿತು.
-ಪುನೀತ್‌ ನಾಯ್ಕ

ಮಗ ಪೂರ್ಣ ಅಂಕ ಗಳಿಸಿರುವುದು ಖುಷಿ ತಂದಿದೆ. ಎಲ್ಲರೂ ಈಗ ದಾರಿಯಲ್ಲಿ ಕರೆದು ಮಾತನಾಡುವಾಗ ಪುನೀತ್‌ನ ತಾಯಿ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿ¤ದೆ. ಅವನ ಕಲಿಕೆಗೆ ಮುಂದೆಯೂ ತನ್ನಿಂದ ಸಾಧ್ಯವಾದಷ್ಟು ಪ್ರೋತ್ಸಾಹ ನೀಡುತ್ತೇನೆ.
-ಲಲಿತಾ, ಪುನೀತ್‌ ತಾಯಿ

-ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next