ಕನ್ನಡದ ಪವರ್ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ತಮ್ಮ 43ನೇ ಜನುಮದಿನ ಪ್ರಯುಕ್ತ ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಶನಿವಾರ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರೂ ಸೇರಿದಂತೆ ಅನೇಕ ಅಭಿಮಾನಿಗಳು ಶುಭ ಕೋರಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಶುಭಾಶಯಗಳ ಮಹಾಪೂರವೇ ಹರಿದು ಬಂದಿದ್ದು, ನಿರ್ದೇಶಕ ಪವನ್ ಒಡೆಯರ್, ನಟ ಜಗ್ಗೇಶ್, ಪರಿಮಳ ಜಗ್ಗೇಶ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಪುನೀತ್ ರಾಜಕುಮಾರ್ ಫ್ಯಾನ್ಸ್ ಕ್ಲಬ್ ಸೇರಿದಂತೆ ಚಿತ್ರರಂಗದ ಗಣ್ಯರೂ ಮತ್ತು ಅಭಿಮಾನಿಗಳು ಪುನೀತ್’ಗೆ ಹಾರೈಸಿದ್ದಾರೆ.
ಪುನೀತ್ ನಟನಾಗಿ, ಗಾಯಕನಾಗಿ ಗುರುತಿಸಿಕೊಂಡಿದ್ದು, “ಪಿಆರ್‌ಕೆ ಪ್ರೊಡಕ್ಷನ್’ (ಪಾರ್ವತಮ್ಮ ರಾಜಕುಮಾರ್ ಪ್ರೊಡಕ್ಷನ್) ಹೆಸರಿನ ಸಂಸ್ಥೆಯಡಿ ಸಿನಿಮಾ ನಿರ್ಮಿಸುತ್ತಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ಸಂಭ್ರಮಕ್ಕೆ “ನಟಸಾರ್ವಭೌಮ’ ಚಿತ್ರತಂಡ ಉಡುಗೊರೆಯಾಗಿ ಚಿತ್ರದ ಫಸ್ಟ್ ಲುಕ್ ಮಧ್ಯರಾತ್ರಿ 12 ಗಂಟೆಗೆ ಬಿಡುಗಡೆ ಮಾಡಿದೆ. ಈ ನಡುವೆ ನಟ ಶಿವರಾಜಕುಮಾರ್ ಕೂಡಾ ಪುನೀತ್ ಹುಟ್ಟುಹಬ್ಬದಲ್ಲಿ ಭಾಗಿಯಾಗಿ ಪ್ರೀತಿಯ ತಮ್ಮನಿಗೆ ಶುಭಕೋರಿದ್ದಾರೆ.