ಹುಬ್ಬಳ್ಳಿ: ಪೂನಾದಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ ಟ್ರಾವೆಲ್ಸ್ ಬಸ್ಸಿನ ಹಿಂದಿನ ಚಕ್ರವು ಬ್ಲಾಸ್ಟಾಗಿ ಆಕಸ್ಮಾತ್ ಬೆಂಕಿ ಹೊತ್ತಿಕೊಂಡ ಪರಿಣಾಮ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಇಲ್ಲಿನ ಕಾರವಾರ ರಸ್ತೆಯ ಟೋಲ್ ಗೇಟ್ ಬಳಿಯ ಸೇವಾ ರಸ್ತೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಅದೃಷ್ಟವಶಾತ್ ಬಸ್ಸಿನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಚಾಲಕನ ಸಮಯ ಪ್ರಜ್ಞೆಯಿಂದಾಗಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರೇಷ್ಮಾ ಟ್ರಾವೆಲ್ಸ್ ಕಂಪನಿಗೆ ಸೇರಿದ ಖಾಸಗಿ ಬಸ್ ಶನಿವಾರ ಪೂನಾದಿಂದ ಉಡುಪಿಯತ್ತ ಹೊರಟಿದ್ದಾಗ ತಡರಾತ್ರಿ ಒಂದು ಗಂಟೆ ಸುಮಾರಿಗೆ ನಗರದ ಹೊರವಲಯದ ಬೈಪಾಸ್ ರಸ್ತೆಯ ಕಾರವಾರ ರಸ್ತೆ ಟೋಲ್ ಗೇಟ್ ಬಳಿ ಬಸ್ಸಿನ ಹಿಂದಿನ ಚಕ್ರ ಬ್ಲಾಸ್ಟಾಗಿ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಚಾಲಕನು ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ.
ಇದನ್ನೂ ಓದಿ:ಲೋಕ ಅದಾಲತ್ ಬಗ್ಗೆ ಕಕ್ಷಿದಾರರಲ್ಲಿ ತಿಳುವಳಿಕೆ ಅಗತ್ಯ: ಸಿವಿಲ್ ನ್ಯಾಯಾಧೀಶ ಕಿರಣ ಕುಮಾರ
Related Articles
ನೋಡು ನೋಡುತ್ತಿದ್ದಂತೆ ಬೆಂಕಿ ಸಂಪೂರ್ಣವಾಗಿ ಬಸ್ಸಿಗೆ ಆವರಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಆಗಮಿಸಿ ಎರಡು ಜಲಫಿರಂಗಿ ವಾಹನಗಳ ಮೂಲಕ ಬೆಂಕಿ ನಂದಿಸಿದ್ದಾರೆ.
ಹಳೇಹುಬ್ಬಳ್ಳಿ ಠಾಣೆ ಪೋಲಿಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.