Advertisement

ಪುಣೆ ತುಳುಕೂಟದ 20ನೇ ವಾರ್ಷಿಕೋತ್ಸವ ಸಂಭ್ರಮ

04:28 PM Aug 17, 2017 | |

ಪುಣೆ: ಪುಣೆ ತುಳುಕೂಟದ 20ನೇ ವಾರ್ಷಿಕೋತ್ಸವದ ಅಚ್ಚುಕಟ್ಟುತನ, ಪ್ರದರ್ಶನ ಗೊಂಡ ಅರ್ಥಪೂರ್ಣ ಕಾರ್ಯಕ್ರಮಗಳು, ಸೇರಿರುವ ಬೃಹತ್‌ ಸಂಖ್ಯೆಯ ತುಳುನಾಡ ಬಾಂಧವರನ್ನು ಕಂಡಾಗ ಮನಸ್ಸಿಗೆ ಅತೀವ ಆನಂದವಾಗಿರುವುದಲ್ಲದೆ ತಾನು ತುಳು ನಾಡಿನಲ್ಲಿಯೇ ಇದ್ದೇನೆನ್ನುವ ಭಾವ ಆವರಿಸುತ್ತದೆ. ನಮ್ಮ ತುಳು ಭಾಷೆ ವಿಶೇಷವಾದ ತಾಕತ್ತು, ಸೆಳೆತ, ಆಕರ್ಷಣೆಯನ್ನು ಹೊಂದಿದೆ ಎನ್ನುವುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ. ನಮ್ಮ ತುಳುನಾಡು, ತುಳು ಭಾಷೆ, ಆಚಾರ, ವಿಚಾರ, ಸಂಸ್ಕೃತಿಗಳ ಬಗ್ಗೆ ಪುಣೆಯಲ್ಲಿರುವ ತುಳುವರು ಎಷ್ಟೊಂದು ಅಭಿಮಾನ, ಗೌರವ ಹೊಂದಿದ್ದಾರೆ ಎನ್ನುವುದಕ್ಕೆ ಬೇರೆ ಉದಾಹರಣೆ ಬೇಕಿಲ್ಲ. ಇದೇ ಅಭಿಮಾನವನ್ನು ಉಳಿಸಿಕೊಂಡು  ವಿದ್ಯೆಯೊಂದಿಗೆ ನಮ್ಮ ಮಾತೃ ಭಾಷೆಯಾದ ತುಳು ಭಾಷೆಯನ್ನೂ ನಮ್ಮ ಮಕ್ಕಳಿಗೆ ಮನೆಯಲ್ಲಿ ಕಲಿಸುವ ಕೆಲಸ ಆಗಬೇಕಾದ ಅನಿವಾರ್ಯತೆ ಇದೆ ಎಂದು ಉದಯ ಕೃಷ್ಣಯ್ಯ ಚಾರಿಟೆಬಲ್‌ ಟ್ರಸ್ಟ್‌ ಮುನಿಯಾಲು ಇದರ ಅಧ್ಯಕ್ಷ, ಸಮಾಜ ಸೇವಕ ಉದಯ ಕುಮಾರ್‌ ಶೆಟ್ಟಿ ಮುನಿಯಾಲು  ಅವರು ಹೇಳಿದರು.

Advertisement

ಆ.   15ರಂದು ಪುಣೆಯ ಮಹಾಲಕ್ಷ್ಮಿಲಾನ್ಸ್‌ ನಲ್ಲಿ ನಡೆದ ಪುಣೆ ತುಳುಕೂಟದ 19ನೇ ವಾರ್ಷಿ ಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ  ಮಾತನಾಡಿದ ಅವರು,  ಇಂದು ಬದಲಾಗುತ್ತಿರುವ ಸನ್ನಿವೇಶದಲ್ಲಿ ನಮ್ಮ ಮಕ್ಕಳಿಗೆ ಉತ್ತಮ ವಿದ್ಯೆ ಯೊಂದಿಗೆ  ಅಂತರ್ಜಾಲ, ಸಾಮಾಜಿಕ ಜಾಲ ತಾಣಗಳು, ಮಾಧ್ಯಮಗಳ ಪ್ರಭಾವ ಬಹಳಷ್ಟು ಪರಿಣಾಮ ಬೀರುತ್ತಿದೆ. ಅದರೊಂದಿಗೆ ತಂದೆ, ತಾಯಂದಿರಿಗೆ, ಗುರು ಹಿರಿಯರಿಗೆ ಗೌರವ ನೀಡುವ ಉತ್ತಮ ಸಂಸ್ಕಾರಗಳ ಪರಿಪಾಠವನ್ನೂ ನೀಡಬೇಕು. ಮಾತಾಪಿತರೊಂದಿಗೆ ಪ್ರೀತಿಯ ಭಾವನಾತ್ಮಕ ಸಂಬಂಧವನ್ನು ಬೆಸೆಯುವ ಅಪ್ಪುಗೆಯೂ ಅಗತ್ಯವಾಗಿದೆ. ಪುಣೆ ತುಳುಕೂಟ ಮುಂದೆಯೂ ತನ್ನ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಲಿ ಎಂದರು.
ಸಂಘದ ಸ್ಥಾಪಕಾಧ್ಯಕ್ಷ ಜಯ  ಶೆಟ್ಟಿ ಅವರು ಮಾತ ನಾಡಿ,  ಸಂಘವು 20ನೇ ವರ್ಷಾಚರಣೆಯನ್ನು ಮಾಡುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಆದರೆ ಸಂಘಕ್ಕೊಂದು ಸ್ವಂತ ಸೂರಿನ ಅಗತ್ಯವಿದೆ. ಅದಕ್ಕಾಗಿ ಎಲ್ಲರೂ ನೆರವಾಗಿ ಎಂದರು.  ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್‌ ಬಿ. ರೈ ಕರ್ನೂರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.

ವೇದಿಕೆಯಲ್ಲಿ ಸಂಘದ ಸ್ಥಾಪಕಾಧ್ಯಕ್ಷ ಜಯ ಕೆ. ಶೆಟ್ಟಿ, ಗೌರವಾಧ್ಯಕ್ಷ ಮಿಯ್ನಾರ್‌ ರಾಜ್‌ಕುಮಾರ್‌ ಎಂ.  ಶೆಟ್ಟಿ, ಉಪಾಧ್ಯಕ್ಷರಾದ ಮೋಹನ್‌ ಶೆಟ್ಟಿ  ಎಣ್ಣೆಹೊಳೆ, ಕೋಶಾಧಿಕಾರಿ ಸಂತೋಷ್‌ ಶೆಟ್ಟಿ ಎಣ್ಣೆಹೊಳೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿಲ್ಮಾ ಮಾರ್ಟಿಸ್‌, ಪಿಂಪ್ರಿ ಚಿಂಚಾÌಡ್‌  ಪ್ರಾದೇಶಿಕ ಸಮಿತಿ  ಕಾರ್ಯಾಧ್ಯಕ್ಷ ಶ್ಯಾಮ್‌  ಸುವರ್ಣ ಉಪಸ್ಥಿತರಿದ್ದರು. ಈ ಸಂದರ್ಭ ವರ್ಷದ ಶ್ರೇಷ್ಠ ಸಾಧಕನನ್ನಾಗಿ ಗುರುತಿಸಿ ಪುಣೆಯ ಹಿರಿಯ ಹೊಟೇಲ್‌ ಉದ್ಯಮಿ, ಸಮಾಜ ಸೇವಕ, ಪುಣೆ ಮಹಾ ನಗರಪಾಲಿಕೆಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸದಾನಂದ ಕೃಷ್ಣ  ಶೆಟ್ಟಿ ದಂಪತಿಯನ್ನು  ಶಾಲು ಹೊದೆಸಿ, ಫಲ ಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರಗಳನ್ನು ನೀಡಿ ಸಂಘದ ವತಿಯಿಂದ ಸಮ್ಮಾನಿಸಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸತ್ಕರಿಸಲಾಯಿತು. ಅತಿಥಿಗಳನ್ನು ಗೌರವಿಸಲಾಯಿತು. ಪುಣೆಯ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರನ್ನು, ಕಾರ್ಯಕ್ರಮದ ಪ್ರಾಯೋಜಕರನ್ನು ಪುಷ್ಪಗುತ್ಛ ನೀಡಿ ಗೌರವಿಸಲಾಯಿತು. ಈ ಸಂದರ್ಭ ಚಂದುಕಾಕ ಸರಾಫ್‌ ಚಿನ್ನದಂಗಡಿಯ ಪ್ರಾಯೋಜಕತ್ವದಲ್ಲಿ ಅಂಧ ಬಂಧುಗಳಿಗೆ ಊರುಗೋಲುಗಳನ್ನು ಹಾಗೂ ಎಸ್‌ಎಸ್‌ಸಿ ಅತ್ಯಧಿಕ ಅಂಕಗಳನ್ನು ಪಡೆದ ಮಕ್ಕಳಿಗೆ ಗಿಫ್ಟ್‌ ವೋಚರ್‌ಗಳನ್ನು ವಿತರಿಸಲಾಯಿತು.

ಗೀತಾ ಪೂಜಾರಿ, ಸರಸ್ವತಿ ಕುಲಾಲ್‌ ಮತ್ತು ನವಿತಾ ಪೂಜಾರಿ ಪ್ರಾರ್ಥಿಸಿದರು. ವಿಕೇಶ್‌ ರೈ ಶೇಣಿ ಮತ್ತು ಸರಿತಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಮಲ್ಲಿಕಾ ಕುಲಾಲ್‌ ಸಮ್ಮಾನ ಪತ್ರ ವಾಚಿಸಿದರು. ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಮಾಣಿಬೆಟ್ಟು ವಿದ್ಯಾರ್ಥಿಗಳ ಸತ್ಕಾರವನ್ನು ನಡೆಸಿಕೊಟ್ಟರು. ಕಾಂತಿ ಸೀತಾರಾಮ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮವನ್ನು ಶಿವನಾಥ ರೈ ಮೇಗಿನಗುತ್ತು ನಿರೂಪಿಸಿದರು. ಸಲಹಾ ಸಮಿತಿಯ ಸದಸ್ಯ ಚಂದ್ರಶೇಖರ ಶೆಟ್ಟಿ ನಿಟ್ಟೆ ಅವರು ಸ್ವಾಗತಿಸಿದರು. ಸಂತೋಷ್‌ ಶೆಟ್ಟಿ ಎಣ್ಣೆಹೊಳೆ ವಂದಿಸಿದರು.

Advertisement

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಘದ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಶ್ರೀಧರ ಶೆಟ್ಟಿ ಕಲ್ಲಾಡಿ, ಪದಾಧಿಕಾರಿಗಳಾದ ಯಶವಂತ್‌ ಶೆಟ್ಟಿ ತಾಮಾರು, ವಿಶ್ವನಾಥ ಶೆಟ್ಟಿ ಹಿರಿಯಡ್ಕ, ಶರತ್‌ ಶೆಟ್ಟಿ ಉಳೆಪಾಡಿ, ತುಷಾರ್‌ ಶೆಟ್ಟಿ ಬಳಕುಂಜೆ, ಹರಿಶ್ಚಂದ್ರ ಆಚಾರ್ಯ, ಪ್ರಶಾಂತ್‌ ನಾಯಕ್‌, ಮಹಿಳಾ ವಿಭಾಗದ ಸುಜಾತಾ ಡಿ. ಶೆಟ್ಟಿ, ಉಮಾ ಎಸ್‌. ಶೆಟ್ಟಿ, ಶಶಿಕಲಾ ಎ. ಶೆಟ್ಟಿ, ಪ್ರಿಯಾ ಎಚ್‌. ದೇವಾಡಿಗ, ರಂಜಿತಾ ಆರ್‌. ಶೆಟ್ಟಿ, ರಮಾ ಎಸ್‌. ಶೆಟ್ಟಿ, ಆಶಾ ಪೂಜಾರಿ, ವರ್ಷಾ ವೈ.  ಗೌಡ, ಸಲಹಾ ಸಮಿತಿಯ ಶಕುಂತಲಾ ಆರ್‌. ಶೆಟ್ಟಿ, ನಯನಾ ಸಿ. ಶೆಟ್ಟಿ, ಗೀತಾ ಬಿ. ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 
ತುಳುನಾಡಿನ ಸಾಂಪ್ರದಾಯಿಕ ಪದ್ಧತಿಯಲ್ಲಿ ಭೋಜನದ ವ್ಯವಸ್ಥೆಯನ್ನು ಕಾರ್ಯಕ್ರಮದ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.

ತುಳುನಾಡಿನ ವಿವಿಧ ಪ್ರದೇಶಗಳಿಂದ ಆಗಮಿಸಿ ಪುಣೆಯಲ್ಲಿ ನೆಲೆಸಿದ ತುಳುವರೆಲ್ಲರೂ ಬೃಹತ್‌ ಸಂಖ್ಯೆ ಯಲ್ಲಿ ತುಳುಕೂಟದ ಒಂದೇ ಛತ್ರದಡಿಯಲ್ಲಿ ಸೇರಿ ಸಂಭ್ರಮಿಸುವುದನ್ನು ಕಂಡಾಗ ಹೃದಯತುಂಬಿ ಬಂದು ನನ್ನ ಬಾಲ್ಯದ ದಿನಗಳ ನೆನಪಾಯಿತು. ನಮ್ಮ ಮಾತೃಭಾಷೆಯ ಪ್ರಭಾವದಿಂದ ಇದು ಸಾಧ್ಯ ವಾಗಿದೆ. ಮಾತೃಭಾಷೆ  ನಮಗೆ ಉಸಿರಿದ್ದಂತೆ. ಹಿಂದಿನ ಕಾಲದಲ್ಲಿ ಕೂಡು ಕುಟುಂಬ ಪದ್ಧತಿಯಲ್ಲಿ ಬೆಳೆದು ಹಿರಿಯರ ಬಗ್ಗೆ ಅಪಾರ ಗೌರವ, ಹಿರಿ ಕಿರಿಯರೊಂದಿಗೆ ಹೊಂದಾಣಿಕೆಯ ಬದುಕು, ಪ್ರೀತಿ ವಿಶ್ವಾಸ, ಸಂಬಂಧಗಳ ಬೆಸುಗೆ ಇತ್ತು. ಆದರೆ ಇಂದಿನ ದಿನಗಳಲ್ಲಿ ಕುಟುಂಬಗಳು ಕಿರಿದಾಗುತ್ತಾ ನಮ್ಮೊಳಗಿನ ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿದ್ದು, ಹೆತ್ತವರನ್ನು ವೃದ್ಧಾಶ್ರಮಗಳಿಗೆ ಸೇರಿಸುವಂತಹ ಮನಃಸ್ಥಿತಿ ಆಗುತ್ತಿರುವುದು ದೊಡ್ಡ ದೌರ್ಭಾಗ್ಯವಾಗಿದೆ. ಆದ್ದರಿಂದ ಹೀಗಾಗದಂತೆ ಮಾಡಲು ಜಾಗೃತಿ ಮೂಡಿಸುವ ಕೆಲಸ ನಮ್ಮಿಂದಾಗಬೇಕಾಗಿದೆ 
– ಮನೋಹರ್‌ ಪ್ರಸಾದ್‌ (ಮುಖ್ಯಸ್ಥರು: ಉದಯವಾಣಿ ಮಂಗಳೂರು ಸುದ್ದಿ ವಿಭಾಗ)

ಇಂದು ನನ್ನ ತಾಯಿ ಮನೆಗೆ ಬಂದಂತಹ ಸಂತಸದ ಅನುಭವ ನನ್ನದಾಗಿದೆ. ಹಿಂದಿನ ದಿನಗಳಲ್ಲಿ ಹೆಣ್ಣಿಗೆ ಸಮಾಜದಲ್ಲಿ  ಮುಂದೆ ಬರಲು ಅವಕಾಶವಿರಲಿಲ್ಲ. ಆದರೆ ಇಂದು ಹೆಣ್ಣಿಗೆ ಹೆಚ್ಚಿನ ಸಾಮಾಜಿಕ ಸ್ಥಾನಮಾನ, ಗೌರವಗಳು ದೊರೆಯುತ್ತಿದ್ದು ವಿಪುಲ ಅವಕಾಶಗಳಿವೆ. ತುಳುನಾಡ ಪರಂಪರೆಯೇ ನಮ್ಮ ಸಂಸ್ಕೃತಿಯ ಮೂಲವಾಗಿದ್ದು, ನಮ್ಮ ಮಕ್ಕಳನ್ನು ನಮ್ಮ ಊರಿಗೆ ಕರೆದುಕೊಂಡು ಹೋಗಿ ನಮ್ಮ ತುಳು ಭಾಷೆ, ಸಂಸ್ಕಾರಗಳ ಪರಿಚಯವನ್ನು ಪ್ರತಿಯೊಬ್ಬ ತಂದೆತಾಯಿಗಳೂ ಮಾಡಬೇಕಾಗಿದೆ 
– ಸುಜಾತಾ ಸದಾನಂದ ಶೆಟ್ಟಿ  ( ನಗರ ಸೇವಕಿ ಪುಣೆ)

ಪುಣೆಯಲ್ಲಿ ಹೊಟೇಲ್‌ ಉದ್ಯಮ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ ಹೃದಯವಂತ ದಾನಿಗಳು ಕಷ್ಟ ಸುಖಗಳಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆಯೊಂದಿಗೆ ತುಳುಕೂಟದ ಇಂದಿನ ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದ್ದಾರೆ. ಅವರಿಗೆಲ್ಲರಿಗೂ ತುಳುಕೂಟ ಸದಾ ಚಿರಋಣಿಯಾಗಿದೆ. ಅಂತೆಯೇ ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ, ಪಿಂಪ್ರಿ -ಚಿಂಚಾÌಡ್‌ ಪ್ರಾದೇಶಿಕ ಸಮಿತಿ ಹಾಗೂ ಪುಣೆಯ ಸರ್ವ ತುಳುನಾಡ ಬಾಂಧವರು ವಿವಿಧ ರೀತಿಗಳಲ್ಲಿ ಸಂಘಕ್ಕೆ ಸಹಕಾರ ನೀಡಿದ್ದು ಎಲ್ಲರಿಗೂ ಕೃತಜ್ಞತೆಗಳು. ನಮ್ಮ ತುಳು ಭಾಷೆ, ಸಾಂಸ್ಕೃತಿಕ ಪರಂಪರೆಯನ್ನು ಯುವಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಎಲ್ಲ ತುಳುವರಿಗೆ ಇರಬೇಕಾಗಿದೆ. ಮುಂದೆಯೂ ಪುಣೆಯಲ್ಲಿರುವ ಪ್ರತಿಯೊಬ್ಬ ತುಳುವರೂ ನಮ್ಮದೇ ಸಂಘವೆಂಬ ನೆಲೆಯಲ್ಲಿ ಸಂಘದೊಂದಿಗೆ ಕೈಜೋಡಿಸಿ ಸಹಕಾರ ನೀಡಬೇಕು 
– ತಾರಾನಾಥ ಕೆ. ರೈ ಮೇಗಿನಗುತ್ತು (ಅಧ್ಯಕ್ಷರು: ತುಳು ಕೂಟ ಪುಣೆ)

ಜೀವಮಾನದಲ್ಲಿ ನನಗೆ ಬಹಳಷ್ಟು ಸಮ್ಮಾನಗಳು ಸಂದಿವೆ. ಆದರೆ ನಮ್ಮದೇ ಸಂಘಟನೆಯ ತುಳುನಾಡ ಬಾಂಧವರ ಪ್ರೀತಿಯ ಸಮ್ಮಾನ ಅರ್ಥಪೂರ್ಣವಾಗಿದ್ದು ಎಲ್ಲಕ್ಕಿಂತ ಮಿಗಿಲಾದುದು. ತುಳುಕೂಟದ ತನಗೆ ಅಪಾರ ಅಭಿಮಾನವಿದ್ದು ಸಂಘದ ಯಾವುದೇ ಕಾರ್ಯಕ್ಕೆ ನೆರವು ನೀಡಲು ಸಿದ್ಧನಿದ್ದೇನೆ. ಅದೇ ರೀತಿ ಪ್ರತಿಯೊಬ್ಬರೂ ನಮ್ಮದೇ ಸಂಘವೆಂಬ ಅಭಿಮಾನದಿಂದ ಸಹಕಾರ ನೀಡಿ ಸಂಘವನ್ನು ಇನ್ನಷ್ಟು ಬಲಪಡಿಸಬೇಕಾದ ಅಗತ್ಯವಿದೆ. ನಮ್ಮ ನಾಡಿನ ಭವ್ಯ ಪರಂಪರೆಯನ್ನು ಉಳಿಸುವಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯವೆಸಗೋಣ                                                –  ಸದಾನಂದ ಶೆಟ್ಟಿ  (ಸಮ್ಮಾನಿತರು)

Advertisement

Udayavani is now on Telegram. Click here to join our channel and stay updated with the latest news.

Next