ಪುಣೆ: ಪೋರ್ಶೆ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಕಾರು ಚಲಾಯಿಸುತ್ತಿದ್ದ ಬಾಲಕನ ರಕ್ತದ ಮಾದರಿ ಮತ್ತು ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಇಲ್ಲಿನ ಸಸೂನ್ ಜನರಲ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಪುಣೆ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಬಂಧಿತರಲ್ಲಿ ಆಸ್ಪತ್ರೆಯ ಫೋರೆನ್ಸಿಕ್ ವಿಭಾಗದ ಮುಖ್ಯಸ್ಥರೂ ಸೇರಿದ್ದಾರೆ ಎನ್ನಲಾಗಿದೆ.
ಬಂಧಿತರನ್ನು ಡಾ. ಅಜಯ್ ತಾವರೆ ಮತ್ತು ಶ್ರೀಹರಿ ಹಾರ್ನರ್ ಎನ್ನಲಾಗಿದ್ದು. ಸದ್ಯ ಈ ಪ್ರಕರಣವನ್ನು ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೇ 19 ರ ಮುಂಜಾನೆ ಅಪ್ರಾಪ್ತ ಬಾಲಕನೊಬ್ಬ ಚಲಾಯಿಸುತ್ತಿದ್ದ ಎನ್ನಲಾದ ಪೋರ್ಶೆ ಕಾರು ಡಿಕ್ಕಿ ಹೊಡೆದು ಇಬ್ಬರು ಟೆಕ್ಕಿಗಳು ಮೃತಪಟ್ಟಿದ್ದರು. ಅಪಘಾತದ ಸಮಯದಲ್ಲಿ ಕಾರು ಚಲಾಯಿಸುತ್ತಿದ್ದ ಬಾಲಕ ಕುಡಿದಿದ್ದರು ಎಂದು ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರಂಭದಲ್ಲಿ ಜುವೆನೈಲ್ ಜಸ್ಟಿಸ್ ಬೋರ್ಡ್ ಬಾಲಕನಿಗೆ ಜಾಮೀನು ನೀಡಿತು, ಆದರೆ ಪ್ರಕರಣದ ಕುರಿತು ಆಕ್ರೋಶ ಪ್ರತಿಭಟನೆಗಳು ಹೆಚ್ಚಾದಂತೆ ಮತ್ತೆ ಜಾಮೀನು ಆದೇಶ ಹಿಂಪಡೆದು ರಸ್ತೆ ಅಪಘಾತಗಳ ಬಗ್ಗೆ ಪ್ರಬಂಧ ಬರೆಯುವಂತೆ ಹೇಳಿದೆ, ಇದಾದ ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಬಾಲಕನ ತಂದೆ ಹಾಗೂ ಅಜ್ಜನನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ನಡುವೆ ಅಪಘಾತದ ಸಮಯದಲ್ಲಿ ಬಾಲಕ ಮದ್ಯಪಾನ ಮಾಡಿದ್ದ ಎಂದು ಹೇಳಲಾಗಿದ್ದು ಇದರ ಕುರಿತು ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು ಇದರ ನಡುವೆ ಪ್ರಯೋಗಾಲಯದ ವೈದ್ಯರು ಬಾಲಕನ ರಕ್ತದ ಮಾದರಿಯನ್ನು ಕಸದ ಬುಟ್ಟಿಗೆ ಎಸೆದು ಬೇರೊಬ್ಬ ಬಾಲಕನ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿರುವುದು ಬೆಳಕಿಗೆ ಬಂದಿದೆ ಇದಕ್ಕೆ ಸಂಬಂಧಿಸಿ ಇಬ್ಬರು ವೈದ್ಯರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Belthangady; ಮುಂದುವರೆದ ರೇವಣ್ಣ ಟೆಂಪಲ್ ರನ್: ಧರ್ಮಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ