Advertisement

Pune: ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ: ಪ್ರವೀಣ್‌ ಶೆಟ್ಟಿ ಪುತ್ತೂರು

12:17 PM Apr 13, 2023 | Team Udayavani |

ಪುಣೆ: ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ನೆಮ್ಮದಿಗಾಗಿ ಆಟೋಟ ಸ್ಪರ್ಧೆಗಳು ಅನಿವಾರ್ಯ. ಪುಣೆಯಂತಹ ಮಹಾ ನಗರದಲ್ಲಿ ನೆಲೆಸಿರುವ ಹೆಚ್ಚಿನ ತುಳು – ಕನ್ನಡಿಗ ಯುವ ಜನತೆ ಕ್ರಿಕೆಟ್‌ನಲ್ಲಿ ಭಾಗಿಗಳಾಗುತ್ತಾರೆ. ಇಲ್ಲಿ ಜಾತಿ, ಮತ ಭೇದ ವಿಲ್ಲದೆ ಪ್ರತಿವರ್ಷವೂ ಕ್ರಿಕೆಟ್‌ ಪಂದ್ಯಾಟ ಆಯೋಜಿಸುತ್ತಿರುವ ಸಾಯಿ ಕ್ರಿಕೆಟರ್ಸ್‌ನ ವರು ಒಂದು ಸಂಸ್ಥೆಯಾಗಿ ದುಡಿಯುತ್ತಿದ್ದಾರೆ. ತುಳು-ಕನ್ನಡಿಗ ಕ್ರಿಕೆಟ್‌ ಪಟುಗಳನ್ನು ಸಂಘಟಿತರನ್ನಾಗಿಸಿ ದೊಡ್ಡ ಮಟ್ಟದ ಪಂದ್ಯಾಟ ಆಯೋಜಿಸಿರುವುದು ಅಭಿನಂದನೀಯ.

Advertisement

ಪಂದ್ಯಾಟದಲ್ಲಿ ಸೋಲು-ಗೆಲುವ ಮುಖ್ಯವಲ್ಲ. ಶಿಸ್ತುಬದ್ಧವಾಗಿ ಪಾಲ್ಗೊಳ್ಳುವುದು ಬಹಳ ಮುಖ್ಯ. ವಸಂತ್‌ ಶೆಟ್ಟಿ ಮತ್ತು ಪ್ರಶಾಂತ್‌ ಶೆಟ್ಟಿಯವರು ಈ ಕ್ರಿಕೆಟ್‌ ಪಂದ್ಯಾಟವನ್ನು ಆಯೋಜಿಸಿದ್ದು, ಭಾಗವಹಿಸಿದ ಎಲ್ಲ ತಂಡಗಳಿಗೆ ಅಭಿನಂದನೆಗಳು ಎಂದು ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು ತಿಳಿಸಿದರು.

ನಗರದ ಸಾಯಿ ಕ್ರಿಕೆಟರ್ಸ್‌ ವತಿಯಿಂದ ದಿ| ವಾರಿಜಾ ಆನಂದ್‌ ಶೆಟ್ಟಿ ಸ್ಮರಣಾರ್ಥ ಎ. 8ರಂದು ಪಾಷಣ್‌ನ ಎನ್‌. ಸಿ. ಎಲ್‌. ಮೈದಾನದಲ್ಲಿ ಆಯೋಜಿಸಲಾಗಿದ್ದ ಸಾಯಿ ಟ್ರೋಫಿ ಕ್ರಿಕೆಟ್‌ ಪಂದ್ಯಾಟದ ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ತುಳು-ಕನ್ನಡಿಗರು ಇಂತಹ ಪಂದ್ಯಾಟಗಳಲ್ಲಿ ಪಾಲ್ಗೊಳ್ಳುವುದರಿಂದ ಒಗ್ಗಟ್ಟು ಇಮ್ಮಡಿಯಾಗುತ್ತದೆ ಎಂದರು.

ಪುಣೆ ಬಂಟರ ಸಂಘ ದಕ್ಷಿಣ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್‌ ಶೆಟ್ಟಿ ಅವರು ತೆಂಗಿನ ಕಾಯಿ ಒಡೆದು, ಬ್ಯಾಟಿಂಗ್‌ ಮಾಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್‌ ಪೂಜಾರಿ ಕಡ್ತಲ, ನಿವೃತ್ತ ಕಸ್ಟಮ್‌ ಅಧಿಕಾರಿ ಧನಂಜಯ ವೈದ್ಯ, ಪುಣೆ ಬಿಲ್ಲವ ಸಂಘದ ಕಟ್ಟಡ ಸಮಿತಿಯ ಕೋಶಾಧಿಕಾರಿ ಗಿರೀಶ್‌ ಪೂಜಾರಿ, ಬಿಲ್ಲವ ಸಂಘದ ಕ್ರೀಡಾಧ್ಯಕ್ಷ ಸುದೀಪ್‌ ಪೂಜಾರಿ
ಎಳ್ಳಾರೆ, ಸಾಯಿ ಕ್ರಿಕೆಟರ್ಸ್‌ನ ವಸಂತ್‌ ಶೆಟ್ಟಿ ಉಪಸ್ಥಿತರಿದ್ದರು. ಅತಿಥಿಗಳನ್ನು ಸಾಯಿ ಕ್ರಿಕೆಟರ್ಸ್‌ನ ಪದಾಧಿಕಾರಿಗಳು ಪುಷ್ಪಗುಚ್ಛವನ್ನಿತ್ತು ಗೌರವಿಸಿದರು.

ಪಂದ್ಯಾಟದಲ್ಲಿ ವಿಜೇತ ಪ್ರಶಸ್ತಿಯನ್ನು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ದ್ವಿತೀಯ ಪ್ರಶಸ್ತಿಯನ್ನು ಮಸಕ-ಎ ಮತ್ತು ತೃತೀಯ ಸ್ಥಾನವನ್ನು ಕರಾಡಿ ಪ್ಯಾಂಥರ್ಸ್‌ ತಂಡಗಳು ಪಡೆದವು. ವಿಜೇತ ತಂಡ ಗಳಿಗೆ ಅತಿಥಿಗಳು ಟ್ರೋಫಿ ಮತ್ತು ನಗದು ಬಹುಮಾನ ನೀಡಿ ಅಭಿನಂದಿಸಿದರು. ವೈಯಕ್ತಿಕ ಪ್ರಶಸ್ತಿ ಪಡೆದ ಆಟಗಾರರನ್ನು ಸತ್ಕರಿಸಲಾಯಿತು.

Advertisement

ಸೀಮಿತ ಓವರ್‌ಗಳ ಪಂದ್ಯಾಟದಲ್ಲಿ ಸುಮಾರು 10 ತಂಡಗಳು ಭಾಗವಹಿಸಿದ್ದವು. ಶಬರಿ-ಎ ಮತ್ತು ಶಬರಿ-ಬಿ, ಮಸಕ-ಎ ಮತ್ತು ಮಸಕ-ಬಿ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಇಲೆವನ್‌, ಕರಾಡಿ ಪ್ಯಾಂಥರ್ಸ್‌, ಪ್ರಸೆಂಟ್ಸ್‌ ಗ್ರೂಪ್‌, ಕೊಥ್ರೋಡ್‌ ವಾರಿಯರ್ಸ್‌, ಮೌಂಟ್‌ ಎನ್‌ ಹೈ, ಸನ್ನಿಧಿ ಸ್ಫೋರ್ಟ್ಸ್ ತಂಡಗಳು ಭಾಗವಹಿಸಿದ್ದವು.

ನಾಕೌಟ್‌ ಮಾದರಿಯಲ್ಲಿ ನಡೆದ ಪಂದ್ಯಾಟದ ಫೈನಲ್‌ ಪಂದ್ಯದಲ್ಲಿ ಮಸಕ-ಎ ತಂಡವನ್ನು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಇಲೆವನ್‌ ತಂಡ ಸೋಲಿಸಿ 25,000 ರೂ. ನಗದು ಬಹುಮಾನ ಗಳಿಸಿತು. ದ್ವಿತೀಯ ಸ್ಥಾನ ಪಡೆದ ಮಸಕ ತಂಡವು 15,000 ರೂ. ಹಾಗೂ ತೃತೀಯ ಸ್ಥಾನ ಗಳಿಸಿದ ಕರಾಡಿ ಪ್ಯಾಂಥರ್ಸ್‌ ಟ್ರೋμಯನ್ನು ಪಡೆಯಿತು. ಪುಣೆಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಶುಭ ಹಾರೈಸಿದರು. ಅತಿಥಿಗಳನ್ನು ಸಾಯಿ ಕ್ರಿಕೆಟರ್ಸ್‌ನ ವಸಂತ್‌ ಶೆಟ್ಟಿ ಮತ್ತು ಪ್ರಶಾಂತ್‌ ಶೆಟ್ಟಿ ಹಾಗೂ ಪದಾಧಿಕಾರಿಗಳು ಗೌರವಿಸಿದರು. ಸಾಯಿ ಕ್ರಿಕೆಟರ್ಸ್‌ನ ಪದಾಧಿಕಾರಿಗಳು ಪಂದ್ಯಾಟದ ಯಶಸ್ಸಿಗೆ ಸಹಕರಿಸಿದರು. ಸಂತೋಷ್‌ ಸುವರ್ಣ ನಿರೂಪಿಸಿ, ವಂದಿಸಿದರು.

ಯುವಕರಿಗೆ ಪ್ರೋತ್ಸಾಹ ನೀಡುತ್ತಿರುವ ಸಾಯಿ ಕ್ರಿಕೆಟರ್ಸ್‌ನ ವಸಂತ್‌ ಶೆಟ್ಟಿ ಸಮರ್ಥ ಸಂಘಟಕರಾಗಿದ್ದಾರೆ. ಶಿಸ್ತುಬದ್ಧವಾಗಿ ಪಂದ್ಯಾಟವನ್ನು ಆಯೋಜಿಸಿರುವುದು ಅಭಿನಂದನೀಯ. ಈ ಬಾರಿ ತಮ್ಮ ತಾಯಿಯ ಸ್ಮರಣೆಯಲ್ಲಿ ವಿಶ್ವನಾಥ್‌ ಶೆಟ್ಟಿ, ವಸಂತ್‌ ಶೆಟ್ಟಿ, ಪ್ರಶಾಂತ್‌ ಶೆಟ್ಟಿ ಅವರು ಟ್ರೋಫಿಯನ್ನಿರಿಸಿ ಗೌರವ ಸಲ್ಲಿಸಿರುವುದು ಅನುಕರಣೀಯ. ಮುಂದೆಯೂ ತಮ್ಮ ಸಂಸ್ಥೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಪಂದ್ಯಾಟಗಳನ್ನು ಆಯೋಜಿಸಲಿ. ಅದಕ್ಕೆ ನಮ್ಮೆಲ್ಲರ ಸಂಪೂರ್ಣ ಸಹಕಾರ ಸದಾಯಿದೆ.
-ಶೇಖರ್‌ ಶೆಟ್ಟಿ, ಕಾರ್ಯಾಧ್ಯಕ್ಷ, ಬಂಟರ ಸಂಘ ದಕ್ಷಿಣ ವಲಯ ಪ್ರಾದೇಶಿಕ ಸಮಿತಿ

ಪುಣೆಯಲ್ಲಿ ಕ್ರಿಕೆಟ್‌ ಪಂದ್ಯಾಟದ ಆಯೋಜನೆಯಲ್ಲಿ ಸಾಯಿ ಕ್ರಿಕೆಟರ್ಸ್‌ನ ವಸಂತ್‌ ಶೆಟ್ಟಿಯವರ ಹೆಸರು ಮುಂಚೂಣಿಯಲ್ಲಿದೆ. ಈ ವರ್ಷ ತನ್ನ ತಾಯಿಯ ಸ್ಮರಣೆಯಲ್ಲಿ ಪಂದ್ಯಾಟವನ್ನು ಆಯೋಜಿಸಿ ಯುವ ಪೀಳಿಗೆಯಲ್ಲಿ ಮಾತೃ ಪ್ರೇಮವನ್ನು ಬೆಳೆಸಿದ್ದಾರೆ. ತನ್ನದೇ ನಿರ್ಧಾರದಂತೆ ತನ್ನ ಆಟಗಾರರನ್ನು ಸೇರಿಸಿಕೊಂಡು ಇತರ ಸಂಸ್ಥೆಗಳ ಹೆಸರಿನಲ್ಲಿ ತಂಡವನ್ನು ರಚಿಸಿ ಎಲ್ಲರಿಗೂ ಪ್ರೋತ್ಸಾಹ ನೀಡುವ ಇವರ ಕಾರ್ಯ ಮೆಚ್ಚುವಂತದ್ದು. ಮುಂದಿನ ವರ್ಷಗಳಲ್ಲಿ ಪಂದ್ಯಾಟ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಶಿಸ್ತುಬದ್ಧವಾಗಿ ಆಯೋಜಿಸುವಲ್ಲಿ ನಮ್ಮೆಲ್ಲರ ಸಹಕಾರ ಇದೆ.
-ವಿಶ್ವನಾಥ್‌ ಪೂಜಾರಿ ಕಡ್ತಲ ಅಧ್ಯಕ್ಷ, ಬಿಲ್ಲವ ಸೇವಾ ಸಂಘ ಪುಣೆ

ಚಿತ್ರ-ವರದಿ: ಹರೀಶ್‌ ಮೂಡಬಿದ್ರೆ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next