ಪುಣೆ: ಇಂದಿನ ನಾಗರಿಕ ಸಮಾಜದಲ್ಲಿ ಉತ್ತಮ ವಿದ್ಯಾವಂತರಿಗೆ ತಮ್ಮ ವಿದ್ಯಾಭ್ಯಾಸದ ಸ್ಥಾನಮಾನಕ್ಕೆ ಸಮಾನಾದ ಉತ್ತಮ ಶ್ರೇಣಿಯ ಸರಕಾರಿ ಅಥವಾ ಖಾಸಗಿ ಹುದ್ದೆಗಳು ಲಭಿಸುತ್ತದೆ. ಆದರೆ ಉನ್ನತ ಮಟ್ಟದ ವಿದ್ಯಾಭ್ಯಾಸ ಪಡೆಯುವ ಅರ್ಹತೆ ನಮ್ಮ ಯುವಕ ಯುವತಿಯರಲ್ಲಿ ಇರಬೇಕು. ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ, ಉತ್ತಮ ಮಾರ್ಗದರ್ಶನದೊಂದಿಗೆ ವಿದ್ಯಾವಂತರನ್ನಾಗಿ ಮಾಡುವ ಕರ್ತವ್ಯ ತಮ್ಮ ಮೇಲಿದೆ. ಉತ್ತಮ ಶ್ರೇಣಿಯ ಅಂಕ ಪಡೆದ ಬಡ ಮಕ್ಕಳಿಗೆ ಮುಂದಿನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಜವಾಬ್ದಾರಿ ಪಾಲಕರು ಮತ್ತು ಆಯಾಯ ಸಮಾಜಕ್ಕೆ ಸೇರಿದ ಸಂಘ ಸಂಸ್ಥೆಗಳಿಗೆ ಸೇರಿದೆ. ಈ ಉದ್ದೇಶದಿಂದ ಪುಣೆ ಬಿಲ್ಲವ ಸಂಘವು ಪ್ರತಿ ವರ್ಷವೂ ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಉಚಿತ ಪುಸ್ತಕ ವಿತರಣೆಯನ್ನು ಮಾಡುತ್ತಿದೆ. ಅಲ್ಲದೆ ಉತ್ತಮ ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ಸಂಘದ ವಾರ್ಷಿಕ ಸಮಾರಂಭದಲ್ಲಿ ನೀಡುತ್ತಾ ಬಂದಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಪುಣೆ ಬಿಲ್ಲವ ಸಂಘದ ಅಧ್ಯಕ್ಷ ಶೇಖರ್ ಟಿ. ಪೂಜಾರಿ ನುಡಿದರು.
ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಜೂ. 5 ರಂದು ಸಂಜೆ ಸೋಮವಾರ ಪೇಟೆಯ ಸಿದ್ಧಿವಿನಾಯಕ ಕೇಸರ್‌ನಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಉಚಿತ ಪುಸ್ತಕ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಸಮಾಜದ ಸೇವಾಕರ್ತರು, ಉದ್ಯಮಿಗಳು ಇಂತಹ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕಾದ ಜವಾಬ್ದಾರಿ ಹೊಂದಿರಬೇಕು. ಆಗ ನಮ್ಮ ಸಮಾಜದ ಮಕ್ಕಳಲ್ಲಿ ಉತ್ಸಾಹ ತುಂಬಿ ಉತ್ತಮ ವ್ಯಾಸಂಗ ಮಾಡಲು ಸಹಕಾರಿಯಾಗಬಲ್ಲದು. ಸಮಾಜದ ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣ ಪಡೆದರೆ, ಉನ್ನತ ಪದವಿಯ ಸರಕಾರಿ ಹುದ್ದೆಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಸ್ಥಾನ ಪಡೆಯಲು ಸಹಾಯವಾಗುತ್ತದೆ ಎಂದರು.
ಸಂಘದ ಉಪಾಧ್ಯಕ್ಷರುಗಳಾದ ವಿಶ್ವನಾಥ್ ಪೂಜಾರಿ ಕಡ್ತಲ ಮತ್ತು ಜಯ ಆರ್. ಪೂಜಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಸರೋಜಿನಿ ಡಿ. ಬಂಗೇರ ಮತ್ತು ಪದಾಧಿಕಾರಿಗಳು ಶ್ರೀ ನಾರಾಯಣಗುರು ಸ್ವಾಮೀಜಿ ಅವರ ಭಾವಚಿತ್ರಕ್ಕೆ ಆರತಿ ಬೆಳಗಿಸಿ, ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜೊತೆ ಕಾರ್ಯದರ್ಶಿ ಸುಂದರ ಕರ್ಕೇರ ಅವರು ಪ್ರಾಸ್ತಾವಿಕವಾಗಿ ಈ ಪುಸ್ತಕ ವಿತರಣೆ ಕಾರ್ಯಕ್ರಮದ ಧ್ಯೇಯ ಉದ್ದೇಶಗಳ ಬಗ್ಗೆ ಸಭೆಯಲ್ಲಿ ತಿಳಿಸಿದರು. ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರುಗಳು ಮತ್ತು ಪದಾಧಿಕಾರಿಗಳಾದ ಕೋಶಾಧಿಕಾರಿ ಸುದರ್ಶನ್ ಡಿ. ಸುವರ್ಣ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಶಿವರಾಂ ಡಿ. ಪೂಜಾರಿ, ಉತ್ತಮ್ ಪಣಿಯಾಡಿ, ಎಸ್. ಕೆ. ಪೂಜಾರಿ, ಕರುಣಾಕರ ಶಾಂತಿ, ಕ್ರೀಡಾ ಸಮಿತಿಯ ಕಾರ್ಯದರ್ಶಿ ವಸಂತ ಎಸ್. ಪೂಜಾರಿ, ಯುವ ವಿಭಾಗದ ಗುರುರಾಜ್ ಪೂಜಾರಿ, ಮಹಿಳಾ ವಿಭಾಗದ ಪ್ರಮುಖರಾದ ಸುನಿತಾ ಎಸ್. ಪೂಜಾರಿ, ಭಾರತಿ ಎಸ್. ಪೂಜಾರಿ, ಪ್ರಿಯಾ ಯು. ಪಣಿಯಾಡಿ, ಮಾಲತಿ ಎಸ್. ಪೂಜಾರಿ, ರೇವತಿ ಪೂಜಾರಿ, ನೂತನ್ ಸುವರ್ಣ, ವನಿತಾ ಕರ್ಕೇರ, ಲಲಿತಾ ಪೂಜಾರಿ, ಲಲಿತಾ ಅಂಚನ್, ಮೀರಾ ಎಸ್. ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಮಕ್ಕಳಿಗೆ ಪುಸ್ತಕ ವಿತರಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಘದ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪುಸ್ತಕ ವಿತರಣೆಯು ಜೂನ್ 5 ರಿಂದ ಜೂನ್ 12ರ ತನಕ ಸಂಘದ ಕಚೇರಿಯಲ್ಲಿ ಪ್ರತಿ ದಿನ ಸಂಜೆ 5 ರಿಂದ 7ರ ತನಕ ನಡೆಯಲಿದ್ದು, ಇದರ ಪ್ರಯೋಜನವನ್ನು ಮಕ್ಕಳು ಪಡೆಯಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು. ಸುಂದರ್ ಕರ್ಕೇರ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದ ನಂತರ ಲಘು ಉಪಾಹಾರ ನಡೆಯಿತು.
ಚಿತ್ರ-ವರದಿ : ಹರೀಶ್ ಮೂಡಬಿದ್ರೆ