ಪುಣೆ : ಸಾಮಾಜಿಕ ಜಾಲತಾಣಗಳು ಇಂದು ಸಣ್ಣ-ಪುಟ್ಟ, ತೆರೆ-ಮರೆಯ ಕಲಾವಿದರನ್ನು ಮುನ್ನೆಲೆಗೆ ತರುವ ಕೆಲಸವನ್ನು ಮಾಡುತ್ತಿವೆ. ಯಾವುದೋ ಒಂದು ಸಣ್ಣ ಊರಿನ ಜಾನಪದ ಕಲಾವಿದ ತನ್ನ ಕಲಾ ಪ್ರದರ್ಶನದಿಂದ ದೊಡ್ಡ ದೊಡ್ಡ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳು.
ಇನ್ನು ಕೆಲವು ಕಲಾವಿದರು ಹವ್ಯಾಸಕ್ಕಾಗಿ ಸಂಗೀತ, ನೃತ್ಯದಲ್ಲಿ ತೊಡಗಿದ್ದು, ಅಂತಹ ಕಲೆಗಳು ಕೂಡ ಮೆಚ್ಚುಗೆಗೆ ಪಾತ್ರವಾಗಿ ವೈರಲ್ ಆಗುತ್ತಿವೆ. ಇದಕ್ಕೆ ಸಾಕ್ಷಿಯಾಗಿದ್ದಾರೆ ಮಹಾರಾಷ್ಟ್ರದ ಪುಣೆಯ ಒಬ್ಬ ಆಟೋ ಚಾಲಕ.
ಹೌದು, ಪುಣೆಯ ಬರಮತಿ ಪ್ರದೇಶದಲ್ಲಿ ಆಟೋ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿರುವ ಬಾಬಾಜಿ ಕಂಬ್ಲೆ ಎಂಬುವವರು ಲಾವಣಿ ನೃತ್ಯವನ್ನು ಮಾಡಿ ನೆಟ್ಟಿಗರ ಗಮನೆ ಸೆಳೆಯುತ್ತಿದ್ದಾರೆ. ಆಟೋ ನಿಲ್ದಾಣದಲ್ಲಿ ‘ಮಾಲಾ ಜೌ ದಯಾನಾ ಘಾರಿ’ ಹಾಡಿಗೆ ನೃತ್ಯ ಮಾಡಿರುವ ವಿಡಿಯೋವನ್ನು ದಯಾನಂದ ಕಂಬ್ಲೆ ಎಂಬುವವರು ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, ಮೆಚ್ಚುಗೆಗೆ ಕಾರಣವಾಗುತ್ತಿದೆ.
‘ಲಾವಣಿ’ಯು ಮಹಾರಾಷ್ಟ್ರದ ಜಾನಪದ ಕಲೆ. ಈ ಕಲೆಯಲ್ಲಿ ಹಾಡು ಮತ್ತು ನೃತ್ಯ ಇರುತ್ತದೆ. ಡೋಲು(ಡೋಲ್ಕಿ) ಬಾರಿಸುತ್ತ ಹಾಡಿನ ಜೊತೆ ನೃತ್ಯವನ್ನು ಮಾಡಲಾಗುತ್ತದೆ.