Advertisement

ಪಂಡಿತರೇ, ಉತ್ತರ ಕೊಡಿ!

06:00 AM May 24, 2018 | Team Udayavani |

ಥಾನೇಶ್ವರವನ್ನು ಆಳುತ್ತಿದ್ದ ದೊರೆ ಪಂಡಿತರನ್ನು ಗೌರವದಿಂದ ಕಾಣುತ್ತಿದ್ದ. ಅವರಿಗೆ ತನ್ನ ಆಸ್ಥಾನದಲ್ಲಿ ವಿಶೇಷ ಸ್ಥಾನಮಾನ ನೀಡಿದ್ದ. ಹೀಗಾಗಿ ಪಂಡಿತರಿಗೆ ತಮ್ಮ ಮೇಲೆ ಅತಿಯಾದ ಆತ್ಮವಿಶ್ವಾಸವಿತ್ತು. ರಾಜರೇ ತಮ್ಮ ಪರವಾಗಿರುವಾಗ ಯಾರಿಗೂ ಅಂಜುವ ಅಗತ್ಯವಿಲ್ಲವೆಂದು ಅವರು ಭಾವಿಸಿದ್ದರು. ಒಬ್ಬ ಅನಾಥ ಬಾಲಕ ಪಂಡಿತರ ಕಣ್ಣಿನಲ್ಲಿ ತುಳುಕುತ್ತಿದ್ದ ದರ್ಪವನ್ನು ಗಮನಿಸಿದ. ಮಾರನೇ ದಿನ ಆ ಬಾಲಕ ನೇರವಾಗಿ ದೊರೆಯ ಸಭೆಗೆ ಹೋದ. ಪಂಡಿತರು ನಡೆಸಿದ ವಾದ ವಿವಾದಗಳನ್ನು ದೂರದಲ್ಲೇ ಕುಳಿತುಕೊಂಡು ಆಲಿಸಿದ. ಬಳಿಕ ಪ್ರಜೆಗಳು ತಮಗೇನಾದರೂ ಸಂದೇಹವಿದ್ದರೆ ಕೇಳಬಹುದೆಂದು ದೊರೆ ಹೇಳಿದ. ಬಾಲಕ ಎದ್ದು ನಿಂತ. ಅವನ ಹರಿದ ಅಂಗಿ ಕಂಡು ಕಂಡು ಪಂಡಿತರು ತಿರಸ್ಕಾರದಿಂದ ನಗೆಯಾಡಿದರು. 

Advertisement

ಬಾಲಕ ಎಲ್ಲರಿಗೂ ಸಲ ವಂದಿಸಿ “ನನ್ನದೊಂದು ಪ್ರಶ್ನೆಯಿದೆ. ಬುದ್ಧಿ ಅನ್ನುವುದು ಎಲ್ಲಿರುತ್ತದೆ ಎಂದು ಪಂಡಿತರು ದಯವಿಟ್ಟು ತಿಳಿಸಬೇಕು’ ಎಂದು ಪ್ರಾರ್ಥಿಸಿದ. “ಅಷ್ಟೂ ತಿಳಿಯದೆ? ಬುದ್ಧಿ ವಾಸವಾಗಿರುವುದು ತಲೆಯಲ್ಲಿ’ ಎಂದ ಒಬ್ಬ ಪಂಡಿತ. “ಇಲ್ಲ, ಬುದ್ಧಿಯ ವಾಸ ಎದೆಯಲ್ಲಿ’ ಎಂದು ಇನ್ನೊಬ್ಬ ಪಂಡಿತ ಹೇಳಿದ. ಒಬ್ಬೊಬ್ಬರು ಒಂದೊಂದು ಬಗೆಯಿಂದ ಉತ್ತರಿಸಿದರು. ದೊರೆಗೆ ಸಮಾಧಾನವಾಗಲಿಲ್ಲ. ಬಾಲಕ, “ದೊರೆಗಳೇ, ಈ ಪಂಡಿತರ ನಡುವೆ ಕುಳಿತುಕೊಳ್ಳಲು ನನಗೆ ಅವಕಾಶ ದಯಪಾಲಿಸಿದರೆ ನಾನು ಇದಕ್ಕೆ ಸಮಾಧಾನ ಹೇಳುತ್ತೇನೆ’ ಎಂದು ಕೋರಿದ. 

ಪಂಡಿತರು ನಿಕೃಷ್ಟ ದಷ್ಟಿಯಿಂದ ಬಾಲಕನನ್ನು ನೋಡಿದರು. ಆದರೆ ದೊರೆ ಬಾಲಕನಿಗೆ ಪಂಡಿತರ ನಡುವೆ ಕುಳಿತುಕೊಳ್ಳಲು ಅವಕಾಶ ನೀಡಿದ. ಹುಡುಗ “ಎಂಥಾ ಕಠಿಣ ಪ್ರಶ್ನೆಯಿದ್ದರೂ ಸರಿಯಾದ ಉತ್ತರ ಬರುವುದು ತುಟಿಗಳಿಂದ. ಹೀಗಾಗಿ ಬುದ್ದಿ ಇರುವುದು ತುಟಿಗಳಲ್ಲಿ’ ಎಂದು ಹೇಳಿದ. ನಂತರ ಬಾಲಕ ಎರಡನೇ ಪ್ರಶ್ನೆ ಕೇಳಿದ “ಬುದ್ಧಿ ಏನನ್ನು ತಿನ್ನುತ್ತದೆ?’. ಪಂಡಿತರು “ತಲೆ ಹರಟೆಯ ಪ್ರಶ್ನೆಗಳನ್ನು ಕೇಳಬೇಡ’ ಎಂದು ಸಿಟ್ಟು ಮಾಡಿಕೊಂಡರು.

ಬಾಲಕ, “ಮಹಾರಾಜ, ಪಂಡಿತರಿಗಿಂತ ಎತ್ತರದ ಆಸನದಲ್ಲಿ ಕೂರಲು ಅವಕಾಶವಿತ್ತರೆ ಉತ್ತರ ಹೇಳುತ್ತೇನೆ’ ಎಂದನು. ರಾಜ ಒಪ್ಪಿಗೆಯಿತ್ತ. “ಬುದ್ಧಿ ಸಮಯವನ್ನು ತಿನ್ನುತ್ತದೆ. ಜಾಣನಾದವನು ಯಾವುದೇ ಕೆಲಸವನ್ನು ತುಂಬ ಹೊತ್ತು ಯೋಚಿಸದೆ ಮಾಡುವುದಿಲ್ಲ’ ಎಂದು ತನ್ನ ಉತ್ತರವನ್ನು ತಿಳಿಸಿದ. ಬಾಲಕನ ಜಾಣತನಕ್ಕೆ ರಾಜ ತಲೆದೂಗಿದ. “ಬುದ್ಧಿ ಎಲ್ಲಿ ಕುಳಿತುಕೊಳ್ಳುತ್ತದೆ?’ ಎಂದು ಬಾಲಕ ಪಂಡಿತರನ್ನು ಕೇಳಿದ. “ಇದೇನು ಹುಚ್ಚುತನ?! ಬುದ್ಧಿಗೆ ಕುಳಿತುಕೊಳ್ಳಲು ದೇಹವಿದೆಯೇ?’ ಎಂದು ಪಂಡಿತರು ಮರುಪ್ರಶ್ನಿಸಿದರು. “ನನಗೆ ಒಂದು ಕ್ಷಣ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಅವಕಾಶವಿತ್ತರೆ ಇದಕ್ಕೆ ಉತ್ತರ ಹೇಳಬಲ್ಲೆ’ ಎಂದ ಬಾಲಕ. ದೊರೆ ತನ್ನ ಸಿಂಹಾಸನದಲ್ಲಿ ಅವನನ್ನು ಕೂರಿಸಿ, “ಈಗ ಹೇಳು’ ಎಂದು ಬೆನ್ನು ತಟ್ಟಿದ. ಬಾಲಕ ಎಲ್ಲ ಪಂಡಿತರತ್ತ ಹೆಮ್ಮೆಯಿಂದ ನೋಡಿ “ಬುದ್ಧಿ ಮನಸ್ಸು ಮಾಡಿದರೆ ದೊರೆಯ ಸಿಂಹಾಸನದಲ್ಲಿ ಕೂರಬಲ್ಲುದು’ ಎಂದು ಹೇಳಿದ. ಪಂಡಿತರು ತಲೆತಗ್ಗಿಸಿದರು. ಪಂಡಿತರ ದರ್ಪ ಅಡಗಿಸಿದ ಬಾಲಕ ಮುಂದೆ ಮಹಾ ಪಂಡಿತನೆಂದು, ಕವಿಯೆಂದು ಪ್ರಸಿದ್ಧನಾಗಿ ಸಂಸ್ಕೃತದಲ್ಲಿ ಮೊತ್ತ ಮೊದಲ ಕಾದಂಬರಿಯನ್ನು ಬರೆದ ಬಾಣಭಟ್ಟ!

ಪ. ರಾಮಕೃಷ್ಣ ಶಾಸ್ತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next