Advertisement

ತುಂಬೆ ಡ್ಯಾಂ ಸನಿಹದ ಪಂಪ್‌ಹೌಸ್‌ ಅಪಾಯದಲ್ಲಿ

11:20 PM Feb 05, 2020 | mahesh |

ಮಂಗಳೂರು: ಮಂಗಳೂರಿಗೆ ನೀರುಣಿಸುವ ತುಂಬೆ ಡ್ಯಾಂನ ತಡೆ ಗೋಡೆಯ ಮಣ್ಣು ಮಳೆಗಾಲದಲ್ಲಿ ಕುಸಿದು ಬಿದ್ದ ಪರಿಣಾಮ ಸದ್ಯ ಡ್ಯಾಂ ಸನಿಹದಲ್ಲಿರುವ ಮುಖ್ಯ ಪಂಪ್‌ಹೌಸ್‌ ಅಪಾಯದಲ್ಲಿದೆ.  ಜಾಕ್‌ವೆಲ್‌, ಪಂಪ್‌ಹೌಸ್‌ ಇರುವ ಜಾಗದಿಂದ ಕೇವಲ 15-20 ಮೀಟರ್‌ ಅಂತರದಲ್ಲಿ ತಡೆಗೋಡೆಯ ಮಣ್ಣು ವರ್ಷದ ಹಿಂದಿನ ಮಳೆಗಾಲದಲ್ಲಿ ತಡೆ ಗೋ ಡೆಯ ಎರಡು ಭಾಗಗಳಲ್ಲಿ ಸುಮಾರು 5ರಿಂದ 6 ಮೀಟರ್‌ಗಳಷ್ಟು ಕುಸಿದಿತ್ತು. ಮರಳಿನ ಚೀಲದ ಮೂಲಕ ತಾತ್ಕಾಲಿಕವಾಗಿ ರಕ್ಷಣೆ ಮಾಡಲಾಗಿದೆ ಯಾದರೂ ಶಾಶ್ವತ ದುರಸ್ತಿ ಕಾರ್ಯ ಮಾತ್ರ ನಡೆದಿಲ್ಲ. ಇತ್ತೀಚಿನ ಮಳೆಯ ಸಂದರ್ಭದಲ್ಲಿಯೂ ಇದೇ ತಾತ್ಕಾಲಿಕ ವ್ಯವಸ್ಥೆಯಲ್ಲಿಯೇ ದಿನದೂಡಲಾಗಿತ್ತು. ಅದೃಷ್ಟವಶಾತ್‌ ಯಾವುದೇ ಅಪಾಯವೂ ಸಂಭವಿಸಿರಲಿಲ್ಲ.

Advertisement

ಮತ್ತಷ್ಟು ಕುಸಿತ ಭೀತಿ
ಒಂದು ವರ್ಷದಿಂದ ಈ ಬಗ್ಗೆ ಅಧಿಕಾರಿಗಳು ಸರಕಾರದ ಗಮನಕ್ಕೆ ತಂದಿದ್ದರೂ ಕೂಡ ಶಾಶ್ವತ ದುರಸ್ತಿಗೆ ಯಾರೂ ಮನಸ್ಸು ಮಾಡಿಲ್ಲ. ಹೀಗಾಗಿ ಯಾವುದೇ ಕ್ಷಣದಲ್ಲಿ ತಡೆಗೋಡೆ ಮತ್ತಷ್ಟು ಕುಸಿಯುವ ಅಪಾಯವಿದೆ. ಸದ್ಯ ತುಂಬೆ ಡ್ಯಾಂನಲ್ಲಿ 6 ಮೀಟರ್‌ ನೀರು ನಿಲುಗಡೆ ಮಾಡಲಾಗುತ್ತಿದ್ದು, ನೀರಿನ ಸೆಳೆತಕ್ಕೆ ತಡೆಗೋಡೆಯ ಭಾಗಕ್ಕೆ ಇನ್ನಷ್ಟು ಅಪಾಯ ಎದುರಾಗಲೂ ಬಹುದು ಎಂದು ಮೂಲಗಳು ತಿಳಿಸಿವೆ. ಡ್ಯಾಂನ ರಕ್ಷಣೆ ಹಾಗೂ ಮೂಲ ಸೌಕರ್ಯ ಗಳಿಗೆ ಮೊದಲ ಆದ್ಯತೆ ನೀಡುವುದು ಸರಕಾರದ ಕರ್ತವ್ಯವಾಗಿದೆ.

10 ಕೋ.ರೂ.ಗಳ ಪ್ರಸ್ತಾವನೆ
ತಡೆಗೋಡೆ ಕುಸಿದ ಭಾಗಕ್ಕೆ ಹಲವು ಬಾರಿ ಸಚಿವರು-ಶಾಸಕರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಾಲಿಕೆಯಿಂದ ಸರಕಾರಕ್ಕೆ 10 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ ಯಾವುದೂ ಕೂಡ ಇಲ್ಲಿಯವರೆಗೆ ಫಲ ನೀಡಿಲ್ಲ. ಸರಕಾರದ ಸ್ಪಂದನೆ ದೊರೆಯದ ಕಾರಣದಿಂದ ಈಗಲೂ ಡ್ಯಾಂನ ಪಂಪ್‌ಹೌಸ್‌ ಭಾಗ ಅಪಾಯದಲ್ಲೇ ಇದೆ.

ಡ್ಯಾಂ ಅನಂತರದ ಕೆಳಭಾಗದಲ್ಲೂ ಅಪಾಯ!
ಈ ಮಧ್ಯೆ, ಡ್ಯಾಂನ ಕೆಳಭಾಗದ ತಡೆಗೋಡೆ ಕಳೆದ ಮಳೆಗೆ ಕೊಚ್ಚಿಹೋಗಿದೆ. ಈ ಭಾಗದಲ್ಲಿ ಸುಮಾರು 10ಕ್ಕೂ ಅಧಿಕ ಅಡಿಕೆ, ತೆಂಗಿನ ಮರಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಡ್ಯಾಂನ ಕೆಳಭಾಗದಲ್ಲಿ ಹೆದ್ದಾರಿ ಪಕ್ಕದಲ್ಲಿರುವ ಅಡಿಕೆ ತೋಟದ ಒಂದು ಪಾರ್ಶ್ವ ನೀರಿನ ರಭಸಕ್ಕೆ ಜರಿದಿದ್ದು, ಮುಂದೆಯೂ ಅಪಾಯದ ಮುನ್ಸೂಚನೆ ನೀಡುತ್ತಿದೆ. ಹೀಗಾಗಿ ಈ ಭಾಗದಲ್ಲಿಯೂ ಶಾಶ್ವತ ತಡೆಗೋಡೆ ನಿರ್ಮಾಣ ಅನಿವಾರ್ಯ.

ಡ್ಯಾಂನ ತಡೆಗೋಡೆ ಕುಸಿದ ಹಿನ್ನೆಲೆಯಲ್ಲಿ ಪಂಪ್‌ಹೌಸ್‌ ಸನಿಹದಲ್ಲಿ ತಾತ್ಕಾಲಿಕ ವ್ಯವಸ್ಥೆ ಈಗಾಗಲೇ ಮಾಡಲಾಗಿದೆ. ಹೀಗಾಗಿ ಸದ್ಯಕ್ಕೆ ಅಪಾಯವಿಲ್ಲ. ಆದರೆ ಮುಂದೆ ಮಳೆ ನೀರಿನ ಪ್ರಮಾಣ ಅಧಿಕವಾದರೆ ತಡೆಗೋಡೆಯ ಭಾಗದಲ್ಲಿ ಇನ್ನಷ್ಟು ಕುಸಿತ ಉಂಟಾದರೆ ಅಪಾಯ ಕಟ್ಟಿಟ್ಟಬುತ್ತಿ. ಯಾಕೆಂದರೆ ಈಗಾಗಲೇ ಕುಸಿದಿರುವ ತಡೆಗೋಡೆಯ ಕೇವಲ 15-20 ಮೀಟರ್‌ ದೂರದಲ್ಲಿ ಡ್ಯಾಂನ ಮುಖ್ಯ ಪಂಪ್‌ಹೌಸ್‌ ಇದೆ. ಒಂದು ವೇಳೆ ಏನಾದರೂ ಅನಾಹುತ ಸಂಭವಿಸಿದರೆ ಮಂಗಳೂರಿಗೆ ನೀರು ಒದಗಿಸುವ ಮುಖ್ಯ ಪಂಪ್‌ಹೌಸ್‌ ಕಾರ್ಯಾಚರಣೆ ನಿಲ್ಲಿಸಬೇಕಾಗಬಹುದು!

Advertisement

ಶಾಶ್ವತ ತಡೆಗೋಡೆಗೆ ಕ್ರಮ
ತುಂಬೆ ಡ್ಯಾಂನ ತಡೆಗೋಡೆಯ ಕೊಂಚ ಭಾಗ ಮಳೆಗಾಲದ ವೇಳೆ ಕುಸಿದ ಪರಿಣಾಮ ತಾತ್ಕಾಲಿಕ ರಕ್ಷಣಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಆದರೆ ಈ ವಿಚಾರ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸರಕಾರದ ಮುಖ್ಯಕಾರ್ಯದರ್ಶಿ ವಿಜಯ ಭಾಸ್ಕರ್‌ ಅವರು ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹೀಗಾಗಿ ಸೂಕ್ತ ಅನುದಾನದ ಮೂಲಕ ಶಾಶ್ವತ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು.
 - ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ, ಆಯುಕ್ತರು-ಮನಪಾ

-  ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next