ಹುಬ್ಬಳ್ಳಿ: ರಾಷ್ಟ್ರೀಯ ಪಲ್ಸ್ ಪೋಲಿಯೋದ 2ನೇ ಹಂತದ ಕಾರ್ಯಕ್ರಮದಂಗವಾಗಿ ಮಂಗಳವಾರ ಇಲ್ಲಿನ ಗದಗ ರಸ್ತೆಯ ಕೇಂದ್ರೀಯ ರೈಲ್ವೆ ಆಸ್ಪತ್ರೆಯಲ್ಲಿ ಸೋಂಕು ಪ್ರತಿರೋಧಕ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೈರುತ್ಯ ರೈಲ್ವೆಯ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ| ಎಚ್. ಪ್ರದೀಪ ಕುಮಾರ ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. ಮುಖ್ಯ ಆರೋಗ್ಯ ನಿರ್ದೇಶಕ ಡಾ| ವಿಲಾಸ ಎ. ಗುಂಡಾ ಮೊದಲಾದವರಿದ್ದರು.
ಕೇಂದ್ರೀಯ ಆಸ್ಪತ್ರೆ, ರೈಲ್ವೆ ನಿಲ್ದಾಣ, ಡೌನ್ ಚಾಳ, ಸೇಂಟ್ ಪೀಟರ್ ಚರ್ಚ್, ಎಂಟಿಎಸ್ ಕಾಲೋನಿ, ಮೊಬೈಲ್ ಬೂತ್ಸ್, ಹುಬ್ಬಳ್ಳಿಯ ರೈಲ್ವೆ ನಿಲ್ದಾಣಗಳಲ್ಲಿ ರೈಲಿನಲ್ಲಿ ಪ್ರಯಾಣಿಸುವ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯ ಮಾಡಲಾಗುತ್ತಿದೆ.
ಹುಬ್ಬಳ್ಳಿ ವಿಭಾಗದ ಗದಗ, ಹೊಸಪೇಟೆ, ವಿಜಯಪುರ, ಬಳ್ಳಾರಿ, ಬಾಗಲಕೋಟೆ, ಅಳ್ನಾವರ, ಬೆಳಗಾವಿ, ಕಾಸರಲಾಕ್ ಆರೋಗ್ಯ ಘಟಕಗಳಲ್ಲೂ ಲಸಿಕೆ ಹಾಕುವ ಕಾರ್ಯ ನಡೆಯಿತು. ಮೊದಲ ದಿನ ಹುಬ್ಬಳ್ಳಿಯಲ್ಲಿ 0-5 ವರ್ಷದೊಳಗಿನ 3048 ಮಕ್ಕಳಿಗೆ ಹಾಗೂ ಇನ್ನುಳಿದ ಆರೋಗ್ಯ ಘಟಕಗಳಲ್ಲಿ 1657 ಮಕ್ಕಳಿಗೆ ಸೇರಿ ಒಟ್ಟು 4705 ಮಕ್ಕಳಿಗೆ ಲಸಿಕೆ ಹಾಕಲಾಯಿತು.
ಈ ಕಾರ್ಯಕ್ರಮದಲ್ಲಿ ಒಟ್ಟು ಆರು ಸಾವಿರ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಮೇ 3ರ ವರೆಗೆ ರೈಲ್ವೆ ಕಾಲೋನಿಯ ಮನೆ-ಮನೆಗಳಿಗೆ ತೆರಳಿ 0-5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.