Advertisement

19ರಂದು ಜಿಲ್ಲಾದ್ಯಂತ ಪಲ್ಸ್‌ ಪೋಲಿಯೋ

09:12 PM Jan 14, 2020 | Lakshmi GovindaRaj |

ತುಮಕೂರು: ಜಿಲ್ಲಾದ್ಯಂತ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಜ.19ರಂದು ಹಮ್ಮಿಕೊಳ್ಳ ಲಾಗಿದ್ದು, 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಹಾಕಿಸುವಂತೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್‌ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪಲ್ಸ್‌ ಪೋಲಿಯೋ ಜಿಲ್ಲಾಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಪಲ್ಸ್‌ ಪೋಲಿಯೋ ಕಾರ್ಯಕ್ರಮದಡಿ ಜ.19ರಂದು ಲಸಿಕಾ ಬೂತ್‌ನಲ್ಲಿ ಪೋಲಿಯೋ ಲಸಿಕೆ ಹಾಕುವುದು, 20 ಮತ್ತು 21ರಂದು ಗ್ರಾಮೀಣ ಪ್ರದೇಶಗಳ ಮನೆ-ಮನೆಗೆ ಹಾಗೂ 22ರಂದು ನಗರ ಪ್ರದೇಶಗಳ ಮನೆ-ಮನೆಗೆ ಭೇಟಿ ನೀಡಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಯಾವ ಮಕ್ಕಳು ಲಸಿಕೆಯಿಂದ ತಪ್ಪಿಹೋಗಬಾರದು: ಎಲ್ಲಾ ಇಲಾಖೆಯ ಅಧಿಕಾರಿಗಳು ಲಸಿಕಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಜನಸಂದಣಿ ಸೇರುವ ಸಾರ್ವಜನಿಕ ಸ್ಥಳಗಳಾದ ಬಸ್‌ನಿಲ್ದಾಣ, ರೈಲ್ವೇನಿಲ್ದಾಣ, ಟೋಲ್‌ಗೇಟ್‌ಗಳಲ್ಲಿ ಟ್ರಾನ್ಸಿಟ್‌ ಬೂತ್‌ಗಳನ್ನು ಹಾಗೂ ಕಡಿಮೆ ಮನೆ, ಗುಡಿಸಲುಗಳಿರುವ ಕಡೆಗಳಿಗೆ ಮೊಬೈಲ್‌ ತಂಡಗಳನ್ನು ನಿಯೋಜಿಸಿ ಜಿಲ್ಲೆಯಲ್ಲಿ 5 ವರ್ಷದೊಳಗಿನ ಯಾವ ಮಕ್ಕಳು ಲಸಿಕೆಯಿಂದ ತಪ್ಪಿಹೋಗದಂತೆ ಪೂರ್ಣ ಪ್ರಮಾಣದ ಲಸಿಕೆ ಹಾಕುವಂತೆ ತಿಳಿಸಿದರು.

62 ಟ್ರಾನ್ಸಿಟ್‌ ಲಸಿಕಾ ಕೇಂದ್ರ: ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮವು ಒಂದೇ ಸುತ್ತಿನಲ್ಲಿ ನಡೆಯಲಿದ್ದು, ಜಿಲ್ಲೆಯಲ್ಲಿ 0-5 ವರ್ಷದೊಳಗಿನ 2,02,919 ಮಕ್ಕಳಿಗೆ, ಒಟ್ಟು 1220 ಲಸಿಕಾ ಕೇಂದ್ರಗಳು ಹಾಗೂ 62 ಟ್ರಾನ್ಸಿಟ್‌ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ.

ಈ ಕಾರ್ಯಕ್ರಮಕ್ಕೆ 5038 ಲಸಿಕೆ ಹಾಕುವವರನ್ನು ನೇಮಿಸಲಾಗಿದೆ ಹಾಗೂ 5 ರಿಂದ 10ಬೂತ್‌ಗೆ ಒಬ್ಬರಂತೆ ಒಟ್ಟು 261 ಮೇಲ್ವಿಚಾರಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ. ಆರ್‌. ಚಂದ್ರಿಕಾ ಸಭೆಗೆ ಮಾಹಿತಿ ನೀಡಿದರು. ನಂತರ ಕಟ್ಟಡ ಕಾರ್ಮಿಕರು ಹಾಗೂ ವಲಸಿಗರು ನೆಲಸಿರುವ ಸ್ಥಳಗಳ ಕುರಿತು ಸಾರ್ವಜನಿಕರು ದೂರವಾಣಿ ಸಂಖ್ಯೆ- 9449843064ಕ್ಕೆ ಸಂಪರ್ಕಿಸುವ ಮೂಲಕ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

Advertisement

ಮನೆ-ಮನೆಗೆ ಭೇಟಿ ಕಾರ್ಯಕ್ರಮ: ರಾಷ್ಟ್ರೀಯ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಲಸಿಕಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಕೇಂದ್ರಗಳನ್ನು ಒದಗಿಸಿ ಕೊಡುವುದು ಹಾಗೂ ಮನೆ-ಮನೆಗೆ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಹಿಂದಿನ ದಿನ ಮಕ್ಕಳಿಂದ ಜಾಥಾ: ಹಾಗೆಯೇ ಶಾಲಾ ಮಕ್ಕಳಿಗೆ ಪ್ರಾರ್ಥನೆಯ ಸಮಯದಲ್ಲಿ ಲಸಿಕೆ ಕುರಿತು ಮಾಹಿತಿ ನೀಡುವುದಲ್ಲದೇ ಲಸಿಕಾ ಕಾರ್ಯಕ್ರಮದ ಹಿಂದಿನ ದಿನ ಮಕ್ಕಳಿಂದ ಜಾಥಾ ಏರ್ಪಡಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ಕಾರ್ಯಕ್ರಮಕ್ಕೆ ಶಾಲಾ ಕೊಠಡಿಗಳನ್ನು ಒದಗಿಸಿ ಸಹಕರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಜವಾಬ್ದಾರಿ ವಹಿಸಿದರು.

ಸ್ವಯಂ ಸೇವಾ ಸಂಸ್ಥೆಗಳು ಲಸಿಕಾ ಕಾರ್ಯಕ್ರಮದಲ್ಲಿ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಲಸಿಕಾ ಕಾರ್ಯಕ್ರಮದ ಅಂತ್ಯದವರೆಗೆ ನಿರಂತರವಾಗಿ ವಿದ್ಯುತ್‌ ಸರಬರಾಜು ಮಾಡಬೇಕೆಂದು ಬೆಸ್ಕಾಂಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ವಲಸಿಗರು, ಕಾರ್ಮಿಕರ ಮಕ್ಕಳ ಬಗ್ಗೆ ಹೆಚ್ಚು ಆದ್ಯತೆ ನೀಡಿ: ರಾಷ್ಟ್ರೀಯ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ನಗರದ ಕಟ್ಟಡ ಕಾರ್ಮಿಕರು, ವಲಸಿಗರು, ವಸಂತ ನರಸಾಪುರ ಕೈಗಾರಿಕೆ ಪ್ರದೇಶ ಮತ್ತು ಪಾವಗಡದಲ್ಲಿರುವ ಸೋಲಾರ್‌ ಪಾರ್ಕ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ಲಸಿಕೆಯನ್ನು ಹಾಕಲು ಹೆಚ್ಚು ಆದ್ಯತೆ ನೀಡಬೇಕೆಂದು ಸೂಚಿಸಿದರು.

ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮದ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು. ಆರ್‌.ಸಿ.ಎಚ್‌ ಅಧಿಕಾರಿ ಡಾ. ಕೇಶವರಾಜ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ್‌, ಡಿಡಿಪಿಐ ಎಂ. ಆರ್‌. ಕಾಮಾಕ್ಷಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ರಂಗಧಾಮಪ್ಪ, ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗ ದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next