ಲಕ್ಷ್ಮೇಶ್ವರ: ಕನ್ನಡ ಸಾರಸ್ವತ ಲೋಕಕ್ಕೆ ತಿರುಳ್ಗನ್ನಡ ಭಾಷೆ ನೀಡಿದ ಆದಿಕವಿ ಪಂಪನ ಸಾಹಿತ್ಯ ಕ್ಷೇತ್ರವಾದ ಪುಲಿಗೆರೆ(ಲಕ್ಷೇಶ್ವರ)ಯಲ್ಲಿ ಆದಿಕವಿ ಪಂಪನ ಹೆಸರಿನಲ್ಲಿ ಸ್ಥಾಪಿಸಿದ ಗ್ರಂಥಾಲಯ ಅವ್ಯವಸ್ಥೆಯ ತಾಣವಾಗಿದ್ದು, ಕಾಯಕಲ್ಪಕ್ಕೆ ಕಾದಿದೆ.
ಸುಮಾರು 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣದ ಕೇಂದ್ರ ಭಾಗದಲ್ಲಿರುವ ಈ ವಾಚನಾಲಯಕ್ಕೆ ಪಟ್ಟಣ ಮತ್ತು ಗ್ರಾಮೀಣ ಭಾಗದ 500ಕ್ಕೂ ಹೆಚ್ಚು ಓದುಗರು ಬರುತ್ತಾರೆ. 1350 ಜನರು ಸದಸ್ಯತ್ವ ಹೊಂದಿದ್ದಾರೆ. ಇಲ್ಲಿ ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಸಾಮಾನ್ಯ ಜ್ಞಾನ, ಮಾಹಿತಿ, ಸಾಹಿತ್ಯ, ಕಾವ್ಯ, ಕಾದಂಬರಿ, ಗ್ರಂಥಗಳು ಸೇರಿ ಸುಮಾರು 25 ಸಾವಿರ ಪುಸ್ತಕಗಳು ಇದ್ದವು. ಆದರೆ ಇವುಗಳನ್ನು ಸಂರಕ್ಷಿಸಿಡಲು ಸೂಕ್ತ ವ್ಯವಸ್ಥೆ ಮತ್ತು ಕಟ್ಟಡದ ಭಾಗ ಸೋರುತ್ತಿರುವುದರಿಂದ ಬಹಳಷ್ಟು ಹಾಳಾಗಿವೆ.
ಈಗ ಕೇವಲ 13,500 ಪುಸ್ತಕಗಳು ಮಾತ್ರ ಇಲ್ಲಿವೆ. ಮಳೆಗಾಲದಲ್ಲಿ ನೀರು ಜಿನುಗುತ್ತದೆ. ಸುತ್ತಲಿನ ಕಾಂಪೌಂಡ್ ಕುಸಿದಿದೆಯಲ್ಲದೇ ಇಲ್ಲಿ ಗಿಡಗಂಟೆಗಳು ಬೆಳೆದಿದ್ದರಿಂದ ಹಂದಿ ನಾಯಿಗಳ ತಾಣವಾಗಿದೆ. ಸಾರ್ವಜನಿಕರು ಶೌಚ, ಮೂತ್ರ ಮಾಡುತ್ತಿರುವುದರಿಂದ ದುರ್ನಾತ ಬೀರುತ್ತಿದೆ. ಕಟ್ಟಡದಮುಖ್ಯದ್ವಾರಕ್ಕೆ ಗೇಟ್ ಇಲ್ಲದೇ ಇರುವುದರಿಂದ ರಾತ್ರಿ ವೇಳೆ ಮತ್ತು ರಜಾ ದಿನಗಳಲ್ಲಿ ಮುಂಬಾಗಿಲಿನಲ್ಲಿ ಕುಳಿತುಕೊಳ್ಳುವವರು ಎಲೆ ಅಡಿಕೆ, ಗುಟಕಾ ತಿಂದು ಅಲ್ಲಿಯೇ ಉಗುಳಿ ಗಲೀಜು ಮಾಡುತ್ತಾರೆ ಇದು ಓದುಗರಿಗೆ ಇರುಸು ಮುರುಸಾಗಿದೆ. ಇದಕ್ಕೆ ಬಣ್ಣ ಹಚ್ಚಿ ಅನೇಕ ವರ್ಷಗಳು ಗತಿಸಿದ್ದು ಮತ್ತೇ ಸುಣ್ಣ ಬಣ್ಣ ಕಂಡಿಲ್ಲ ಒಟ್ಟಿನಲ್ಲಿ ಈ ವಾಚನಾಲಯ ಕಾಯಲಕ³ಕ್ಕೆ ಕಾದಿದೆ.
ಆದಿಕವಿ ಪಂಪ ಸ್ಮಾರಕದ ಮೂಲ ಕಟ್ಟಡ ಉತ್ತಮ ಸ್ಥಿತಿಯಲ್ಲಿದ್ದರೂ ಓದುಗರ ಸಂಖ್ಯೆಗೆ ಅನುಗುಣವಾಗಿ ಚಿಕ್ಕದಾಗಿದೆ. ಅಲ್ಲದೇ ಹಿಂಭಾಗದ ಕಟ್ಟಡ ಶಿಥಿಲಗೊಂಡಿದ್ದು ಇದ್ದೂ ಇಲ್ಲದಂತಾಗಿದೆ. ಮೂಲ ಕಟ್ಟಡ ಪಂಪನ ಸ್ಮಾರಕವಾಗಿದ್ದು ಇದಕ್ಕೆ ಧಕ್ಕೆಯಾಗದಂತೆ ಮರು ವಿನ್ಯಾಸಗೊಳಿಸಿ ಕಟ್ಟಡಕ್ಕೆ ಕಾಯಕಲ್ಪ ನೀಡಬೇಕಿದೆ.
ಗ್ರಂಥಾಲಯಕ್ಕೆ ನಿತ್ಯ ನೂರಾರು ಓದುಗರು ಬರುತ್ತಾರೆ. ಗ್ರಂಥಾಲಯದ ಸುತ್ತಲಿನ ಪ್ರದೇಶವನ್ನು ಸ್ವತ್ಛಗೊಳಿಸುವಂತೆ ಪುರಸಭೆಗೆ ಮನವಿ ಮಾಡಲಾಗಿದೆ. ಗ್ರಂಥಾಲಯದ ಅಭಿವೃದ್ಧಿಗಾಗಿ ಗ್ರಂಥಾಲಯ ಇಲಾಖೆಯಿಂದ ಅನುದಾನ ಬಿಡುಗಡೆಗೊಳಿಸಿ ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ.
– ಎಂ.ಎನ್.ಸುಟಮನಿ, ಗ್ರಂಥಪಾಲಕ
-ಮುಕ್ತಾ ಆದಿ