ಪುದುಚೇರಿ: ಪುದುಚೇರಿಯ ಜನನಿಬಿಡ ಪ್ರದೇಶದ ನಡುರಸ್ತೆಯಲ್ಲೇ ಬಿಜೆಪಿ ನಾಯಕರೊಬ್ಬರನ್ನು ದುಷ್ಕರ್ಮಿಗಳು ಭಾನುವಾರ ರಾತ್ರಿ ಸಿನಿಮೀಯ ರೀತಿಯಲ್ಲಿ ಮಚ್ಚಿನಿಂದ ಥಳಿಸಿ ಹತ್ಯೆಗೈದಿದ್ದಾರೆ. ದುಷ್ಕರ್ಮಿಗಳ ಅಟ್ಟಹಾಸಕ್ಕೆ ಇಡೀ ನಗರವೇ ಬೆಚ್ಚಿಬಿದ್ದಿದೆ.
ಪುದುಚೇರಿ ಗೃಹ ಸಚಿವರಾದ ಎ.ನಾಮಸಿವಯ್ಯಂ ಅವರ ಸಂಬಂಧಿ ಹಾಗೂ ಬಿಜೆಪಿ ನಾಯಕ ಸೆಂತಿಲ್ ಕುಮಾರನ್ ಬೇಕರಿ ಎದುರು ನಿಂತಿದ್ದರು. ಈ ವೇಳೆ ಇಬ್ಬರು ಪುಂಡರು ಕುಮಾರನ್ ಮೇಲೆ ಸ್ಮೋಕ್‌ಬಾಂಬ್‌ಗಳನ್ನು ಎಸೆದಿದ್ದಾರೆ. ಹೊಗೆ ತುಂಬಿಕೊಳ್ಳುತ್ತಿದ್ದಂತೆ ಬೈಕ್‌ನಲ್ಲಿ ಬಂದ ಉಳಿದ ದುಷ್ಕರ್ಮಿಗಳು ಸೇರಿ ಕುಮಾರನ್‌ಗೆ ಮಚ್ಚಿನಿಂದ ಥಳಿಸಿ ಕೊಂದಿದ್ದಾರೆ. ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆ ಸಂಬಂಧಿಸಿದ ತನಿಖೆಗಾಗಿ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಗೃಹ ಸಚಿವರು ಭೇಟಿ ನೀಡಿ, ಕಣ್ಣೀರಾಗಿದ್ದಾರೆ. ಇದೇ ವೇಳೆ ಸ್ಥಳದಲ್ಲಿ ಜಮಾಯಿಸಿದ 700ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಕೃತ್ಯವನ್ನು ಖಂಡಿಸಿದ್ದು, ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದ್ದಾರೆ.