ತಾನು ರಿಪೇರಿ ಮಾಡಿದ ಬೈಕುಗಳೆಲ್ಲ ಟಾಪ್‌ಗೇರ್‌ನಲ್ಲಿ ಹೊರಡುವಾಗ, ಇನ್ನು ಹೃದಯದ ತುಂಬಾ ಜೋಶ್ ತುಂಬಿಕೊಂಡ ಕುಸುಮಾ ಟಾಪ್ ಬರದೇ ಇರುತ್ತಾಳಾ?
ಸಾಧಕನ ನಿಜವಾದ ಪರೀಕ್ಷೆ ಹಿಮಾಲಯದಲ್ಲಿ ತಪಸ್ಸನ್ನಾಚರಿಸುವುದರಲ್ಲಿ ಇಲ್ಲ. ಜನರ ಸಂತೆಯ ನಡುವೆಯೇ, ಪ್ರಾಪಂಚಿಕ ವ್ಯವಹಾರಗಳ ನಡುವೆಯೇ ಇದ್ದುಕೊಂಡು ಧ್ಯಾನಸ್ಥನಾಗುವುದೇ ಸಾಧನೆ. ಈ ನಿದರ್ಶನಕ್ಕೆ ಸಾಕ್ಷಿಯಾಗಿದ್ದಾಳೆ ಕೊಟ್ಟೂರಿನ ಕುಸುಮ. ಮನೆಯಲ್ಲಿ ನೂರೆಂಟು ತಾಪತ್ರಯಗಳು, ಆರ್ಥಿಕ ಮುಗ್ಗಟ್ಟು, ಅಪ್ಪನ ಪಂಕ್ಚರ್ ಅಂಗಡಿಯಲ್ಲೂ ಕೆಲಸ ಮಾಡಬೇಕಾದ ಅನಿವಾರ್ಯತೆ. ಆದರೆ ಇವ್ಯಾವುವೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅವಳು ಮೊದಲ ಸ್ಥಾನ ಪಡೆಯುವುದನ್ನು ತಪ್ಪಿಸಲಿಲ್ಲ. ಟೈಮ್‌ಟೇಬಲ್ ಹಾಕಿಕೊಳ್ಳದೆ, ಮಿಲಿಟರಿ ಶಿಷ್ಟಾಚಾರಗಳಿಲ್ಲದೆಯೂ ಈ ಸಾಧನೆ ಮಾಡಿದ್ದು ಹೇಗೆ ಎಂದು ಕೇಳಿದರೆ ಕುಸುಮ ಹೇಳಿದ್ದು “ಎಲ್ಲಿ ಕಂಟಿನ್ಯುಟಿ ಮಿಸ್ ಆಗಿಬಿಡುತ್ತದೋ ಎಂದು ಒಂದಿನವೂ ತರಗತಿಗೆ ಚಕ್ಕರ್ ಹಾಕಿಲ್ಲ.’ ಎಂದು. ಹುಷಾರು ತಪ್ಪಿದಾಗಲೂ ಕುಸುಮ ಕಾಲೇಜ್ ಬಂಕ್ ಮಾಡಿಲ್ಲ. “ಜ್ವರ ಬಂದರೆ ಮಾತ್ರೆ ತೆಗೆದುಕೊಂಡುಬಿಟ್ಟರೆ ಹೋಗುತ್ತದೆ. ಆದರೆ ಪಾಠ ಮಿಸ್ ಆಗಿಬಿಟ್ಟರೆ ಮತ್ತೆ ವಿಷಯವನ್ನು ಗ್ರಹಿಸುವುದು ಕಷ್ಟ.’ ಎಂದು ನಗುತ್ತಾಳೆ ಆಕೆ.
ತಾನು ರಿಪೇರಿ ಮಾಡುವ ಬೈಕಿಗೂ, ಈ ಬದುಕಿಗೂ ಹೆಚ್ಚೇನೂ ಜಾಸ್ತಿ ವ್ಯತ್ಯಾಸವಿಲ್ಲ ಎನ್ನುವ ತಣ್ತೀದಲ್ಲಿ ನಂಬಿಕೆ ಇಟ್ಟವರು, ಕುಸುಮಾ. ಪಂಕ್ಚರ್ ಆಗದೇ ನಾವು ಮುಂದೆ ಸಾಗೋದು ಹೇಗೆ, ಯಾವ್ಯಾವ ಗತಿಯಲ್ಲಿ ಯಾವ್ಯಾವ ಗೇರ್ ಹಾಕಿ ಮುಂದೆ ಸಾಗಬೇಕು, ಯಾವ ಅಪಾಯದ ಸನ್ನಿವೇಶದಲ್ಲಿ ಬ್ರೇಕ್ ಒತ್ತಬೇಕು, ಸಮಾನ ಮನಸ್ಕರೊಂದಿಗೇ ಪಯಣಿಸಬೇಕು… ಇವೆಲ್ಲವೂ ಬದುಕಿಗೂ ಅನ್ವಯ. ರಿಪೇರಿ ಮಾಡಿದ ಬೈಕುಗಳೆಲ್ಲ ಟಾಪ್‌ಗೇರ್‌ನಲ್ಲಿ ಹೊರಡುವಾಗ, ಇನ್ನು ಹೃದಯದ ತುಂಬಾ ಜೋಶ್ ತುಂಬಿಕೊಂಡ ಕುಸುಮಾ ಟಾಪ್ ಬರದೇ ಇರುತ್ತಾಳಾ?
ಅಂದಹಾಗೆ ಅವರ ಮನೆಯಲ್ಲಿ ಒಟ್ಟು ಐವರು ಮಕ್ಕಳು. ಕುಸುಮ ಕೊನೆಯವಳು. ದೊಡ್ಡ ಅಣ್ಣ ತಂದೆಗೆ ನೆರವಾಗುತ್ತಿದ್ದರೆ ಉಳಿದ ಮೂವರು ಅಕ್ಕಂದಿರು ಎಂ.ಕಾಂ, ಬಿ.ಎಡ್, ಬಿ.ಎಸ್ಸಿ ಓದಿದ್ದಾರೆ. ತಾನು ಓದದೇ ಇದ್ದರೂ ತಮ್ಮ ಮಕ್ಕಳನ್ನು ಓದಿಸಬೇಕೆಂಬುದು ದೇವೇಂದ್ರಪ್ಪನ ಕನಸು. “ದಂಗಲ್’ ಸಿನಿಮಾದಲ್ಲಿ ಅಕ್ಕ ತಂಗಿಯರು ಕಬಡ್ಡಿಯಲ್ಲಿ ಮೆಡಲ್ ಗೆಲ್ಲುವ ಅಪ್ಪನ ಕನಸನ್ನು ನೆರವೇರಿಸಲು ಮುಂದಾಗುತ್ತಾರೆ. ಅದೇ ರೀತಿ ಇಲ್ಲೂ ಕುಸುಮ ಮತ್ತವಳ ಅಕ್ಕಂದಿರು ಚೆನ್ನಾಗಿ ಓದಿ ತಮ್ಮ ತಂದೆಗೆ ಹೆಮ್ಮೆಯನ್ನುಂಟು ಮಾಡಿರುವುದು ಯಾವುದೇ ಒಲಿಂಪಿಕ್ ಮೆಡಲ್‌ಗೂ ಕಡಿಮೆ ಸಾಧನೆಯೇನಲ್ಲ.
– ಹವನ