Advertisement

ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ

05:16 PM Jan 25, 2022 | Team Udayavani |

ಉಡುಪಿ: ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಫ‌ಲಿತಾಂಶ ಹೆಚ್ಚಿಸಲು ಮತ್ತು ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಲು ಪದವಿಪೂರ್ವ ಶಿಕ್ಷಣ ಇಲಾಖೆ ಟ್ಯಾಲೆಂಟ್‌ ಸರ್ಚ್‌ (ಪ್ರತಿಭಾನ್ವೇಷಣೆ) ಎಂಬ ಹೊಸ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ.

Advertisement

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ವಿಜ್ಞಾನ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದನ್ನು ಗಮನದಲ್ಲಿಟ್ಟುಕೊಂಡು ಟ್ಯಾಲೆಂಟ್‌ ಸರ್ಚ್‌ ಕಾರ್ಯಕ್ರಮ ರೂಪಿಸಲಾಗಿದೆ. ಇದನ್ನು ಆನ್‌ಲೈನ್‌ ಅಥವಾ ವರ್ಚುವಲ್‌ ಮೂಲಕ ಸರಣಿ ವೆಬಿನಾರ್‌ ರೀತಿಯಲ್ಲಿ ನಡೆಸಲಾಗುವುದು. ಪದವಿಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ಕೇಂದ್ರ ಕಚೇರಿಯಿಂದ ಡಿಡಿಪಿಯು ಅವರ ಕಚೇರಿಗೆ ಟ್ಯಾಲೆಂಟ್‌ ಸರ್ಚ್‌ ಕಾರ್ಯಕ್ರಮದ ಲಿಂಕ್‌ ಕಳುಹಿಸುತ್ತಾರೆ. ಡಿಡಿಪಿಯು ಕಚೇರಿಯಿಂದ ಎಲ್ಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಅಥವಾ ವಿಜ್ಞಾನ ವಿಭಾಗದ ಮುಖ್ಯಸ್ಥರಿಗೆ ಕಳುಹಿಸಲಾಗುತ್ತದೆ. ಆಯಾ ಕಾಲೇಜುಗಳಲ್ಲಿ ಆ ಲಿಂಕ್‌ಗಳನ್ನು ವಿದ್ಯಾರ್ಥಿಗಳಿಗೆ ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಿಕೊಡಲಾಗುತ್ತದೆ ಎಂದು ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನಿದು ಟ್ಯಾಲೆಂಟ್‌ ಸರ್ಚ್‌?
ವಿಜ್ಞಾನ ವಿಭಾಗದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ಮಾರ್ಗದರ್ಶನ ನೀಡುವ, ಆ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಮುಂದೆ ತರುವ ಭಾಗವಾಗಿಯೂ ಟ್ಯಾಲೆಂಟ್‌ ಸರ್ಚ್‌ ನಡೆಯಲಿದೆ. ಇದರ ಜತೆಗೆ ಫ‌ಲಿತಾಂಶ ಹೆಚ್ಚಳಕ್ಕೂ ಈ ಮೂಲಕ ಆದ್ಯತೆ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಂಬಂಧಿಸಿದ ಬಹು ಆಯ್ಕೆಯ ಪ್ರಶ್ನೆ ಆಧಾರಿತ ಮಾಹಿತಿ ಇರಲಿದೆ. ಜತೆಗೆ ವಿದ್ಯಾರ್ಥಿಗಳು ಅಲ್ಲಿ ಕೇಳುವ ಪ್ರಶ್ನೆಗಳಿಗೆ ಆನ್‌ಲೈನ್‌ ಮೂಲಕವೇ ಉತ್ತರಿಸುವ ವ್ಯವಸ್ಥೆ ಇರುತ್ತದೆ. ವಿದ್ಯಾರ್ಥಿಗಳಿಗೆ ಕ್ಲಿಷ್ಟ ಎನಿಸಬಲ್ಲ ಪಠ್ಯದ ವಿಷಯಗಳನ್ನು ತಜ್ಞರ ಮೂಲಕ ಸುಲಭವಾಗಿ ತಿಳಿಸಲಾಗುತ್ತದೆ. ವಿದ್ಯಾರ್ಥಿಗಳಿಗಾಗಿ ಪ್ರಶ್ನೋತ್ತರವೂ ಇರಲಿದೆ. ಯಾವ ವಿದ್ಯಾರ್ಥಿಯ ಸಾಧನೆ ಎಷ್ಟಿದೆ ಎಂಬುದು ಆಯಾ ಕಾಲೇಜಿಗೆ ತಿಳಿದು ಬರಲಿದೆ. ಅದರ ಆಧಾರದಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ ನೀಡಲಾಗುತ್ತದೆ.

ಉಪನ್ಯಾಸಕರಿಗೆ ಕಾರ್ಯಾಗಾರ
ದ್ವಿ. ಪಿಯುಸಿ ವಿದ್ಯಾರ್ಥಿಗಳನ್ನು ಗಮನ ದಲ್ಲಿಟ್ಟುಕೊಂಡು ವಿಷಯವಾರು ಉಪನ್ಯಾಸಕ ರಿಗೆ ಕಾರ್ಯಾಗಾರ ನಡೆಸುತ್ತಿದ್ದೇವೆ. ಪರೀಕ್ಷೆಗೆ ಬರಬಹುದಾದ ಪ್ರಶ್ನೆಗಳು, ಪರೀಕ್ಷೆ ಎದುರಿಸುವ ವಿಧಾನ, ಆತ್ಮಸ್ಥೈರ್ಯ ಇತ್ಯಾದಿ ಹಲವು ವಿಷಯಗಳ ಬಗ್ಗೆ ಉಪನ್ಯಾಸಕರಿಗೆ ತರಬೇತಿ ನೀಡಿ, ಅದನ್ನು ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ತಿಳಿಸುವ ಪ್ರಯತ್ನ ನಡೆಸುತ್ತಿದ್ದೇವೆ. ಇದರ ಜತೆಗೆ ಫೇಸ್‌ಬುಕ್‌ ಮೂಲಕ ಲೈವ್‌ ತರಗತಿಯೂ ಶುರುಮಾಡಿದ್ದೇವೆ. ಪ.ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ವಿಶ್ವಾಸ ಕಿರಣ ನಡೆಯುತ್ತಿದೆ.

ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಮತ್ತು ಮಾರ್ಗ ದರ್ಶನ ನೀಡುವ ಕಾರ್ಯ ಕಾಲೇಜುಗಳ ಮೂಲಕ ಆಗುತ್ತಿದೆ ಎಂದು ಉಡುಪಿ ಜಿಲ್ಲಾ ಡಿಡಿಪಿಯು ಮಾರುತಿ ಅವರು ಮಾಹಿತಿ ನೀಡಿದರು.

Advertisement

ಭಾಷಾ ವಿಷಯ ಪಠ್ಯಕಡಿತ
ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಫೆ.17ರಿಂದ ಪ್ರಾಯೋಗಿಕ ಪರೀಕ್ಷೆಗಳು ಆರಂಭ ವಾಗಲಿದೆ. ಮಾರ್ಚ್‌ 25ರ ವರೆಗೂ ನಡೆಯಲಿದೆ. ಪ್ರಥಮ, ದ್ವಿತೀಯ ಪಿಯುಸಿ ಎಲ್ಲ ವಿದ್ಯಾರ್ಥಿಗಳಿಗೂ ಅನ್ವಯವಾಗುವಂತೆ ಭಾಷಾ ವಿಷಯಗಳಲ್ಲಿ ( ಕನ್ನಡ, ಇಂಗ್ಲಿಷ್‌, ಹಿಂದಿ ಇತ್ಯಾದಿ) ಮಾತ್ರ ಶೇ.30ರಷ್ಟು ಪಠ್ಯಕಡಿತ ಮಾಡಲಾಗಿದೆ. ಆದರೆ ಐಚ್ಛಿಕ ವಿಷಯಗಳ (ರಾಜ್ಯಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಅರ್ಥಶಾಸ್ತ್ರ ಇತ್ಯಾದಿ ವಿಷಯಗಳು) ಪಠ್ಯಕಡಿತ ಇರುವುದಿಲ್ಲ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗೆ ಅನುಕೂಲವಾಗುವಂತೆ ಹೆಚ್ಚುವರಿ ಪ್ರಶ್ನೆಗಳನ್ನು ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಆಯ್ಕೆ ಹೆಚ್ಚಾಗುತ್ತದೆ.

ಉನ್ನತ ಫ‌ಲಿತಾಂಶಕ್ಕಾಗಿ
ರೂಪಿಸಲಾದ ಕಾರ್ಯಕ್ರಮ
ದ್ವಿತೀಯ ಪಿಯುಸಿ ಫ‌ಲಿತಾಂಶ ಉನ್ನತೀಕರಿಸಲು ಇಲಾಖೆಯಿಂದ ಟ್ಯಾಲೆಂಟ್‌ ಸರ್ಚ್‌ ಕಾರ್ಯಕ್ರಮ ರೂಪಿಸಲಾಗಿದೆ. ಇಲಾಖೆಯಿಂದ ಬರುವ ಲಿಂಕ್‌ಗಳನ್ನು ಕಾಲೇಜಿಗೆ ಕಳುಹಿಸುತ್ತೇವೆ. ಪ್ರಾಂಶುಪಾಲರು, ವಿಷಯ ಉಪನ್ಯಾಸಕರು ಅದನ್ನು ವಿದ್ಯಾರ್ಥಿಗಳಿಗೆ ಕಳುಹಿಸಿಕೊಡಲಿದ್ದಾರೆ.
-ಮಾರುತಿ, ಡಿಡಿಪಿಯು, ಉಡುಪಿ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next