Advertisement

ಪಿಯುಸಿ ಫ‌ಲಿತಾಂಶದ ನಂತರ ಎಸ್ಸೆಸ್ಸೆಲ್ಸಿ ಫ‌ಲಿತಾಂಶ 2017

03:45 AM May 09, 2017 | Team Udayavani |

ಬೆಂಗಳೂರು :ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಪೂರ್ಣಗೊಂಡಿದ್ದು, ಪಿಯುಸಿ ಫ‌ಲಿತಾಂಶ ಮೇ 10 ಅಥವಾ 11ರಂದು ಪ್ರಕಟಗೊಳ್ಳಲಿದೆ. ಇದಾದ ಒಂದು ವಾರದೊಳಗೆ ಎಸ್ಸೆಸ್ಸೆಲ್ಸಿ ಫ‌ಲಿತಾಂಶವೂ ಹೊರಬೀಳಲಿದೆ.

Advertisement

ಮೊದಲಿಗೆ ಪಿಯುಸಿ ಫ‌ಲಿತಾಂಶ ಪ್ರಕಟಿಸಲು ಬೇಕಾದ ಎಲ್ಲಾ ಸಿದ್ಧತೆಯನ್ನು ಇಲಾಖೆಯ ಅಧಿಕಾರಿಗಳು ಮಾಡಿಕೊಳ್ಳುತಿದ್ದು ಸರ್ಕಾರದ ಅಧಿಕೃತ ವೆಬ್‌ಸೈಟ್‌ ಹೊರತುಡಿಸಿ ಬೇರ್ಯಾವ ಖಾಸಗಿ ವೆಬ್‌ಸೈಟ್‌ನಲ್ಲೂ ಫ‌ಲಿತಾಂಶ ಪ್ರಕಟಿಸದಂತೆ ಇಲಾಖೆಯ ಅಧಿಕಾರಿಗಳು ನಿಯಮ ರೂಪಿಸಿಕೊಂಡಿದ್ದಾರೆ.

ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳ ವಿಷಯವಾರು ಅಂಕ, ಒಟ್ಟು ಅಂಕ, ಹಾಗೂ ಶ್ರೇಣಿ ಇತ್ಯಾದಿ ಎಲ್ಲವನ್ನು ಕ್ರೋಢೀಕರಿಸಿ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುವ ಕಾರ್ಯ ನಡೆಯುತ್ತಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರ ಲಭ್ಯತೆಯ ಆಧಾರದಲ್ಲಿ ಮಂಗಳವಾರ ಬೆಳಗ್ಗೆ ಫ‌ಲಿತಾಂಶದ ದಿನಾಂಕ ಖಚಿತಪಡಿಸಲಾಗುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ  ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಪಡೆದ ಅಂಕದ  ಮಾಹಿತಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವಾಗ ಕಣ್‌ತಪ್ಪಿನಿಂದಲೂ ಸಣ್ಣಪುಟ್ಟ ವ್ಯತ್ಯಾಸ ಆದಂತೆ ಎಚ್ಚರ ವಹಿಸಬೇಕಾಗುತ್ತದೆ. ಅಲ್ಲದೇ, ಫ‌ಲಿತಾಂಶದ ನಂತರ ಉತ್ತರ ಪತ್ರಿಕೆಯ ಫೋಟೋ ಕಾಪಿ ಇತ್ಯಾದಿಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಅದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಫ‌ಲಿತಾಂಶಕ್ಕಾಗಿ ಹೊಸ ಸಾಫ್ಟ್ವೇರ್‌ ಸಿದ್ಧಪಡಿಸಿದ್ದು, ಅದಕ್ಕೆ ವಿದ್ಯಾರ್ಥಿಗಳ ಹೆಸರು, ಕಾಲೇಜಿನ ಹೆಸರಿನ ಮಾಹಿತಿಯ ಅಪ್‌ಲೋಡ್‌ ಆರಂಭಿಸಿದ್ದೇವೆ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಫ‌ಲಿತಾಂಶ
ಪಿಯುಸಿ ಫ‌ಲಿತಾಂಶ ಪ್ರಕಟವಾದ ಒಂದು ವಾರದೊಳಗೆ ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಹೊರಬೀಳಲಿದೆ. ಎಸ್ಸೆಸ್ಸೆಲ್ಸಿ ಬೋರ್ಡ್‌ ಅಧಿಕಾರಿಗಳು ಫ‌ಲಿತಾಂಶ ಪ್ರಕಟಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಪಿಯುಸಿ ಫ‌ಲಿತಾಂಶದ ನಂತರವೇ ಎಸ್ಸೆಸ್ಸೆಲ್ಸಿ ಫ‌ಲಿತಾಂಶದ ದಿನಾಂಕ ಪ್ರಕಟಿಸಲಿದ್ದೇವೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫ‌ಲಿತಾಂಶ ಒಂದೇ ದಿನ ಪ್ರಕಟಿಸುವುದರಿಂದ ವಿದ್ಯಾರ್ಥಿಗಳಲ್ಲಿ ಹಾಗೂ ಪಾಲಕರಲ್ಲಿ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಇದೆ ಮತ್ತು ಮಾಧ್ಯಮದವರಿಗೂ ಇದರಿಂದ ಕಿರಿಕಿರಿಯಾಗಲಿದೆ. ಹೀಗಾಗಿ ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಪ್ರತ್ಯೇಕವಾಗಿಯೇ ಪ್ರಕಟಿಸಲಾಗುತ್ತದೆ ಎಂದು ಬೋರ್ಡ್‌ನ ಅಧಿಕಾರಿಯೊಬ್ಬರು ಹೇಳಿದರು.

Advertisement

ಮಾರ್ಚ್‌ 9 ರಿಂದ 27ರ ತನಕ ಪಿಯುಸಿ ಹಾಗೂ ಮಾರ್ಚ್‌ 30ರಿಂದ ಏ.12ರ ತನಕ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದಿದ್ದು, ಹಲವು ಗೊಂದಲಗಳ ನಡುವೆ ಮೌಲ್ಯಮಾಪನವೂ ಪೂರ್ಣಗೊಂಡಿದೆ. ಮೌಲ್ಯಮಾಪನಕ್ಕೆ ವಿನಾಃ ಕಾರಣ ಗೈರಾದ ಶಿಕ್ಷಕರಿಗೆ ಹಾಗೂ ಉಪನ್ಯಾಕರಿಗೆ ಪಿಯು ಇಲಾಖೆ ಮತ್ತು ಎಸ್ಸೆಸ್ಸೆಲ್ಸಿ ಬೋರ್ಡ್‌ ಮೂಲಕ ಪ್ರತ್ಯೇಕ ನೋಟಿಸ್‌ ಕೂಡ ಜಾರಿ ಮಾಡಲಾಗಿದೆ.

988 ಪರೀಕ್ಷಾ ಕೇಂದ್ರದಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಸುಮಾರು 6.50 ಲಕ್ಷ ವಿದ್ಯಾರ್ಥಿಗಳು ಹಾಗೂ 2770 ಕೇಂದ್ರದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಪಿಯುಸಿ ಫ‌ಲಿತಾಂಶ ಪ್ರಕಟಿಸಲು ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ವಿದ್ಯಾರ್ಥಿಗಳ ಮಾಹಿತಿ ಸಾಫ್ಟ್ವೇರ್‌ನಲ್ಲಿ ಅಪ್‌ಲೋಡ್‌ ಮಾಡುವ ಕಾರ್ಯ ಆರಂಭಿಸಿದ್ದೇವೆ. ಮಂಗಳವಾರ ಬೆಳಗ್ಗೆ ಫ‌ಲಿತಾಂಶದ ದಿನಾಂಕವನ್ನು ಖಚಿತಪಡಿಸಲಿದ್ದೇವೆ.
-ಸಿ.ಶಿಖಾ, ನಿರ್ದೇಶಕಿ, ಪಿಯು ಇಲಾಖೆ

ಪಿಯುಸಿ ಫ‌ಲಿತಾಂಶದ ನಂತರವೇ ಎಸ್ಸೆಸ್ಸೆಲ್ಸಿ ಫ‌ಲಿತಾಂಶದ ದಿನಾಂಕ ಪ್ರಕಟಿಸಲಿದ್ದೇವೆ. ಫ‌ಲಿತಾಂಶಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ವಿದ್ಯಾರ್ಥಿಗಳ, ಪಾಲಕರು ಯಾವುದೇ ರೀತಿಯಲ್ಲೂ ಆತಂಕ ಪಡುವ ಅಗತ್ಯ ಇಲ್ಲ. ನಿರ್ಧಿಷ್ಟ ಸಮಯದಲ್ಲಿ ಫ‌ಲಿತಾಂಶ ಹೊರಬೀಳಲಿದೆ.
-ಯಶೋಧ ಬೋಪಣ್ಣ, ನಿರ್ದೇಶಕಿ, ಎಸ್ಸೆಸ್ಸೆಲ್ಸಿ ಬೋರ್ಡ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next