ಧಾರವಾಡ : ಲಮಾಣಿ ತಾಂಡಾದ ಕೃಷಿ ಮತ್ತು ಕೃಷಿ ಕೂಲಿಕಾರ್ಮಿಕರ ಮಗಳು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದಾಳೆ.
ಧಾರವಾಡದ ಮಾಳಮಡ್ಡಿಯ ಕೆ.ಇ.ಬೋರ್ಡಿನ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ರವೀನಾ ಸೋಮಪ್ಪ ಲಮಾಣಿ (595) ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಇತಿಹಾಸ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದು ಗಮನ ಸೆಳೆದಿದ್ದು, ಕನ್ನಡ ವಿಷಯಕ್ಕೆ 99, ಶಿಕ್ಷಣಶಾಸ್ತ್ರ ಹಾಗೂ ಹಿಂದಿ ವಿಷಯಕ್ಕೆ ತಲಾ 98 ಅಂಕ ಪಡೆದು ಒಟ್ಟು 595 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ.
ಗದಗ ಜಿಲ್ಲೆಯ ಲಕ್ಷೇಶ್ವರ ತಾಲೂಕಿನ ಆದರಳ್ಳಿಯ ಸೋಮಪ್ಪ ಮತ್ತು ರೇಣವ್ವ ದಂಪತಿಗೆ ಐದು ಜನ ಮಕ್ಕಳಿದ್ದು, ಈ ಪೈಕಿ ರವೀನಾ 3ನೇ ಮಗಳು. ಕುಟುಂಬಕ್ಕೆ ಇರುವ ಅಲ್ಪ ಭೂಮಿಯಲ್ಲಿಯೇ ಕುಟುಂಬ ಕೃಷಿ ಮಾಡಿಕೊಂಡಿದ್ದು, ಕೃಷಿ ಚಟುವಟಿಕೆ ಇಲ್ಲದೇ ಇರುವಾಗ ಇಟ್ಟಿಗೆ ಭಟ್ಟಿ ಕೆಲಸಕ್ಕೂ ರವಿನಾಳ ತಂದೆ ತಾಯಿ ಕೂಲಿ ಮಾಡಲು ಹೋಗುತ್ತಾರೆ.
ಅಷ್ಟೇನು ಸ್ಥಿತಿವಂತರಲ್ಲದ ಕುಟುಂಬದ ಹಿನ್ನಲೆಯ ರವೀನಾ, 1 ರಿಂದ 10 ವರೆಗೆ ಗದಗ ಜಿಲ್ಲೆಯಲ್ಲಿಯೇ ವಿದ್ಯಾರ್ಜನೆ ಮಾಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.97 ರಷ್ಟು ಅಂಕ ಗಳಿಸಿದ್ದಳು. ಇದಾದ ಬಳಿಕ ಧಾರವಾಡದ ಮಾಳಮಡ್ಡಿಯ ಕೆ.ಇ.ಬೋರ್ಡಿನ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗಕ್ಕೆ ಪ್ರವೇಶ ಪಡೆದಿದ್ದಾಳೆ. ಇದೀಗ ಕಲಾ ವಿಭಾಗದಿಂದಲೇ ಉತ್ತಮ ಅಂಕ ಪಡೆದಿದಲ್ಲದೇ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಮುಂದೆ ಪದವಿ ಪಡೆದು ಯುಪಿಎಸ್‌ಸಿ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುವ ಇಚ್ಛೆ ಹೊಂದಿದ್ದಾಳೆ ರವೀನಾ. ಕಾಲೇಜಿನಲ್ಲೂ ಅತ್ಯಂತ ಚುರುಕಾಗಿ ಪಠ್ಯದ ಜೊತೆಗೆ ಇತರ ಚಟುವಟಿಕೆಗಳಲ್ಲಿಯೂ ಭಾಗಿಯಾಗುವ ರವೀನಾ ತನಗೆ ವಿದ್ಯೆ ಕಲಿಸಿದ ಗುರುಗಳ ಬಗ್ಗೆಯೂ ಅಷ್ಟೇ ಶ್ರದ್ದೇ ಹೊಂದಿದ್ದಾರೆ. ಕಾಲೇಜಿನ ಎಲ್ಲ ಅಧ್ಯಾಪಕರ ಬಾಯಲ್ಲೂ ರವೀನಾ ಅತ್ಯುತ್ತಮ ವಿದ್ಯಾರ್ಥಿನಿ ಎಂದು ಕರೆಯಿಸಿಕೊಂಡಿದ್ದಾರೆ.
ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಬೇಕೆಂಬ ಆಸೆಯಿತ್ತು. ಅದಕ್ಕಾಗಿ ಕಷ್ಟಪಟ್ಟಿದ್ದು, ಇದರ ಫಲವಾಗಿ ದ್ವಿತೀಯ ಸ್ಥಾನ ಲಭಿಸಿದೆ. ಇದು ಕೂಡ ಖುಷಿ ಕೊಟ್ಟಿದೆ. ಮುಂದೆ ಪದವಿ ಪಡೆದು ಯುಪಿಎಸ್‌ಸಿ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುತ್ತೇನೆ. ಕಷ್ಟಪಟ್ಟು ಓದಿ ಯುಪಿಎಸ್‌ಸಿ ಪಾಸಾಗುವ ಆಸೆಯಿದೆ.
-ರವೀನಾ ಲಮಾಣಿ, ರಾಜ್ಯಕ್ಕೆ ದ್ವಿತೀಯ, ಕಲಾ
ಇದನ್ನೂ ಓದಿ: Bagalkot Lok Sabha Election: ಬಿಜೆಪಿಗೂ ಎದುರಾಗಿದೆ ಭಿನ್ನಮತ ಬಿಕ್ಕಟ್ಟು!