Advertisement

ದ್ವಿತೀಯ ಪಿಯು ಮರುಮೌಲ್ಯಮಾಪನ: ಒಂದು ಅಂಕವನ್ನೂ ಪರಿಗಣಿಸಲು ಪಟ್ಟು !

12:04 AM Jan 23, 2023 | Team Udayavani |

ಮಂಗಳೂರು: ದ್ವಿತೀಯ ಪಿಯು ಮರುಮೌಲ್ಯ ಮಾಪನದ ಅಂಕ ಪರಿಗಣನೆ ನಿಯಮ ತಿದ್ದುಪಡಿಯ ಕೂಗು ಮತ್ತೆ ಕೇಳಿಬಂದಿದ್ದು, ವ್ಯತ್ಯಾಸವಾಗುವ ಒಂದು ಅಂಕವನ್ನು ಕೂಡ ಪರಿಗಣಿಸುವಂತೆ ಕಾಲೇಜುಗಳ ಪ್ರಾಂಶುಪಾಲರು ಸರಕಾರದ ಗಮನ ಸೆಳೆದಿದ್ದಾರೆ.

Advertisement

ಪದವಿಪೂರ್ವ ಶಿಕ್ಷಣ ಇಲಾಖೆಯ ನಿಯಮಾನುಸಾರ ಪ್ರಸ್ತುತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಉತ್ತರಪತ್ರಿಕೆಗಳ ಮರು ಮೌಲ್ಯಮಾಪನದಲ್ಲಿ 6 ಅಂಕಗಳಿಗಿಂತ ಅಧಿಕ ವ್ಯತ್ಯಾಸ ಬಂದಾಗ ಮಾತ್ರ ಪರಿಗಣಿಸಲಾಗುತ್ತಿದೆ. 6ಕ್ಕಿಂತ ಕಡಿಮೆ ಅಂಕ ಬಂದರೆ ಪರಿಗಣಿಸುತ್ತಿಲ್ಲ. ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನದ ಲಾಭ ದೊರೆಯುತ್ತಿಲ್ಲ.

ವಿದ್ಯಾರ್ಥಿ ಹಿತದೃಷ್ಟಿಯಿಂದ ನಿಯಮ ತಿದ್ದುಪಡಿಗೆ ಸರಕಾರ, ಇಲಾಖಾ ಹಂತದಲ್ಲಿ ಕಳೆದ ಶೈಕ್ಷಣಿಕ ವರ್ಷವೇ ಚರ್ಚೆಯಾಗಿತ್ತು. ಅರ್ಧ ಅಂಕ ಹೆಚ್ಚುವರಿ ದೊರೆತರೂ ಸೇರಿಸುವ ನೆಲೆಯಲ್ಲಿ ಇಲಾಖೆ ಚಿಂತನೆ ನಡೆಸಿತ್ತು. ಆದರೆ ಅಂತಿಮ ನಿರ್ಧಾರ ಮಾತ್ರ ಆಗಿಲ್ಲ. ಪಿಯು ಪರೀಕ್ಷೆಗೆ ಕೆಲವೇ ದಿನ ಮಾತ್ರ ಬಾಕಿ ಇದ್ದು, ಸರಕಾರ ಶೀಘ್ರ ನಿರ್ಧಾರ ಕೈಗೊಳ್ಳಬೇಕಿದೆ.

ವಿದ್ಯಾರ್ಥಿಗಳಿಗೆ ಅಂಕವಿಲ್ಲ!
ಕಳೆದ ವರ್ಷ ಮರುಮೌಲ್ಯಮಾಪ ನಕ್ಕೆ ಹಾಕಿದವರ ಪೈಕಿ ವಿಜ್ಞಾನ ವಿಷಯದಲ್ಲಿ 4 ಅಂಕಗಳಿಗಿಂತ ಅಧಿಕ ಅಂಕ 558 ಮಂದಿ, 4ಕ್ಕಿಂತ ಕಡಿಮೆ ಅಂಕ 291 ಮಂದಿ ಪಡೆದಿದ್ದಾರೆ. ಕಲಾ ಮತ್ತು ವಾಣಿಜ್ಯದಲ್ಲಿ 6ಕ್ಕಿಂತ ಅಧಿಕ ಅಂಕ 1,079 ಮಂದಿ ಹಾಗೂ 6ಕ್ಕಿಂತ ಕಡಿಮೆ 119 ಮಂದಿ ಪಡೆದಿದ್ದಾರೆ. ಅಂದಹಾಗೆ ವಿದ್ಯಾರ್ಥಿಗೆ 6 ಅಂಕಗಳಿಗಿಂತ ಅಧಿಕ ಅಂಕ ದೊರೆತರೆ ಮಾತ್ರ ಅದನ್ನು ಸೇರ್ಪಡೆ ಮಾಡಲಾಗಿದೆ. ಅದಕ್ಕಿಂತ ಕಡಿಮೆ ಅಂಕ ಪಡೆದವರಿಗೆ ಇದರ ಲಾಭ ದೊರೆತಿರಲಿಲ್ಲ!

“ಸ್ಕ್ಯಾನ್‌x ಕಾಪಿ’ ಜಿಲ್ಲಾ ಕೇಂದ್ರದಲ್ಲೇ ಸಿಗಲಿ!
ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾದ ಅನಂತರ ಉತ್ತರ ಪತ್ರಿಕೆಗಳ “ಸ್ಕ್ಯಾನ್‌x ಕಾಪಿ’ಯನ್ನು ನೀಡುವಲ್ಲಿ ಇಲಾಖೆಯು ಹಲವು ನ್ಯೂನತೆಗಳನ್ನು ಎದುರಿಸುತ್ತಿದೆ. “ಸ್ಕ್ಯಾನ್‌x ಕಾಪಿ’ ಪಡೆದುಕೊಳ್ಳಲು ಬೇಡಿಕೆ ಸಲ್ಲಿಸಿರುವ ವಿದ್ಯಾರ್ಥಿಗೆ ಕ್ಲಪ್ತ ಸಮಯ ದಲ್ಲಿ ಕಾಪಿ ಸಿಗದೆ ಪರದಾಡುವ ಪರಿಸ್ಥಿತಿ ಇದೆ. ಇದಕ್ಕೆ ಮುಕ್ತಿ ನೀಡಲು “ಸ್ಕ್ಯಾನ್‌ ಕಾಪಿ’ಯನ್ನು ಒದಗಿಸಲು ಮೌಲ್ಯ ಮಾಪನ ಕೇಂದ್ರಗಳಿರುವ ಪ್ರತೀ ಜಿಲ್ಲೆ ಯಲ್ಲಿ ಯಾವುದಾದರೂ ಒಂದು ಮೌಲ್ಯ ಮಾಪನ ಕೇಂದ್ರದಲ್ಲಿ ವ್ಯವಸ್ಥೆ ಮಾಡಿದರೆ ಉತ್ತಮ. ಇದು ಸಾಧ್ಯವಾದರೆ ಅದೇ ಕೇಂದ್ರ ದಲ್ಲಿ ಕಾಪಿ ಅಪ್‌ಲೋಡ್‌ ಮಾಡಲು ಅವಕಾಶ ವಾಗಲಿದೆ ಎಂದು ಪ್ರಾಂಶುಪಾಲರ ಸಂಘವು ಸರಕಾರವನ್ನು ಒತ್ತಾಯಿಸಿದೆ.

Advertisement

ಒಂದು ಅಂಕವೂ ಯಾಕೆ ಮುಖ್ಯ?
ವಿದ್ಯಾರ್ಥಿಯ ಶೈಕ್ಷಣಿಕ ಹಾಗೂ ಉನ್ನತ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಒಂದು ಅಂಕವೂ ಮುಖ್ಯವಾಗುತ್ತದೆ. ಸಿಇಟಿ ಪರೀಕ್ಷೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂಕಗಳನ್ನೂ ಪರಿಗಣಿಸುವುದರಿಂದ ಒಂದು ಅಂಕದ ವ್ಯತ್ಯಾಸವೂ ವಿದ್ಯಾರ್ಥಿಯ ರ್‍ಯಾಂಕ್‌ ಪಟ್ಟಿಯಲ್ಲಿ ಅಧಿಕ ವ್ಯತ್ಯಾಸವನ್ನು ತರಬಲ್ಲುದಾಗಿದೆ. ಹೀಗಾಗಿ ಒಂದು ಅಂಕವನ್ನೂ ಪರಿಗಣಿಸುವುದು ಬಹುಮುಖ್ಯ. ದ.ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘವು ಸರಕಾರಕ್ಕೆ ಪತ್ರ ಬರೆದು ಒಂದು ಅಂಕದ ವ್ಯತ್ಯಾಸವನ್ನೂ ಪರಿಗಣಿಸುವಂತೆ ಒತ್ತಾಯಿಸಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮರುಮೌಲ್ಯಮಾಪನದ ವೇಳೆ ಒಂದು ಅಂಕದ ವ್ಯತ್ಯಾಸವನ್ನೂ ಪರಿಗಣಿಸಬೇಕು ಎಂದು ಒತ್ತಾಯಿಸಿ ಇಲಾಖೆಗೆ ಸಂಘದ ಮೂಲಕ ಮನವಿ ಸಲ್ಲಿಸಲಾಗಿದೆ. ಒಂದು ಅಂಕವೂ ಅಮೂಲ್ಯವಾದ್ದರಿಂದ ನಿಯಮಾವಳಿ ತಿದ್ದುಪಡಿಗೆ ಒತ್ತಾಯಿಸಲಾಗಿದೆ.
-ಕೆ.ಎನ್‌. ಗಂಗಾಧರ ಆಳ್ವ, ಅಧ್ಯಕ್ಷರು, ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ದ.ಕ.

ದ್ವಿತೀಯ ಪಿಯು ವಿದ್ಯಾರ್ಥಿಗಳ ಮರು ಮೌಲ್ಯಮಾಪನದಲ್ಲಿ ಒಂದು ಅಂಕವನ್ನೂ ಪರಿಗಣಿಸುವ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ಆಗಿಲ್ಲ. ಈ ಕುರಿತು ಆದೇಶವಾದರೆ ಜಾರಿಗೊಳಿಸಲಾಗುವುದು.
-ರಾಮಚಂದ್ರನ್‌ ನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next