Advertisement

ಪಿಯುಸಿ ಪರೀಕ್ಷೆ ; 9 ಪುಟಗಳ ಮೌಲ್ಯಮಾಪನವನ್ನೇ ಮಾಡದಿರುವುದು ಬೆಳಕಿಗೆ !

09:17 PM Jul 12, 2022 | Team Udayavani |

ಸಾಗರ : ಇಲ್ಲಿನ ಖಾಸಗಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯೊಬ್ಬ ಬರೆದಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅರ್ಥಶಾಸ್ತ್ರ ವಿಷಯದಲ್ಲಿ ಪರೀಕ್ಷ ಮೌಲ್ಯಮಾಪಕರು 9 ಉತ್ತರ ಬರೆದ ಪುಟಗಳ ಮೌಲ್ಯಮಾಪನವನ್ನೇ ಮಾಡದೆ ಇರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮೌಲ್ಯಮಾಪಕರು ಮೊದಲ ಆರು ಪುಟಗಳನ್ನಷ್ಟೇ ಮೌಲ್ಯಮಾಪನ ಮಾಡಿ ಕೇವಲ 23 ಅಂಕ ನೀಡಿದ್ದರಿಂದ ವಿದ್ಯಾರ್ಥಿ ಅನುತ್ತೀರ್ಣನಾಗಿದ್ದಾನೆ! ವಿದ್ಯಾರ್ಥಿಯ ಪೋಷಕರು ಉತ್ತರ ಪತ್ರಿಕೆಯ ನಕಲು ಪ್ರತಿ ತರಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ಮೌಲ್ಯಮಾಪನ ಕಾರ‍್ಯ ಅಪೂರ್ಣವಾಗಿರುವುದು ಗಮನಕ್ಕೆ ಬಂದಿದೆ.

Advertisement

40 ಪುಟಗಳ ಉತ್ತರ ಪುಸ್ತಿಕೆಯಲ್ಲಿ ವಿದ್ಯಾರ್ಥಿ ಮೊದಲ 6 ಪುಟಗಳಲ್ಲಿ ಉತ್ತರ ಬರೆದಿದ್ದಾನೆ. ಆ ನಂತರದ ಒಂದು ಪುಟದಲ್ಲಿ ಉತ್ತರವೊಂದಕ್ಕೆ ಪ್ರಯತ್ನಿಸಿದ್ದರೆ ಮುಂದಿನ ಪುಟವನ್ನು ಖಾಲಿ ಬಿಟ್ಟಿದ್ದಾನೆ. ಆದರೆ ಅವೆರಡೂ ಪುಟಗಳಿಗೆ ಉದ್ದಗೀಟುಗಳನ್ನು ಹಾಕಿರುವುದು ಹಾಗೂ ನಿಯಮಾನುಸಾರ ಕೊಠಡಿ ಮೇಲ್ವಿಚಾರಕರು ಇಲ್ಲೆಲ್ಲೂ ‘ಮುಕ್ತಾಯವಾಗಿದೆ’ ಎಂಬ ಸೀಲ್ ಹಾಕದಿರುವುದರಿಂದ ಮೌಲ್ಯಮಾಪಕರು ಮುಂದಿನ ಪುಟಗಳನ್ನು ನೋಡಲೇಬೇಕಾಗಿದ್ದರೂ ತೋರಿದ ನಿರ್ಲಕ್ಷ್ಯ ವಿದ್ಯಾರ್ಥಿ ಅನುತ್ತೀರ್ಣನಾಗುವ ಫಲಿತಾಂಶ ಪಡೆಯುವಂತಾಗಿದೆ.

ಮೊದಲ ಆರು ಪುಟಗಳು ಹಾಗೂ 8ನೇ ಪುಟದಿಂದ 17ನೆ ಪುಟಗಳವರೆಗೆ ಉತ್ತರ ಬರೆದಿದ್ದಾನೆ. ಪರೀಕ್ಷಾ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಕೊಠಡಿ ಮೇಲ್ವಿಚಾರಕರು 18ನೆಯ ಪುಟದಲ್ಲಿ ನಿಯಮಾನುಸಾರ ಎಂಡ್ ಸೀಲ್ ಹಾಕಿದ್ದಾರೆ. ಮುಕ್ತಾಯವಾಗಿದೆ ಎಂಬ ಸೀಲ್ ಹಾಕಿರುವ ಕೊಠಡಿ ಮೇಲ್ವಿಚಾರಕರು ತಮ್ಮ ಹಸ್ತಾಕ್ಷರ ಹಾಕಿ, ದಿನಾಂಕ ನಮೂದಿಸಿದ್ದಾರೆ. ಮೌಲ್ಯಮಾಪನ ಕಾರ‍್ಯ ನಡೆಸಿದ ಉಪನ್ಯಾಸಕರು 1ರಿಂದ 24 ವರೆಗಿನ ಪ್ರಶ್ನೆಗಳಲ್ಲಿ 20 ಪ್ರಶ್ನೆಗಳ ಮೌಲ್ಯ ಮಾಪನ ಮಾಡಿದ್ದಾರೆ. ಒಂದು ಅಂಕ ಮತ್ತು 2 ಅಂಕಗಳ ಪ್ರಶ್ನೆಗಳನ್ನು ಮಾತ್ರ ಮೌಲ್ಯಮಾಪನ ಮಾಡಿ, ಸರಿ ಇರುವ ಉತ್ತರಗಳಿಗೆ ಅಂಕ ನೀಡಿದ್ದಾರೆ. ಉತ್ತರ ಪತ್ರಿಕೆಯ ಮೊದಲ ಪುಟದಲ್ಲಿರುವ ಅಂಕ ನಮೂದಿಸುವ ಜಾಗದಲ್ಲಿ ವಿದ್ಯಾರ್ಥಿ ಒಟ್ಟು 23 ಅಂಕ ಪಡೆದುಕೊಂಡಿರುವುದಾಗಿ ದಾಖಲಿಸಿದ್ದಾರೆ. ಇದರ ಮೇಲೆ ಉಪ ಮುಖ್ಯಮೌಲ್ಯಮಾಪಕರು ಸಹ ತಮ್ಮ ಹಸ್ತಾಕ್ಷರ ಹಾಕಿದ್ದಾರೆ.

ವಿದ್ಯಾರ್ಥಿಯು 37 ನೆಯ ಪ್ರಶ್ನೆಯಿಂದ ತೊಡಗಿ 17ನೆಯ ಪುಟದವರೆಗೆ ಒಟ್ಟು 58 ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾನೆ. ಆದರೆ 9 ಪುಟಗಳ ಮೌಲ್ಯ ಮಾಪನ ಕಾರ‍್ಯ ಆಗಿಲ್ಲ. ಸುಮಾರು 8 ಪ್ರಶ್ನೆಗಳನ್ನು ಸಹಾಯಕ ಮೌಲ್ಯಮಾಪಕರು ಮೌಲ್ಯಮಾಪನ ಮಾಡಿ, ಸೂಕ್ತ ಅಂಕಗಳನ್ನು ನೀಡಿಲ್ಲ. 4, 6 ಮತ್ತು 5 ಅಂಕಗಳ ಪ್ರಾಜೆಕ್ಟ್ ಅವಲಂಬಿತ 2 ಪ್ರಶ್ನೆಗಳನ್ನು ಮೌಲ್ಯಮಾಪನ ಮಾಡಲಾಗಿಲ್ಲ. ಈ ಪ್ರಶ್ನೆಗಳಿಗೆ ಉತ್ತರಿಸುವ ವಿದ್ಯಾರ್ಥಿ ಸುಮಾರು 30 ಅಂಕಗಳಿಸುವ ಸಾಧ್ಯತೆ ಇತ್ತು. ಒಟ್ಟು 50ಕ್ಕೂ ಹೆಚ್ಚು ಅಂಕ ಪಡೆದುಕೊಳ್ಳಬಹುದಾಗಿದೆ. ಮೌಲ್ಯಮಾಪನ ಕಾರ‍್ಯದ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿ ಅರ್ಥಶಾಸ್ತ್ರ ವಿಷಯದಲ್ಲಿ ಫೇಲ್ ಆಗಿದ್ದು, ಈಗ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಾನೆ. ಶೇ 70 ಫಲಿತಾಂಶ ಗಳಿಸಿದ್ದು, ಒಂದು ವಿಷಯದಲ್ಲಿ ಫೇಲ್ ಆಗಿದ್ದರಿಂದ ಪೂರಕ ಪರೀಕ್ಷೆಗೆ 200 ರೂ. ಶುಲ್ಕ ಪಾವತಿಸಿದ್ದಾನೆ. ಸ್ಕ್ಯಾನ್ ಪ್ರತಿಗೆ 500 ರೂ ಮತ್ತು ಮರುಮೌಲ್ಯಮಾಪನಕ್ಕೆ 1600 ರೂ ಶುಲ್ಕ ಪಾವತಿಸಿದ್ದಾನೆ.

ಅರ್ಥಶಾಸ್ತ್ರ ವಿಷಯದಲ್ಲಿ ನಾನು ಫೇಲ್ ಆಗುವಷ್ಟು ಕಡಿಮೆ ಅಂಕ ಗಳಿಸಲು ಸಾಧ್ಯವಿರಲಿಲ್ಲ. ಆದ್ದರಿಂದ ಉತ್ತರಪತ್ರಿಕೆಯ ಸ್ಕ್ಯಾನ್ ಪ್ರತಿಯನ್ನು ಶುಲ್ಕ ಪಾವತಿಸಿ ತರಿಸಿಕೊಂಡಿದ್ದೇನೆ. ನಕಲು ಪ್ರತಿ ಗಮನಿಸಿದಾಗ ಸುಮಾರು ೯ ಪುಟಗಳ ಮೌಲ್ಯಮಾಪನ ಮಾಡದಿರುವುದು ಗಮನಕ್ಕೆ ಬಂದಿದೆ. ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದೇನೆ. ಇದೊಂದು ವಿಷಯದಲ್ಲಿ ಮಾತ್ರ ನಾನು ಫೇಲ್ ಆಗಿದ್ದೇನೆ.
– ನೊಂದ ವಿದ್ಯಾರ್ಥಿ, ಸಾಗರ

Advertisement

23 ಅಂಕ ಗಳಿಸಿರುವ ವಿದ್ಯಾರ್ಥಿಯ ಉತ್ತರ ಪತ್ರಿಕೆಯ ನಕಲು ಪ್ರತಿ ಗಮನಿಸಿದ್ದೇನೆ. ಆರಂಭದ 6 ಪುಟಗಳ ಉತ್ತರ ಮಾತ್ರ ಮೌಲ್ಯಮಾಪನ ಮಾಡಲಾಗಿದೆ. ಖಾಲಿ ಪುಟಗಳ ನಂತರ ವಿದ್ಯಾರ್ಥಿ ಉತ್ತರ ಬರೆದಿದ್ದು, ಅವುಗಳನ್ನು ಮೌಲ್ಯಮಾಪನ ಮಾಡಿಲ್ಲ. ಮೌಲ್ಯ ಮಾಪನ ಮಾಡಿದರೆ ಸುಮಾರು 30 ಅಂಕಗಳನ್ನು ನೀಡಬೇಕಾಗುತ್ತದೆ.
– ರೇಖಾ, ಅರ್ಥಶಾಸ್ತ್ರ ಉಪನ್ಯಾಸಕರು, ಸಾಗರ.

Advertisement

Udayavani is now on Telegram. Click here to join our channel and stay updated with the latest news.

Next