Advertisement

ಶುಲ್ಕ ಪಾವತಿಸಿದರೂ ಉತ್ತರ ಪತ್ರಿಕೆ ಪ್ರತಿಗೆ ಪರದಾಟ

10:27 AM May 24, 2017 | Team Udayavani |

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ನಿಗದಿಪಡಿಸಿರುವ ಶುಲ್ಕ ಪಾವತಿಸಿ, ವಿದ್ಯಾರ್ಥಿಗಳು ತಾವೇ ಬರೆದಿರುವ ಉತ್ತರ ಪತ್ರಿಕೆಯ ಫೋಟೋ ಪ್ರತಿ ಪಡೆಯಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿತೀಯ ಪಿಯು ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಆನ್‌ಲೈನ್‌ ವ್ಯವಸ್ಥೆ ಮೂಲಕ ಅವರ ಉತ್ತರ ಪತ್ರಿಕೆಯ ಫೋಟೋ ಪ್ರತಿ ಒದಗಿಸುವ ವ್ಯವಸ್ಥೆ ಪಿಯು ಇಲಾಖೆ ಮಾಡಿಕೊಂಡಿದೆ.

Advertisement

ಉತ್ತರ ಪತ್ರಿಕೆಯ ಫೋಟೋ ಪ್ರತಿ ಬಯಸುವ ವಿದ್ಯಾರ್ಥಿ ಒಂದೊಂದು ವಿಷಯದ ಫೋಟೋ ಪ್ರತಿಗೆ 400ರೂ. ಪ್ರತ್ಯೇಕವಾಗಿ ಪಾವತಿಸಬೇಕು. ಹಣ ಪಾವತಿಸಿದರೂ, ಫೋಟೋ ಪ್ರತಿ ಈಗ ಸುಲಭದಲ್ಲಿ ಸಿಗುತ್ತಿಲ್ಲ.

ಸದ್ಯ ಫೋಟೋ ಪ್ರತಿಗಾಗಿ ಹಣ ಪಾವತಿಸಿರುವ ಸಾವಿರಾರು ವಿದ್ಯಾರ್ಥಿಗಳು ಇದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಪಿಯು ಇಲಾಖೆಯಿಂದ ವಿದ್ಯಾರ್ಥಿಗಳ ಇ-ಮೇಲ್‌ಗೆ ಫೋಟೋ ಪ್ರತಿ ಕಳುಹಿಸಲಾಗುತ್ತದೆ. ಯಾರದೋ ಹೆಸರಿನ
ಉತ್ತರ ಪ್ರತಿ ಇನ್ಯಾರಿಗೋ ಇ-ಮೇಲ್‌ ಸೇರುತ್ತಿದೆ. ಇ-ಮೇಲ್‌ಗೆ ಬಂದಿರುವ ಡಾಕ್ಯುಮೆಂಟ್‌ ಡೌನ್‌ಲೋಡ್‌ ಮಾಡಿದ ನಂತರವೇ ಈ ವ್ಯತ್ಯಾಸ ತಿಳಿಯುತ್ತಿದೆ.

ಫೋಟೋ ಪ್ರತಿಯಲ್ಲೂ ಸ್ಪಷ್ಟತೆಯಿಲ್ಲ: ಸಾವಿರಾರು ವಿದ್ಯಾರ್ಥಿಗಳು ಸೀಮಿತ ಅವಧಿಯಲ್ಲಿ ಫೋಟೋ ಪ್ರತಿಗೆ ಅರ್ಜಿ ಸಲ್ಲಿಸಿರುವುದರಿಂದ ಇಲಾಖೆಯಿಂದ ಅದರ ನಿರ್ವಹಣೆಯಲ್ಲಿ ಗೊಜಲಾಗಿದೆ. ತಾವು ಬರೆದಿರುವ ಉತ್ತರ ಹಾಗೂ ಅದಕ್ಕೆ ಮೌಲ್ಯಮಾಪಕರು ನೀಡಿರುವ ಅಂಕ ತಿಳಿಯಲು ಫೋಟೋ ಪ್ರತಿಗೆ ಅರ್ಜಿ ಸಲ್ಲಿಸಿದವರಲ್ಲಿ ಅನೇಕರಿಗೆ ಇನ್ನೂ ಫೋಟೋ ಪ್ರತಿ ಸಿಕ್ಕಿಲ್ಲ. ಇಲಾಖೆ ಕಳುಹಿಸಿರುವ ಇ-ಮೇಲ್‌ನಿಂದ ಡೌನ್‌ಲೋಡ್‌ ಮಾಡಿಕೊಂಡಿರುವ ಅನೇಕರ ಫೋಟೋ ಪ್ರತಿಯಲ್ಲಿ ಸ್ಪಷ್ಟತೆ ಇಲ್ಲ.

ಫೋಟೋ ಪ್ರತಿಗೆ ಅರ್ಜಿ ಸಲ್ಲಿಸಲು ಮೇ 27ರ ತನಕ ಕಾಲಾವಕಾಶ ನೀಡಲಾಗಿದೆ. ಫೋಟೋ ಪ್ರತಿಯ ಆಧಾರದಲ್ಲೇ ಅನೇಕ ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಹಾಗೂ ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸುತ್ತಾರೆ. ಫೋಟೋ ಪ್ರತಿ ನೀಡುವುದಕ್ಕೆ ವಿಳಂಬವಾದರೆ, ಮರು ಮೌಲ್ಯಮಾಪನ ಹಾಗೂ ಅಂಕದ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಅವಕಾಶವೇ ಇರುವುದಿಲ್ಲ.

Advertisement

ಇ-ಮೇಲ್‌ ವ್ಯವಹಾರ: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಫೋಟೋ ಪ್ರತಿಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಇ-ಮೇಲ್‌ ಐಡಿಯನ್ನು ಕಡ್ಡಾಯವಾಗಿ ಪಿಯು ಇಲಾಖೆಗೆ ಕೊಟ್ಟಿರಬೇಕು. ವಿದ್ಯಾರ್ಥಿಯು ಫೋಟೋ ಪ್ರತಿಗೆ ಶುಲ್ಕ ಪಾವತಿಸಿರುವುದು ಖಚಿತವಾದ ನಂತರ, ಪಿಯು ಇಲಾಖೆಯಿಂದ ಅವರ ಮೊಬೈಲ್‌ಗೆ ಒಂದು ಸಂದೇಶ ರವಾನೆ ಮಾಡುತ್ತಾರೆ. ಆ ಸಂದೇಶದ ಆಧಾರದಲ್ಲಿ ವಿದ್ಯಾರ್ಥಿ ತಮ್ಮ ಇ-ಮೇಲ್‌ ತೆರೆದು, ಇಲಾಖೆಯಿಂದ ಕಳುಹಿಸಿರುವ ಡಾಕ್ಯುಮೆಂಟ್‌ ಓಪನ್‌ ಮಾಡಿ, ಫೋಟೋ ಪ್ರತಿ ಪಡೆಯಬಹುದು.

ಡೌನ್‌ ಲೋಡ್‌ ಮಾಡಿಕೊಂಡಿರುವ ಫೋಟೋ ಪ್ರತಿಯಲ್ಲಿ ವ್ಯತ್ಯಾಸಗಳಿದ್ದರೆ, pue2017scanningerrors@gmail.comಗೆ ಕಳುಹಿಸಬೇಕು. ಇಲಾಖೆ ಅಧಿಕಾರಿಗಳು ಬಂದಿರುವ ದೂರುಗಳನ್ನು ಪರಿಶೀಲಿಸಿ, ಇ-ಮೇಲ್‌ ಮೂಲಕವೆ ಉತ್ತರ ನೀಡುತ್ತಾರೆ ಅಥವಾ ಹೊಸದಾಗಿ ಫೋಟೋ ಪ್ರತಿ ಕಳುಹಿಸುತ್ತಾರೆ. ಇಲ್ಲಿ ವಿದ್ಯಾರ್ಥಿ ಮತ್ತು ಇಲಾಖೆ ನಡುವೆ ಮುಖಾಮುಖೀ ಸಂಪರ್ಕ ಇರುವುದಿಲ್ಲ.

ಕರೆ ಸ್ವೀಕರಿಸುವವರೇ ಇಲ್ಲ: ಇಲಾಖೆಯ ಮಲ್ಲೇಶ್ವರಂ ಕೇಂದ್ರ ಕಚೇರಿಯ ನಾಲ್ಕು ದೂರವಾಣಿಗಳನ್ನು ವೆಬ್‌ಸೈಟ್‌ನಲ್ಲಿ ನೀಡಿದ್ದಾರೆ. ಅದಕ್ಕೆ ಕರೆ ಮಾಡಿದರೆ ಸ್ವೀಕರಿಸುವುದೇ ಇಲ್ಲ. ಹೀಗಾಗಿ ರಾಜ್ಯದ ಬೇರೆ ಬೇರೆ ಭಾಗದ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹೇಳಿಕೊಳ್ಳಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next