Advertisement

“ಪಿಯುಸಿ ಆರಂಭದಲ್ಲೇ ಸಿಇಟಿ ಅರ್ಜಿ ತುಂಬುವ ತರಬೇತಿ’

08:45 PM Nov 25, 2022 | Team Udayavani |

ಬೆಂಗಳೂರು: ಸಿಇಟಿ ಅರ್ಜಿ ಭರ್ತಿ ಮಾಡುವಾಗ ಆಗುವ ಲೋಪಗಳಿಗೆ ಕಡಿವಾಣ ಹಾಕುವ ಮತ್ತು ಸಮಯ ಉಳಿಸುವ ಉದ್ದೇಶದಿಂದ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಇರುವಾಗಲೇ ಸಿಇಟಿ ಅರ್ಜಿ ತುಂಬಲು ಕಲಿಸುವ ವಿದ್ಯಾರ್ಥಿ ಸ್ನೇಹಿ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Advertisement

ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಯಾವುದೇ ತಪ್ಪಿಲ್ಲದೆ ಸಿಇಟಿ ಅರ್ಜಿ ತುಂಬುವುದನ್ನು ಕಲಿಸಲು ವಿಜ್ಞಾನ ಪಠ್ಯಕ್ರಮವಿರುವ ಪ್ರತಿಯೊಂದು ಪದವಿಪೂರ್ವ ಕಾಲೇಜಿನಲ್ಲೂ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದೂ ಸಚಿವರು ತಿಳಿಸಿದ್ದಾರೆ.

ಈ ಸಂಬಂಧವಾಗಿ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಅವರ ಜತೆ ಸಭೆ ನಡೆಸಿದ ಬಳಿಕ ಸಚಿವ ಅಶ್ವತ್ಥನಾರಾಯಣ ಮಾತನಾಡಿ, ಈಗ ಸಾಕಷ್ಟು ವಿದ್ಯಾರ್ಥಿಗಳು ಸಿಇಟಿ ಅರ್ಜಿಯಲ್ಲಿ ಆರ್‌.ಡಿ. ಸಂಖ್ಯೆ, ತಂದೆಯ ಹೆಸರು, ಜಾತಿಯ ಹೆಸರು ಇತ್ಯಾದಿಗಳನ್ನು ತಪ್ಪಾಗಿ ದಾಖಲಿಸುತ್ತಿದ್ದಾರೆ. ಇದನ್ನೆಲ್ಲ ಸರಿಪಡಿಸಲು ಏಳೆಂಟು ಬಾರಿ ಅವಕಾಶ ಕೊಡುತ್ತಿದ್ದು, ಇದರಿಂದ ಸಮಯ ವ್ಯರ್ಥವಾಗುತ್ತಿರುವುದರ ಜತೆಗೆ ಉಳಿದ ಪ್ರಕ್ರಿಯೆಗಳು ವಿಳಂಬ ಆಗುತ್ತಿವೆ. ಹೀಗಾಗಿ ಪಿಯುಸಿಯಲ್ಲಿ ಇರುವಾಗಲೇ ಸಿಇಟಿ ಅರ್ಜಿ ತುಂಬಲು ಕಲಿಸುವ ವಿದ್ಯಾರ್ಥಿಸ್ನೇಹಿ ವ್ಯವಸ್ಥೆ ರೂಪಿಸಲಾಗುವುದು ಎಂದರು.

ಇದಕ್ಕಾಗಿ ಪ್ರತಿ ಕಾಲೇಜಿನಲ್ಲೂ ತಲಾ 100 ವಿದ್ಯಾರ್ಥಿಗಳಿಗೆ ಒಬ್ಬ ಪುರುಷ ಮತ್ತು ಓರ್ವ ಮಹಿಳಾ ಉಪನ್ಯಾಸಕರನ್ನು ಸಂಯೋಜಕರನ್ನಾಗಿ ನೇಮಿಸಲಾಗುವುದು. ಇದರ ಜತೆಗೆ ಒಂದು ಜಿಲ್ಲೆಗೆ ತಲಾ ನಾಲ್ವರು ಮಾಸ್ಟರ್‌ ಟ್ರೈನರ್‌ಗಳನ್ನು ಒದಗಿಸಲಾಗುವುದು. ಸಂಯೋಜಕರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ತರಬೇತಿ ಕೊಡಲಾಗುವುದು. ಹಾಗೆಯೇ ಮಾಸ್ಟರ್‌ ಟ್ರೈನರ್‌ಗಳಿಗೆ ಪ್ರಾಧಿಕಾರದಿಂದ ಪ್ರತ್ಯೇಕವಾಗಿ ತರಬೇತಿ ನೀಡಲಾಗುವುದು ಎಂದು ಸಚಿವರು ವಿವರಿಸಿದರು.

ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳಿಗೆ ನಾಲ್ಕು ಹಂತದಲ್ಲಿ ಸಿಇಟಿ ಅರ್ಜಿ ತುಂಬುವುದನ್ನು ಕಲಿಸಲಾಗುವುದು. ಮೊದಲು ಅಗತ್ಯ ಮಾಹಿತಿ ನೀಡುವಿಕೆ, ಎರಡನೇ ಹಂತದಲ್ಲಿ ಮೀಸಲಾತಿ, ಇದಕ್ಕೆ ಅನ್ವಯವಾಗುವ ಆರ್‌.ಡಿ. ಸಂಖ್ಯೆ, ಶೈಕ್ಷಣಿಕ ವಿದ್ಯಾರ್ಹತೆ ಕುರಿತು ಅರಿವು ಮೂಡಿಸಲಾಗುವುದು. ಅದರಂತೆ ಈ ವರ್ಷದ ಡಿಸೆಂಬರ್‌ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಮೀಸಲಾತಿ ಪ್ರಮಾಣ ಪತ್ರಗಳು, ವಿದ್ಯಾರ್ಥಿ ಮತ್ತು ತಂದೆಯ ಹೆಸರುಗಳು ಸರಿಯಾಗಿ ಇರುವ ಬಗ್ಗೆ ಮಾಹಿತಿ ಕೊಡಲಾಗುವುದು.

Advertisement

ಜನವರಿಯಲ್ಲಿ ಅರ್ಜಿ ತುಂಬಲು ಅವಕಾಶ, ಫೆಬ್ರವರಿಯಲ್ಲಿ ಸೀಟು ಹಂಚಿಕೆ, ದಾಖಲಾತಿ ಪರಿಶೀಲನೆ ಮತ್ತು ಇತರ ಪ್ರಕ್ರಿಯೆ ಬಗ್ಗೆ ಮನದಟ್ಟು ಮಾಡಿಕೊಡಲಾಗುವುದು ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಪ್ರಾಥಮಿಕ ಶಿಕ್ಷಣ ಸಚಿವ ಬಿ. ಸಿ ನಾಗೇಶ್‌ ಮಾತನಾಡಿ, ಈಗ ಇರುವ ಎಸ್‌ಎಟಿಎಸ್‌ ವ್ಯವಸ್ಥೆಯಲ್ಲಿ ಲಭ್ಯವಾಗುವ ವಿದ್ಯಾರ್ಥಿ ಸಂಬಂಧಿತ ಮಾಹಿತಿ ಅಥವಾ ವಿವರಗಳನ್ನು ಸಿಇಟಿ ಅರ್ಜಿಯಲ್ಲಿ ವಿಲೀನಗೊಳಿಸಲು ಚಿಂತಿಸಲಾಗುತ್ತಿದೆ ಎಂದರು.

ಸಮನ್ವಯದಿಂದ ಪರಿಹಾರ
ಎಸ್ಸೆಸ್ಸೆಲ್ಸಿ ಹಂತದಲ್ಲಿನ “ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ (ಎಸ್‌ಎಟಿಎಸ್‌)ಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಜತೆ ಸಂಯೋಜನೆಗೊಳಿಸುವ ಸಂಬಂಧ ಚರ್ಚಿಸಲಾಯಿತು. ಕೆಇಎ ಕೂಡ ಯಾವ ರೀತಿಯ ಮಾಹಿತಿ ಅಗತ್ಯ ಇದೆ ಎನ್ನುವುದನ್ನು ತಿಳಿಸಲಿದ್ದಾರೆ. ಎರಡೂ ಇಲಾಖೆಗಳ ಸಮನ್ವಯದಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದು ಸಚಿವ ಅಶ್ವತ್ಥನಾರಾಯಣ ಇದೇ ವೇಳೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next