Advertisement

ಸಂಚಾರಕ್ಕೆ ಸುರಕ್ಷತೆ ಕಲ್ಪಿಸಲು ಸಾರ್ವಜನಿಕರ ಆಗ್ರಹ

09:43 AM Oct 24, 2019 | Team Udayavani |

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ತೇಕಲ್‌ತೋಟ ಪ್ರದೇಶದಲ್ಲಿ ಕಂಡು ಬರುವ ಗುಂಡಿಗೆ ಇನ್ನೂ ಸಮರ್ಪಕವಾಗಿ ಮೋಕ್ಷವನ್ನು ನೀಡಿಲ್ಲದ ಬಗ್ಗೆ ನಿತ್ಯ ಸಂಚಾರಿಗಳು ತಮ್ಮ ಅಸಹನೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.

Advertisement

ಕಟಪಾಡಿಯ ಹಳೆ ಎಂಬಿಸಿ ರಸ್ತೆಯಿಂದ ಸಂದಿಸುವ ಸ್ಥಳ ಮತ್ತು ಇಳಿಜಾರಿನಿಂದ ಕೂಡಿದ ಜಂಕ್ಷನ್‌ ಪ್ರದೇಶ ಇದಾಗಿದ್ದು, ಇಲ್ಲಿ ಬಾಯ್ದೆರೆದಿದ್ದ ಗುಂಡಿಯು ಮೃತ್ಯುಕೂಪವಾಗಿ ಪರಿಣಮಿಸ ಬಲ್ಲುದು ಎಂದು ಉದಯವಾಣಿಯು ಅ. 12ರಂದು ವರದಿಯನ್ನು ಪ್ರಕಟಿಸಿತ್ತು.

ಆ ಬಳಿಕ ಎಚ್ಚೆತ್ತ ಸಂಬಂಧ ಪಟ್ಟ ಇಲಾಖೆಯು ಸುಗಮ ಸಂಚಾರವನ್ನು ಕಲ್ಪಿಸುವ ನಿಟ್ಟಿನಲ್ಲಿ ಗುಂಡಿ ಮುಚ್ಚುವ ತೇಪೆ ಕಾರ್ಯವನ್ನು ನಡೆಸಿದ್ದು, ವಾಹನ ಸಂಚಾರಿಗಳು ಗುಂಡಿಗೆ ಬೀಳದಂತೆ ಸಣ್ಣ ತಡೆಯೊಂದನ್ನು ಹೊಂಡ ದಾಟಿದ ಅನಂತರದಲ್ಲಿ ಇರಿಸಿರುತ್ತಾರೆ.

ಆದರೆ ಮತ್ತೆ ಮಳೆಯ ಕಾರಣವೋ ಏನೋ ತೇಪೆ ಕಾರ್ಯವು ಶಾಶ್ವತ ಪರಿಹಾರವಾಗಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದು, ಹೊಂಡಕ್ಕೆ ತುಂಬಿಸಿದ ಕೆಂಪು ಕಲ್ಲು, ಜಲ್ಲಿ ಕಲ್ಲು ಎದ್ದು ಆ ಭಾಗವು ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ ಎನ್ನುತ್ತಾರೆ.

ವಾಹನ ಸಂಚಾರ ದಟ್ಟಣೆಯಿಂದಾಗಿ ಕತ್ತಲಾವರಿಸುತ್ತಿದ್ದಂತೆ ಅಥವಾ ಮಳೆ ನೀರು ಹೊಂಡದಲ್ಲಿ ತುಂಬುತ್ತಿದ್ದಂತೆ ಚಾಲಕರು ಹೆಚ್ಚು ಗೊಂದಲಗೊಳಗಾಗುತ್ತಾರೆ. ಹಾಗಾಗಿ ಈ ಪ್ರದೇಶವು ಮತ್ತಷ್ಟು ಹೆಚ್ಚು ಅಪಾಯಕಾರಿಯಾಗಿದೆ ಎಂದು ನಿತ್ಯ ಸಂಚಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Advertisement

ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲೆಂದರಲ್ಲಿ ಹೊಂಡಗುಂಡಿಗಳೇ ತುಂಬಿದೆ. ಪ್ರಮುಖ ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಮಳೆ ಗಾಳಿ ಎನ್ನದೇ ಸಮರೋಪಾದಿಯಲ್ಲಿ ಸಮರ್ಪಕ ನಿರ್ವಹಣೆಯನ್ನು ಮಾಡಬೇಕಾದ ಇಲಾಖೆಯು ತಮ್ಮ ಜವಾಬ್ದಾರಿಯನ್ನು ಅರಿತು ಸಂಚಾರಕ್ಕೆ ಸುರಕ್ಷತೆಯನ್ನು ಕಲ್ಪಿಸುವಂತೆ ಆಗ್ರಹಿಸುತ್ತಿದ್ದಾರೆ.

ಅಪಾಯ ಕಟ್ಟಿಟ್ಟ ಬುತ್ತಿ
ಹೆದ್ದಾರಿ ಸಂಚಾರ ದುಸ್ತರವಾಗಿದೆ. ದ್ವಿಚಕ್ರ ವಾಹನ ಸವಾರರು ಹೆಚ್ಚು ಅಪಾಯಕ್ಕೀಡಾಗುತ್ತಾರೆ. ಲಘು ವಾಹನಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿ. ವಾಹನ ಸವಾರರು ಈ ಬಗ್ಗೆ ಎಚ್ಚರ ತಪ್ಪಿದಲ್ಲಿ ಅನಾಹುತ ಗ್ಯಾರಂಟಿ. ಅರೆಬರೆಯಾಗಿ ತೇಪೆ ಹಾಕಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಉತ್ತಮ ಗುಣಮಟ್ಟದ ನಿರ್ವಹಣೆ ಅವಶ್ಯಕ.
– ಬಿ.ಸಿ. ರಾಜೇಶ್‌ ಆಚಾರ್ಯ ಕಟಪಾಡಿ, ನಿತ್ಯ ಸಂಚಾರಿ

Advertisement

Udayavani is now on Telegram. Click here to join our channel and stay updated with the latest news.

Next