Advertisement

ಸಾರ್ವಜನಿಕ ರಸ್ತೆಗೆ ಬೇಲಿ ಹಾಕಿದ ಭೂಪರು!

03:12 PM Feb 23, 2023 | Team Udayavani |

ಕನಕಪುರ: ಸಾರ್ವಜನಿಕ ರಸ್ತೆಯೇ ನಮ್ಮದೆಂದು ರಸ್ತೆಗೆ ಅಡ್ಡಲಾಗಿ ಬೇಲಿ ಹಾಕಿ ಸಾರಿಗೆ ಬಸ್‌ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಘಟನೆ ಮತ್ತಿಕುಂಟೆ ಗ್ರಾಮದಲ್ಲಿ ನಡೆದಿದೆ.

Advertisement

ತಾಲೂಕಿನ ಹಾರೋಹಳ್ಳಿ ಹೋಬಳಿ ದೊಡ್ಡ ಮುದುವಾಡಿ ಗ್ರಾಪಂ ವ್ಯಾಪ್ತಿಯ ಮತ್ತಿಕುಂಟೆ ಗ್ರಾಮದಲ್ಲಿ ವೆಂಕಟೇಶ್‌ ಎಂಬುವವರು ಸಾರ್ವಜನಿಕ ರಸ್ತೆ ನಮ್ಮದೆಂದು ಓಡಾಡುವ ರಸ್ತೆಗೆ ಅಡ್ಡಲಾಗಿ ಏಕಾಏಕಿ ಬೇಲಿ ಹಾಕಿದ್ದಾರೆ. ಇದರಿಂದ ಆ ರಸ್ತೆಯಲ್ಲಿ ಓಡಾಡುವ ಸಾರಿಗೆ ಬಸು ಸೇರಿದಂತೆ ಕಾರು, ದ್ವಿಚಕ್ರ ವಾಹನ ಹಾಗೂ ಸರಕು ಸಾಗಣೆ ವಾಹನಗಳ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಠಾಣಾ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಅಡ್ಡಲಾಗಿ ಹಾಕಿದ್ದ ಬೇಲಿ ತೆರವುಗೊಳಿಸಿ ವೆಂಕಟೇಶ್‌ ಕುಟುಂಬಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಕನಕಪುರದಿಂದ ನೂರಾರು ಗ್ರಾಮಗಳ ಮೂಲಕ ಜಿಲ್ಲಾ ಕೇಂದ್ರ ರಾಮನಗರಕ್ಕೆ ಈ ರಸ್ತೆ ಸಂಪರ್ಕ ಕೊಂಡಿಯಾಗಿದ್ದು, ರಾಮನಗರ ಜಿಲ್ಲಾ ಕೇಂದ್ರದ ಕಡೆಯಿಂದ ಬರುವ ವಾಹನಗಳು ಕನಕಪುರ ಮತ್ತು ಬಿಡದಿ ಹಾರೋಹಳ್ಳಿ, ಸಂಪರ್ಕ ಕಲ್ಪಿಸಲು ಇದೇ ರಸ್ತೆಯಲ್ಲಿ ಪ್ರತಿದಿನ ಸಾರಿಗೆ ಬಸ್‌, ಸರಕು ಸಾಗಣಿ ವಾಹನ, ಕಾರು ದ್ವಿಚಕ್ರ ವಾಹನ ಸವಾರರು ಓಡಾಡುತ್ತಾರೆ. ರಸ್ತೆ ಅಡ್ಡಲಾಗಿ ಬೇಲಿ ಹಾಕಿದ್ದರಿಂದ ಗಂಟೆಗಳ ಕಾಲ ಸಾರಿಗೆ ಬಸ್‌ ಸೇರಿದಂತೆ ಓಡಾಡಲು ರಸ್ತೆ ಇಲ್ಲದೆ ವಾಹನ ಸವಾರರು ಪರದಾಡುವಂತಾಯಿತು.

ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ಬೇಲಿ: ವೆಂಕಟೇಶ್‌ ಎಂಬುವವರು ತಮ್ಮ ಜಮೀನಿಗೆ ಹಾಕಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮತ್ತೂಂದು ಓಣಿ ರಸ್ತೆಯಲ್ಲಿ ಮಣ್ಣು ಸುರಿದಿದ್ದರು. ಹಲವಾರು ದಿನಗಳಿಂದ ಓಣಿ ರಸ್ತೆಯಲ್ಲಿ ಹಾಕಿದ್ದ ಮಣ್ಣನ್ನು ತೆರವು ಮಾಡಿರಲಿಲ್ಲ. ಆ ರಸ್ತೆಯಲ್ಲಿ ಓಡಾಡುವ ಜನರಿಗೆ ಕಿರಿ ಕಿರಿಯಾಗಿತ್ತು. ಇದರಿಂದ ಸ್ಥಳೀಯರು ಪೊಲೀಸ್‌ ಇಲಾಖೆ ಮಾಹಿತಿ ನೀಡಿದ್ದರು. ಇದರಿಂದ ಕುಪಿತಗೊಂಡ ವೆಂಕಟೇಶ್‌ ಮಣ್ಣು ತೆರವು ಮಾಡುವುದು ವಿಳಂಬ ಮಾಡಿದ್ದಕ್ಕೆ ನನ್ನ ಮೇಲೆ ದೂರು ನೀಡಿದ್ದಾರೆ.

ಈ ರಸ್ತೆಯೂ ನಮಗೆ ಸೇರಬೇಕು ಎಂದು ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ಬೇಲಿ ಹಾಕಿದ್ದರು. ತೆರವುಗೊಳಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

ಹಲವಾರು ವರ್ಷಗಳಿಂದ ಜನರಿಗೆ ತೊಂದರೆ: ಮತ್ತಿ ಕುಂಟೆ ಹಾಗೂ ಇನ್ನಿತರ ಗ್ರಾಮಗಳಿಗೆ ದೊಡ್ಡಮುದ ವಾಡಿ ಗ್ರಾಮದಿಂದ ಸಂಪರ್ಕ ಕಲ್ಪಿಸಲು ಪೂರ್ವಿಕರ ಕಾಲದಿಂದಲೂ ಓಣಿ ರಸ್ತೆ ಇತ್ತು. ಆ ರಸ್ತೆಯು ನಮಗೆ ಸೇರಿದ್ದು ಎಂದು ಇದೇ ಕುಟುಂಬದವರು ಹತ್ತು ದಿನಗಳ ಹಿಂದೆ ಸಾರ್ವಜನಿಕರು ಓಡಾಡದಂತೆ ಮಣ್ಣು ಸುರಿದು ತೊಂದರೆ ಕೊಡುತ್ತಿದ್ದರು. ಮತ್ತಿಕುಂಟೆ ಗ್ರಾಮದ ಬಹುತೇಕ ಜಾಗ ಗ್ರಾಮಠಾಣಾಕ್ಕೆ ಸೇರಬೇಕು. ವೆಂಕಟೇಶ್‌ ಎಂಬುವವರ ಕುಟುಂಬ ಇಡೀ ಗ್ರಾಮ ಠಾಣಾ ಜಾಗ ನಮಗೆ ಸೇರಬೇಕು ಎಂದು ಅಕ್ಕಪಕ್ಕದ ವಾಸಿಗಳಿಗೂ ಓಡಾಡಲು ರಸ್ತೆ ಬಿಡದೆ ಹಲವಾರು ವರ್ಷಗಳಿಂದ ತೊಂದರೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಸಮಸ್ಯೆ ಶಾಶ್ವತವಾಗಿ ಬಗೆಹರಿಸಲು ಒತ್ತಾಯ : ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾಡಳಿತ ತಾಲೂಕು ಆಡಳಿತ ಸಮಸ್ಯೆಯನ್ನು ಬಗೆಹರಿಸುವ ಗೋಜಿಗೆ ಹೋಗಿಲ್ಲ. ಈಗ ಸಾರ್ವಜನಿಕ ರಸ್ತೆಯೂ ನಮಗೆ ಸೇರಿದ್ದು ಎಂದು ಬೇಲಿ ಹಾಕಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ನೀಡುತ್ತಿದ್ದಾರೆ. ಜಿಲ್ಲಾಡಳಿತ ಈ ಗ್ರಾಮದಲ್ಲಿರುವ ಗ್ರಾಮ ಠಾಣಾ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿ ಗ್ರಾಮಸ್ಥರು ನೆಮ್ಮದಿಯಿಂದ ಬದು ಕುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಮತ್ತಿಕುಂಟೆ ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next