ಮಂಗಳೂರು: ಜನಸ್ನೇಹಿ ಪೊಲೀಸಿಂಗ್‌ನ ಭಾಗವಾಗಿ ಪಾರದರ್ಶಕ ಮತ್ತು ತ್ವರಿತ ಸೇವೆಗೆ ಮುಂದಡಿ ಇಟ್ಟಿರುವ ಪೊಲೀಸ್ ಇಲಾಖೆಯು ಸಾರ್ವಜನಿಕರು ತಮಗೆ ಪೊಲೀಸ್ ಠಾಣೆಯಲ್ಲಿ ದೊರೆಯುವ ಸ್ಪಂದನೆಯ ಬಗ್ಗೆ ಕೂಡಲೇ ಮೇಲಧಿಕಾರಿಗಳಿಗೆ ತಿಳಿಸಿ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆಯನ್ನು ರಾಜ್ಯಾದ್ಯಂತ ಶೀಘ್ರ ಜಾರಿಗೆ ತರಲಿದೆ.
ಸಾರ್ವಜನಿಕರು ದೂರು, ಅರ್ಜಿ, ಅಹವಾಲು ಇತ್ಯಾದಿಗಳನ್ನು ಸಲ್ಲಿಸಲು ಠಾಣೆಗೆ ತೆರಳಿದಾಗ ವಿಎಂಎಸ್‌ನಲ್ಲಿ (ವಿಸಿಟರ್ ಮ್ಯಾನೇಜ್‌ಮೆಂಟ್ ಸಿಸ್ಟಂ) ವಿವರ ದಾಖಲಿಸಿಕೊಂಡು ಆ ವಿವರಗಳುಳ್ಳ ಮುದ್ರಿತ ಚೀಟಿಯನ್ನು ನೀಡಲಾಗುತ್ತದೆ. ಅದರಲ್ಲಿ ಯಾವ ಅಧಿಕಾರಿ/ಸಿಬಂದಿಯನ್ನು ಭೇಟಿ ಮಾಡಬೇಕು ಎಂಬ ಮಾಹಿತಿಯೂ ಇರುತ್ತದೆ. ಸಂಬಂಧಿಸಿದ ಅಧಿಕಾರಿ/ಸಿಬಂದಿಯನ್ನು ಭೇಟಿಯಾದ ಅನಂತರ ಅವರು ಅದಕ್ಕೆ ಸಹಿ ಮಾಡುವ ಮೂಲಕ ಅಹವಾಲು ಸ್ವೀಕರಿಸಿರುವುದನ್ನು ದೃಢಪಡಿಸಬೇಕು.
ಆ ಪ್ರಕ್ರಿಯೆಗಳು ಮುಗಿದ ಬಳಿಕ ವಿಎಂಎಸ್‌ನಲ್ಲಿ ನಮೂದಾಗಿರುವ ದೂರು ದಾರರ ಮೊಬೈಲ್ ಸಂಖ್ಯೆಗೆ ಇಲಾಖೆಯಿಂದ ಲಿಂಕ್ ಕಳುಹಿಸಲಾಗುತ್ತದೆ. ಆ ಲಿಂಕ್ ಅನ್ನು ಒತ್ತಿದಾಗ “ಫೀಡ್‌ಬ್ಯಾಕ್’ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಠಾಣೆಯಲ್ಲಿ ದೊರೆತ ಸ್ಪಂದನೆಯ ಕುರಿತು ಕೆಲವು ಪ್ರಶ್ನೆಗಳಿದ್ದು ಅವುಗಳಿಗೆ ಉತ್ತರಿಸಬೇಕು. ಅದು ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಆಯುಕ್ತ ಮೊದಲಾದ ಉನ್ನತ ಅಧಿಕಾರಿಗಳಿಗೆ ತಲುಪುತ್ತದೆ. ಲಿಂಕ್ ಮೂಲಕ ಅಲ್ಲದೆ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ಫೀಡ್‌ಬ್ಯಾಕ್ ನೀಡಬಹುದು. ಎಲ್ಲ ಠಾಣೆಗಳಲ್ಲಿಯೂ ಕ್ಯುಆರ್ ಕೋಡ್ ಅಳವಡಿಸಿ ಸಾರ್ವಜನಿಕರಿಂದ ಫೀಡ್‌ಬ್ಯಾಕ್ ಪಡೆಯಲು ವ್ಯವಸ್ಥೆ ಮಾಡಲಾಗುತ್ತದೆ.ಠಾಣೆಯಲ್ಲಿರುವಾಗಲೇ ಫೀಡ್‌ಬ್ಯಾಕ್ ನೀಡಬೇಕಾಗಿಲ್ಲ. ಅನಂತರವೂ ನೀಡಬಹುದು.
ಪೊಲೀಸರ ಮೇಲೆ ನಿಗಾ!
ಜನಸ್ಪಂದನಾ ಮೂಲಕ ಪರೋಕ್ಷವಾಗಿ ಸಾರ್ವಜನಿಕರು ಸ್ಥಳೀಯ ಪೊಲೀಸರ ಮೇಲೆಯೇ ನಿಗಾ ಇಡಲು ಸಾಧ್ಯವಾಗಲಿದೆ. ವಿನಾಕಾರಣವಾಗಿ ವಿಳಂಬ ಮಾಡುವುದು, ನಿರ್ಲಕ್ಷ್ಯ ತೋರುವುದು, ಒರಟುತನದಿಂದ ವರ್ತಿಸುವುದು, ವಾಪಸ್ ಕಳುಹಿಸುವುದು, ಎಫ್ಐಆರ್ ದಾಖಲಿಸಲು ಹಿಂದೇಟು ಹಾಕುವುದು ಮೊದಲಾದವುಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲು ಇದರಿಂದ ಅನುಕೂಲವಾಗಲಿದೆ. ಈಗಾಗಲೇ ಮಂಗಳೂರು ಪೊಲೀಸ್ ಕಮಿಷನರೆಟ್ ಸಹಿತ ಕೆಲವು ನಗರ ಹಾಗೂ ಕೆಲವು ಜಿಲ್ಲೆಗಳಲ್ಲಿ ಇಂತಹ ಫೀಡ್‌ಬ್ಯಾಕ್ ವ್ಯವಸ್ಥೆ ಆರಂಭಗೊಂಡಿದ್ದು ದ.ಕ., ಉಡುಪಿ ಸಹಿತ ಇತರ ಜಿಲ್ಲೆಗಳಲ್ಲಿಯೂ ಅನುಷ್ಠಾನಗೊಳ್ಳಲಿದೆ.
ಜನಸ್ಪಂದನಾ ಮೂಲಕ ಪೊಲೀಸರ ಸ್ಪಂದನೆ ಬಗ್ಗೆ ಸಾರ್ವಜನಿಕರು ನೇರವಾಗಿ ಮಾಹಿತಿ ನೀಡಬಹುದು. ಇದು ಸರಳ ವ್ಯವಸ್ಥೆಯಾಗಿದ್ದು ಪರಿಣಾಮಕಾರಿಯಾಗಲಿದೆ. ಜನರ ಪ್ರತಿಕ್ರಿಯೆಯನ್ನು ಗಂಭೀರ ವಾಗಿ ಪರಿಗಣಿಸಿ ವಿಚಾರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆಗೆ ಸಂಬಂಧಿಸದ ವಿಚಾರಗಳಾ ಗಿದ್ದರೆ ಯಾರನ್ನು ಸಂಪರ್ಕಿಸಬಹುದು ಎಂಬುದನ್ನುಸಾರ್ವಜನಿಕರಿಗೆ ತಿಳಿಸಲಾಗುವುದು.
ಉಡುಪಿ ಜಿಲ್ಲೆಯಲ್ಲಿಯೂ ಪ್ರತೀ ಪೊಲೀಸ್ ಠಾಣೆಯಲ್ಲಿ ಜನಸ್ಪಂದನ ಶೀಘ್ರ ಆರಂಭಗೊಳ್ಳಲಿದೆ. ಇದಕ್ಕೆ ಪೂರಕವಾಗಿ ತರಬೇತಿ ಪೂರ್ಣಗೊಂಡಿದೆ.
-ಡಾ| ಅರುಣ್, ಎಸ್‌ಪಿ, ಉಡುಪಿ