ಗಂಗಾವತಿ: ಕಳೆದ ವಾರ ಕಲ್ಮಠದ ಬಳಿ ಬೃಹತ್ ಮರ ಬಿದ್ದು 12 ಬೈಕ್ ಜಖಂಗೊಂಡು ಒರ್ವ ವ್ಯಕ್ತಿಗೆ ತೀವ್ರ ಗಾಯಗಳಾದ ಘಟನೆ ಮರೆಯುವ ಮುನ್ನವೇ ಅದೇ ಸ್ಥಳದಲ್ಲಿದ್ದ ಮತ್ತೊಂದು ಬೃಹತ್ ಮರ ನೆಲಕ್ಕುರುಳುವ ಸಾಧ್ಯತೆ ಇದ್ದು, ಸ್ಥಳೀಯ ನಾಗರೀಕರು ಮರ ಉರುಳಿ ಬೀಳುವ ಕುರಿತು ನಗರಸಭೆ, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬೃಹತ್ ಮರಗಳು 50 ವರ್ಷಗಳ ಹಿಂದಿನದ್ದಾಗಿದ್ದು, ಕಳೆದ ವಾರ ಮರದ ಬುಡದಲ್ಲಿ ಮಣ್ಣಿನ ಕೊರತೆ ಮತ್ತು ಮರದ ಕೆಳಗೆ ಕುಡಿಯುವ ನೀರಿನ ಪೈಪ್ ಇರುವುದರಿಂದ ಮರದ ಬೇರುಗಳು ಸಡಿಲಗೊಂಡು ಮರ ಏಕಾಏಕಿ ಕೆಳಗೆ ಬಿದ್ದಿದ್ದು, ಇದರಿಂದ 12 ಬೈಕ್ ಜಖಂಗೊಂಡು ಒರ್ವ ವ್ಯಕ್ತಿಗೆ ಗಾಯವಾದ ಘಟನೆ ನಡೆದಿತ್ತು.
ಈಗ ಇನ್ನೊಂದು ಬೃಹತ್ ಗಾತ್ರದ ಮರ ಬೀಳುವ ಹಂತದಲ್ಲಿದ್ದು, ಮುಂದಾಗುವ ಅನಾಹುತ ತಪ್ಪಿಸುವ ಸಲುವಾಗಿ ಸಾರ್ವಜನಿಕರು ಮರ ಕಡಿದು ಹಾಕುವಂತೆ ಒತ್ತಾಯಿಸಿದ್ದಾರೆ.