ಬೆಂಗಳೂರು: ನೀರಿನ ಪೂರೈಕೆಗೂ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಬರಲಿದೆ! ನೂರಾರು ಕಿ.ಮೀ.ನಿಂದ ನೀರು ಎತ್ತಿ, ನಗರಕ್ಕೆ ಪೂರೈಸುವ ಪಂಪಿಂಗ್ ಸ್ಟೇಷನ್‌ಗಳ ಕಾರ್ಯಾಚರಣೆ-ನಿರ್ವಹಣೆ ಸೇರಿದಂತೆ ನೀರು ಪೂರೈಕೆಗೆ ಸಂಬಂಧಿಸಿದ ಇಡೀ ವ್ಯವಸ್ಥೆಯನ್ನು ಖಾಸಗಿ ಕಂಪೆನಿಯೊಂದಕ್ಕೆ ಒಪ್ಪಿಸಲು ಜಲಮಂಡಳಿ ಉದ್ದೇಶಿಸಿದೆ.
ಟಿ.ಕೆ. ಹಳ್ಳಿ, ತಾತಗುಣಿ, ಹಾರೋಹಳ್ಳಿ ಸೇರಿದಂತೆ ಮೂರೂ ಸ್ಟೇಷನ್‌ಗಳಲ್ಲಿ ಒಟ್ಟಾರೆ ಒಂಬತ್ತು ನೀರು ಎತ್ತುವ ಯಂತ್ರಗಳಿದ್ದು, ಇವು ಕಾವೇರಿ ಹಂತ 1, 2 ಸೇರಿದಂತೆ ವಿವಿಧ ಹಂತಗಳಲ್ಲಿ 1973, 1982 ಹಾಗೂ 1993ರಲ್ಲಿ ಸ್ಥಾಪನೆಗೊಂಡಿವೆ. ಈಗ ಸಾಕಷ್ಟು ಹಳೆಯದಾಗಿದ್ದು, ಇದರಿಂದ ನೀರು ಪಂಪ್ ಮಾಡಲಿಕ್ಕಾಗಿಯೇ ಸಾಕಷ್ಟು ವಿದ್ಯುತ್ ವ್ಯಯ ಆಗುತ್ತಿದೆ. ಪರಿಣಾಮ ತಿಂಗಳಿಗೆ ವಿದ್ಯುತ್ ಬಿಲ್ 21 ಕೋಟಿ ರೂ. ಬರುತ್ತಿದೆ.
ಅತ್ಯಂತ ಹಳೆಯದಾದ ಈ ನೀರು ಎತ್ತುವ ಯಂತ್ರಗಳನ್ನು ಬದಲಾಯಿಸಲು ಸಾಕಷ್ಟು ಹಣ ಖರ್ಚಾಗುತ್ತದೆ. ಆದ್ದರಿಂದ ಇಂಧನ ಉಳಿತಾಯ ಕಂಪೆನಿ (ಎಸ್ಕೊ)ನಿಗೆ ಇಡೀ ವ್ಯವಸ್ಥೆಯನ್ನು ನೀಡಲಾಗುವುದು. ಇದಕ್ಕೆ ಪ್ರತಿಯಾಗಿ ವಿದ್ಯುತ್ ಉಳಿತಾಯದಿಂದಾಗುವ ಹಣದಲ್ಲಿ ಜಲಮಂಡಳಿ ಮತ್ತು ಕಂಪನಿ ಹಂಚಿಕೊಳ್ಳಲಿವೆ. ಇದರಲ್ಲಿ ಜಲಮಂಡಳಿಯ ಖರ್ಚು ಏನೂ ಇರುವುದಿಲ್ಲ.
ದಶಲಕ್ಷ ನೀರೆತ್ತಲು 1,800 ಯೂನಿಟ್: ಮೂರು ಸ್ಟೇಷನ್‌ಗಳ ಪೈಕಿ ಎರಡು ತಲಾ 135 ಎಂಎಲ್‌ಡಿ ಹಾಗೂ ಒಂದು 300 ಎಂಎಲ್‌ಡಿ ಸೇರಿದಂತೆ ಅಂದಾಜು 600 ಎಂಎಲ್‌ಡಿ ನೀರು ಎತ್ತುವ ಸಾಮರ್ಥ್ಯವನ್ನು ಈ ಯಂತ್ರಗಳು ಹೊಂದಿದ್ದು, ಪ್ರತಿ ದಶಲಕ್ಷ ಲೀಟರ್ ನೀರು ಎತ್ತಲು 1,800 ಯೂನಿಟ್ ವ್ಯಯ ಆಗುತ್ತಿದೆ.
ವಿದ್ಯುತ್ ಉಳಿತಾಯದ ಮೂಲಕ ಪಂಪಿಂಗ್‌ಗೆ ತಗಲುವ ವೆಚ್ಚ ತಗ್ಗಿಸಲು ನೀರಿನ ಪೂರೈಕೆಗೆ ಪಿಪಿಪಿ ಮಾದರಿ ಅಳವಡಿಸಲು ಜಲಮಂಡಳಿ ಉದ್ದೇಶಿಸಿದೆ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಬಿಬಿಎಂಪಿ ವಿಶೇಷ ಸಭೆಗೆ ಮಾಹಿತಿ ನೀಡಿದರು.ಅಷ್ಟಕ್ಕೂ ಈ ಪಿಪಿಪಿ ಮಾದರಿ ಹೊಸದಲ್ಲ; ರಾಜ್ಯದ ಮೈಸೂರು, ಅರಸೀಕೆರೆ ಸೇರಿದಂತೆ ಹಲವು ನಗರಗಳಲ್ಲಿ ಈ ಮಾದರಿ ಅನುಸರಿಸಲಾಗುತ್ತಿದೆ.
ಶೇ. 40ರಷ್ಟು ಸೋರಿಕೆ: ನಗರದಲ್ಲಿ ಪೂರೈಕೆ ಆಗುತ್ತಿರುವ ನೀರಿನಲ್ಲಿ ಶೇ. 40ರಷ್ಟು ಪ್ರಮಾಣ ಸೋರಿಕೆ ಆಗುತ್ತಿದ್ದು, ಇದರಲ್ಲಿ ಅರ್ಧದಷ್ಟು ಲೆಕ್ಕಕ್ಕೆ ಸಿಗದ ನೀರು. 2012-13ರಲ್ಲಿ ನಗರದ ನೀರಿನ ಸೋರಿಕೆ ಪ್ರಮಾಣ ಶೇ. 51 ಹಾಗೂ ಕಳೆದ ವರ್ಷ ಶೇ. 49ರಷ್ಟಿತ್ತು. ಪ್ರಸ್ತುತ ಶೇ. 40ರಷ್ಟಿದ್ದು, ವರ್ಷಾಂತ್ಯಕ್ಕೆ ಇದನ್ನು ಇನ್ನೂ ಶೇ. 2ರಷ್ಟು ಇಳಿಕೆ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರತರಾಗಿದ್ದಾರೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.