Advertisement

ಮೆಟ್ರೋ ಗೌಪ್ಯತೆಗೆ ಸಾರ್ವಜನಿಕರು ಗರಂ!

11:05 AM Oct 08, 2017 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತಕ್ಕೆ ಸಂಬಂಧಿಸಿದ “ಸಮಗ್ರ ಯೋಜನಾ ವರದಿ’ (ಡಿಪಿಆರ್‌) ಬಹಿರಂಗಗೊಳಿಸದಿರಲು ಪಟ್ಟುಹಿಡಿದ ಬಿಎಂಆರ್‌ಸಿ ವಿರುದ್ಧ ಆಕ್ರೋಶ ಹೊರಹಾಕಿದ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು, ವರದಿಗಾಗಿ ಕೇಂದ್ರ ನಗರಾಭಿವೃದ್ಧಿ ಇಲಾಖೆ ಮೊರೆಹೋಗಲು ಚಿಂತನೆ ನಡೆಸಿದ್ದಾರೆ.

Advertisement

ನಗರದ ರೋಟರಿ ಹೌಸ್‌ ಆಫ್ ಫ್ರೆಂಡ್‌ಶಿಪ್‌ನಲ್ಲಿ ಶನಿವಾರ “ಬೆಂಗಳೂರಿಗಾಗಿ ನಾಗರಿಕರ ಸಂಘಟನೆ’ ವೇದಿಕೆ ಹಮ್ಮಿಕೊಂಡಿದ್ದ “ಬೆಂಗಳೂರು ಸಾರಿಗೆ ಸಂಯೋಜನೆ ಮತ್ತು ಕಂಟೋನ್ಮೆಂಟ್‌ ಮೆಟ್ರೋ ನಿಲ್ದಾಣ’ ಕುರಿತ ದುಂಡುಮೇಜಿನ ಚರ್ಚೆಯಲ್ಲಿ ಸಂಸದರು, ರೈಲ್ವೆ ಹೋರಾಟಗಾರರು ಈ ಅಭಿಪ್ರಾಯ ವ್ಯಕ್ತಪಡಿಸಿದರು. 

ಸಂಸದ ಪಿ.ಸಿ. ಮೋಹನ್‌ ಮಾತನಾಡಿ, ಕೊಚ್ಚಿ, ಮುಂಬೈ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಎಲ್ಲ ಮೆಟ್ರೋ ಯೋಜನೆಗಳಿಗೆ ಸಂಬಂಧಿಸಿದ ಸಮಗ್ರ ಯೋಜನಾ ವರದಿಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಆದರೆ, “ನಮ್ಮ ಮೆಟ್ರೋ’ ಡಿಪಿಆರ್‌ ಅನ್ನು ಮಾತ್ರ ಗೌಪ್ಯವಾಗಿಡಲಾಗಿದೆ. ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಸಾಕಷ್ಟು ಒತ್ತಾಯಿಸಿದರೂ, ಕ್ಯಾರೆ ಎನ್ನುತ್ತಿಲ್ಲ. ಹಾಗಾಗಿ, ಕೇಂದ್ರ ನಗರಾಭಿವೃದ್ಧಿ ಇಲಾಖೆಯಿಂದಲೇ ಡಿಪಿಆರ್‌ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು. 

ಈ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗುವುದು. ಅಷ್ಟೇ ಅಲ್ಲ, ವಿವಾದಿತ ಕಂಟೋನ್ಮೆಂಟ್‌ ಮೆಟ್ರೋ ನಿಲ್ದಾಣ ಹಾಗೂ ಸ್ಥಳಾಂತರಗೊಳಿಸಲು ಉದ್ದೇಶಿಸಿರುವ ಬಂಬೂ ಬಜಾರ್‌ ಬಳಿಯ ಮೈದಾನಕ್ಕೆ ಮುಂದಿನ ವಾರದಲ್ಲಿ ರೈಲ್ವೆ ಸಚಿವಾಲಯ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಲಿದೆ. ಈ ಸಂಬಂಧ ಕೂಡ ಮನವಿ ಮಾಡಲಾಗುವುದು ಎಂದು ತಿಳಿಸಿದರು. 

“ನಮ್ಮ ಮೆಟ್ರೋ; ನಮ್ಮ ಮಾಹಿತಿ’: ಇದಕ್ಕೂ ಮುನ್ನ ನಡೆದ ದುಂಡುಮೇಜಿನ ಚರ್ಚೆಯಲ್ಲಿ ರಾಜ್ಯಸಭೆ ಸದಸ್ಯ ಪ್ರೊ. ರಾಜೀವ್‌ಗೌಡ ಮಾತನಾಡಿ, “ನಮ್ಮ ಮೆಟ್ರೋ, ನಮ್ಮ ಯೋಜನೆ ಹಾಗೂ ಆ ಯೋಜನೆಗೆ ಸಂಬಂಧಿಸಿದ ಮಾಹಿತಿ ಕೂಡ ನಮ್ಮದು. ಯಾವುದೋ ಖಾಸಗಿಗೆ ಸಂಬಂಧಿಸಿದ ಮಾಹಿತಿ ಕೇಳುತ್ತಿಲ್ಲ.

Advertisement

ಆದ್ದರಿಂದ ತಕ್ಷಣ ಡಿಪಿಆರ್‌ ಬಹಿರಂಗಪಡಿಸುವಂತೆ ಸರ್ಕಾರ ಬಿಎಂಆರ್‌ಸಿಗೆ ಸೂಚಿಸಬೇಕು’ ಎಂದು ಹೇಳಿದರು.  ವಸಂತನಗರ ನಿವಾಸಿ ರಾಜಕುಮಾರ್‌ ದುಗ್ಗರ್‌ ಮಾತನಾಡಿ, “ಬಿಎಂಆರ್‌ಸಿಯ ವಿಳಂಬ ಧೋರಣೆಯಿಂದ ಯೋಜನಾ ವೆಚ್ಚ ಸಾವಿರಾರು ಕೋಟಿ ರೂ. ಹೆಚ್ಚಾಗಿದೆ. ಆದರೆ, ಕೇವಲ 500ರಿಂದ 1,000 ಕೋಟಿ ರೂ. ಉಳಿತಾಯವನ್ನು ತೋರಿಸಿ, ಕಂಟೋನ್ಮೆಂಟ್‌ ಮೆಟ್ರೋ ನಿಲ್ದಾಣ ಸ್ಥಳಾಂತರಕ್ಕೆ ಮುಂದಾಗಿದೆ.

ನಕ್ಷೆ ಬದಲಾವಣೆಯಿಂದ 2 ನಿಮಿಷ ಉಳಿತಾಯ ಆಗುತ್ತದೆ ಎಂದು ಬಿಎಂಆರ್‌ಸಿ ವಾದಿಸುತ್ತಿದೆ.  ಆದರೆ, ನಿಲ್ದಾಣ ಸ್ಥಳಾಂತರದಿಂದ ಪ್ರಯಾಣಿಕರ 15 ನಿಮಿಷ ವ್ಯಯವಾಗಲಿದೆ. 2009ರಲ್ಲೇ ದೆಹಲಿಯಲ್ಲಿ 30 ಮೀ. ಆಳದಲ್ಲಿ ಸುರಂಗ ನಿರ್ಮಿಸಲಾಗಿದೆ. ಹಾಗಾಗಿ, ನಿಗಮದ ವಾದದಲ್ಲಿ ಹುರುಳಿಲ್ಲ. ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಆಗ್ರಹಿಸಿದರು. 

ಮಾಲ್‌ಗ‌ಳಿಗೆ ಸಂಪರ್ಕ; ಬೇರೆ ಕಡೆ ಇಲ್ಲ: ಪ್ರಜಾರಾಗ ಸಂಸ್ಥೆಯ ಸಂಜೀವ ದ್ಯಾಮಣ್ಣವರ ಮಾತನಾಡಿ, ಒರಾಯನ್‌ ಮಾಲ್‌, ಮಂತ್ರಿಮಾಲ್‌ ಸೇರಿದಂತೆ ಹಲವೆಡೆ “ಇಂಟಿಗ್ರೇಟ್‌’ ಮಾಡಲಾಗಿದೆ. ಕಂಟೋನ್ಮೆಂಟ್‌ ರೈಲು ನಿಲ್ದಾಣ, ದಾಸರಹಳ್ಳಿ, ಪೀಣ್ಯ ಮತ್ತಿತರ ಕಡೆ ಇದನ್ನು ಅನುಸರಿಸಲು ಏನು ಸಮಸ್ಯೆ? ಮುಂಬೈ ರೈಲು ನಿಲ್ದಾಣದಲ್ಲಿನ ಘಟನೆ ಇಲ್ಲಿಯೂ ಮರುಕಳಿಸಿದಾಗ ಎಚ್ಚೆತ್ತುಕೊಂಡರಾಯಿತು ಎಂಬ ಧೋರಣೆ ನಿಗಮಕ್ಕೆ ಇದ್ದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಭಾರತೀಯ ವಿಜ್ಞಾನ ಸಂಸ್ಥೆಯ ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ (ಸಿಸ್ಟುಪ್‌) ವಿಭಾಗದ ಆಶಿಸ್‌ ವರ್ಮ ಮಾತನಾಡಿ, ಸಾರ್ವಜನಿಕ ಸಾರಿಗೆ ಉತ್ತೇಜಿಸಲು ಬಿಎಂಟಿಸಿ, ಮೆಟ್ರೋ ಸೇರಿದಂತೆ “ನಮ್ಮ ಸಾರ್ವಜನಿಕ ಸಾರಿಗೆ’ ವ್ಯವಸ್ಥೆ ಜಾರಿಗೊಳಿಸುವ ಅಗತ್ಯವಿದೆ. ಸಾರಿಗೆ ಯೋಜನೆಗೆ ಸಂಬಂಧಿಸಿದ ಎಲ್ಲ ಸಂಸ್ಥೆಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸುವಂತಹ “ಬೆಂಗಳೂರಿಗಾಗಿ ಸಾರಿಗೆ’ (ಟ್ರಾನ್ಸ್‌ಪೊàರ್ಟ್‌ ಫಾರ್‌ ಬೆಂಗಳೂರು) ಬೇಕಾಗಿದೆ. ಒಂದೇ ಮಾದರಿಯ ಟಿಕೆಟ್‌ ವ್ಯವಸ್ಥೆ ಜಾರಿಯಾಗಬೇಕು ಎಂದು ಅಭಿಪ್ರಾಯಪಟ್ಟರು. 

ಶಾಸಕ ಡಾ.ಅಶ್ವತ್ಥನಾರಾಯಣ್‌, ಬಿಎಂಟಿಸಿ ಅಧ್ಯಕ್ಷ ನಾಗರಾಜ (ಯಾದವ್‌), ನಗರ ತಜ್ಞ ಅಶ್ವಿ‌ನ್‌ ಮಹೇಶ್‌ ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next