Advertisement

ಅಕ್ರಮ ಚಟುವಟಿಕೆಗಳ ನಿಗ್ರಹಕ್ಕೆ ಸಾರ್ವಜನಿಕರ ಆಗ್ರಹ

04:37 PM Aug 01, 2022 | Team Udayavani |

ಹಳಿಯಾಳ: ಇತ್ತೀಚಿನ ದಿನಗಳಲ್ಲಿ ಅಕ್ರಮ ಚಟುವಟಿಕೆಗಳಾದ ಒಸಿ, ಜುಜಾಟ ಹಾಗೂ ಎಲ್ಲೆಂದರಲ್ಲಿ ದೊರೆಯುತ್ತಿರುವ ಅಕ್ರಮ ಮದ್ಯದಿಂದಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಆದ್ದರಿಂದ ಇವುಗಳನ್ನು ನಿಯಂತ್ರಿಸಲು ಪೊಲೀಸ್‌ ಇಲಾಖೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

Advertisement

ರವಿವಾರ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ನಡೆದ ಹಳಿಯಾಳ ಪೊಲೀಸ್‌ ಠಾಣ ವ್ಯಾಪ್ತಿಯ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್ಪಿ ಡಾ| ಸುಮನ ಪೆನ್ನೇಕರ್‌ ಬಳಿ ಸಾರ್ವಜನಿಕರು ಮೌಖೀಕವಾಗಿ ದೂರು ಸಲ್ಲಿಸಿ ಅನ ಧಿಕೃತ ಹಾಗೂ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ವಿನಂತಿಸಿದರು.

ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಜುಜಾಟ ಹೆಚ್ಚಾಗಿದೆ. ಅಲ್ಲದೆ ಒಸಿ ಹಾಗೂ ಅಕ್ರಮ ಮದ್ಯ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಹಲವು ಕುಟುಂಬಗಳು ಬೀದಿಗೆ ಬರುತ್ತವೆ ಹಾಗೂ ಯುವಜನತೆ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಪಕ್ಕದ ಬೆಳಗಾವಿ, ಖಾನಾಪುರ ಹಾಗೂ ರಾಮನಗರದಿಂದ ಅಕ್ರಮ ಹಾಗೂ ಅನಧಿಕೃತವಾಗಿ ಮರಳು ಹಾಗೂ ಜಲ್ಲಿಕಲ್ಲುಗಳ ಸರಬರಾಜು ಪ್ರತಿನಿತ್ಯ ಜರುಗುತ್ತಿದೆ. ಇದನ್ನು ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ಖಾನಾಪುರ – ತಾಳಗುಪ್ಪಾ ರಾಜ್ಯ ಹೆದ್ದಾರಿವು ಪಟ್ಟಣದಲ್ಲಿ ಹಾದು ಹೋಗಿರುವುದರಿಂದ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ. ರಾಜ್ಯ ಹೆದ್ದಾರಿ ಅಕ್ಕಪಕ್ಕದಲ್ಲಿಯೇ ಶಾಲಾ ಕಾಲೇಜುಗಳು ಇರುವುದರಿಂದ ಬೆಳಗ್ಗೆ ಹಾಗೂ ಸಾಯಂಕಾಲ ಮಕ್ಕಳು ತೆರಳಲು ಹರಸಾಹಸ ಪಡುವಂತಾಗಿದೆ.

Advertisement

ಅಳವಡಿಸಿರುವ ಸಿಸಿಟಿವಿಗಳು ಸರಿಯಾಗಿ ಕೆಲಸ ನಿರ್ವಹಿಸದ ಕಾರಣ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಹಾಗೂ ಅವುಗಳನ್ನು ಭೇದಿಸುವಲ್ಲಿ ಹಿನ್ನಡೆ ಉಂಟಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಸ್ಥಳೀಯ ಸಂಘ-ಸಂಸ್ಥೆಗಳು ಅವುಗಳನ್ನು ನಿರ್ವಹಣೆ ಮಾಡುವಂತೆ ಸೂಚಿಸಬೇಕು ಎಂಬ ಆಗ್ರಹಗಳು ಕೇಳಿಬಂದವು.

ಸಾರ್ವಜನಿಕರಿಗೆ ಕಾನೂನುಗಳ ಕುರಿತು ಅರಿವು ಮೂಡಿಸಿ ಅಪರಾಧ ಪ್ರಕರಣಗಳು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ವಾರ್ಡ್‌ ಹಾಗೂ ಗ್ರಾಪಂ ಸಭೆಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ದಲಿತ ದೌರ್ಜನ್ಯ ಕಾಯ್ದೆ ಕುರಿತು ಜನಸಾಮಾನ್ಯರಲ್ಲಿ ಉಂಟಾಗಿರುವ ಅನುಮಾನಗಳು ಹಾಗೂ ಕಾಯ್ದೆ ದುರ್ಬಳಕೆ ಕುರಿತು ಜಾಗೃತಿ ಮೂಡಿಸಬೇಕು ಎಂಬ ಸಲಹೆಗಳನ್ನು ಸಾರ್ವಜನಿಕರು ನೀಡಿದರು.

ರಾಜಕಾರಣಿಗಳ ಒತ್ತಡಕ್ಕೆ ಮಣಿಯಿದೆ ಮುಕ್ತವಾಗಿ ಪೊಲೀಸರು ಕೆಲಸ ನಿರ್ವಹಿಸಲಿ, ಡಿಜೆ ಬಳಕೆ ನಿಷೇಧ, ಪ್ಯಾರಿ ಸಕ್ಕರೆ ಕಾರ್ಖಾನೆಯಿಂದ ಉಂಟಾಗುತ್ತಿರುವ ತೊಂದರೆಗಳು, ಪೊಲೀಸ್‌ ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಮತ್ತು ಆರೋಪಿಗಳಿಗೆ ಪ್ರತ್ಯೇಕ ಕೊಠಡಿಗಳು, ಉದ್ಯಾನವನದಲ್ಲಿ ಯುವ ಪ್ರೇಮಿಗಳ ಕಾಟ, ಕುಡುಕರು ಹಾಗೂ ಪೋಲಿ ಹುಡುಗರ ಹಾವಳಿಗೆ ತಡೆ, ಕೋಮು ದ್ವೇಷ ಹರಡುದಂತೆ ಎಚ್ಚರಿಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಸಲಹೆ ಸಾರ್ವಜನಿಕರಿಂದ ವ್ಯಕ್ತವಾದವು.

ಸಾರ್ವಜನಿಕರಿಂದ ಕೇಳಿ ಬಂದ ಸಮಸ್ಯೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸಿ ಮಾತನಾಡಿದ ಎಸ್ಪಿ ಡಾ| ಸುಮನ ಪೆನ್ನೇಕರ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ಅಧಿಕಾರಿಗಳಿಗೆ ಸೂಚನೆ ನೀಡಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶ್ರಮಿಸುತ್ತೇವೆ ಎಂದರು.

ಕಾನೂನು ಬಾಹಿರ ಚಟುವಟಿಕೆಗಳಿದ್ದರೆ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿ ಮಾಹಿತಿ ನೀಡಿ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಾರ್ವಜನಿಕರ ಸಹಕಾರ ಅತ್ಯಗತ್ಯ. ತಿಂಗಳೊಳಗೆ ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತರಲಿದ್ದಾರೆ ಎಂದು ಭರವಸೆ ನೀಡಿದರು.

ಡಿವೈಎಸ್ಪಿ ಕೆ.ಎಲ್‌. ಗಣೇಶ, ದಾಂಡೇಲಿ ಸಿಪಿಐ ಬಿ.ಎಸ್‌. ಲೋಕಾಪುರ, ಜೋಯಿಡಾ ಸಿಪಿಐ ದಯಾನಂದ ಶೆಗುಣಸಿ, ಪಿಎಸ್‌ ಐಗಳಾದ ವಿನೋದ ರೆಡ್ಡಿ, ಉಮಾ ಬಸರಕೋಡ ಹಾಗೂ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next