ಮೈಸೂರು: ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಮಾಡಲು ಜಿಲ್ಲಾಡಳಿತ ಹಾಗೂ ಪಾಲಿಕೆಯ ವತಿಯಿಂದ ಪುರಭವನದಲ್ಲಿ ತೆರೆದಿರುವ ತುರ್ತು ಅವಶ್ಯಕ ಸಾಮಗ್ರಿಗಳ ಸಂಗ್ರಹ ಕಾರ್ಯಕ್ಕೆ ಸಾರ್ವಜನಿಕರು ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ.
ಗುರುವಾರದಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸುವ ಕಾರ್ಯವನ್ನು ಕೈಗೊಂಡಿದ್ದು, ಶನಿವಾರ ಸಂಜೆ 2 ಲಾರಿಗಳಷ್ಟು ತುರ್ತು ಸಾಮಗ್ರಿಗಳನ್ನು ಮಡಿಕೇರಿ ಹಾಗೂ ವಿರಾಜಪೇಟೆ ಕಡೆಗೆ ಕಳುಹಿಸಿಕೊಡಲಾಯಿತು. ವಿರಾಜಪೇಟೆ ಭಾಗದಲ್ಲಿ ಮೊಬೈಲ್ ಟಾಯ್ಲೆಟ್‌ಗಳು ಅಗತ್ಯವಾಗಿದ್ದ ಕಾರಣ ಒಂದು ಲಾರಿಯಲ್ಲಿ ತೆಗೆದುಕೊಂಡು ಕಳುಹಿಸಲಾಗಿದೆ.
ಸಹಾಯ ಮಾಡುವವರ ಸಂಖ್ಯೆ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಕ್ಕಿ, ನೀರಿನ ಬಾಟಲ್‌ಗಳು, ಬಿಸ್ಕತ್, ಚಾಪೆ, ಬೆಡ್‌ಶೀಟ್ ಹೀಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸಿದರು. ಇದರಿಂದಾಗಿ ಸಂಜೆ ವೇಳೆಗೆ ಸಣ್ಣ ವಾಹನಗಳ ಮೂಲಕ ತಿ.ನರಸೀಪುರ, ಹುಣಸೂರು, ಎಚ್.ಡಿ.ಕೋಟೆ ಸೇರಿದಂತೆ ಅಗತ್ಯವಿರುವ ತಾಲೂಕುಗಳಿಗೆ ತುರ್ತು ಸಾಮಗ್ರಿಗಳನ್ನು ಕಳುಹಿಸಿಕೊಡಲಾಯಿತು. ಲಾರಿಯಲ್ಲಿ ಮಡಿಕೇರಿ ಭಾಗಕ್ಕೂ ಅಗತ್ಯ ಸಾಮಗ್ರಿಗಳನ್ನು ಕಳುಹಿಸಿಕೊಡಲಾಯಿತು ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್ ತಿಳಿಸಿದರು.
ಹೆಚ್ಚಿನ ಮಟ್ಟದಲ್ಲಿ ಸಹಾಯ ಮಾಡಿ: ಸಂತ್ರಸ್ತರಿಗೆ ಟೆಟ್ರಾ ಪ್ಯಾಕ್‌ನಲ್ಲಿರುವ ಹಾಲು, ಬ್ರೆಡ್, ಬಿಸ್ಕತ್, ಊಟಕ್ಕೆ ಬೇಕಾಗುವ ಸಾಮಗ್ರಿಗಳು, ಹಾಸಿಗೆ, ಚಾಪೆ, ಹೊದಿಕೆ, ಒಳ ಉಡುಪುಗಳು, ಸ್ಯಾನಿಟರಿ ಪ್ಯಾಡ್, ಟಪೋಲಿನ್, ಟವೆಲ್, ಸೀರೆ, ಪ್ಯಾಂಟ್, ಶರ್ಟ್, ಮಕ್ಕಳ ಉಡುಪು, ಬೆಚ್ಚಗಿನ ಉಡುಪು, ಅಡುಗೆ ಸಾಮಗ್ರಿಗಳು, ಗ್ಯಾಸ್ ಸ್ಟೌ, ಪ್ಲಾಸ್ಟಿಕ್ ಬಕೆಟ್ ಹಾಗೂ ಮಗ್, ರೈನ್ ಕೋಟ್, ಬಟ್ಟೆಗಳು, ಗ್ಲೌವ್ಸ್, ಮಾಸ್ಕ್, ಪ್ಲಾಸ್ಟಿಕ್ ಮ್ಯಾಟ್ಸ್, ಛತ್ರಿಗಳು, ಬೆಡ್‌ಶೀಟ್ ಅಂಡ್ ಪಿಲೋ, ಲೆಗ್ಗಿನ್ಸ್ ಆ್ಯಂಡ್ ನೈಟಿ, ಸ್ವೆಟರ್ (ಮಕ್ಕಳು , ವೃದ್ಧರಿಗೆ), ಟಾರ್ಚ್ ಲೈಟ್ಸ್, ಪೆನಾಯಿಲ್ ಕ್ಲೀನಿಂಗ್ ಲಿಕ್ವಿಡ್ಸ್, ಬ್ಲೀಚಿಂಗ್ ಪೌಂಡರ್, ಸೋಪು, ಶ್ಯಾಂಪು, ಟೂತ್‌ಪೇಸ್ಟ್ ಅಂಡ್ ಬ್ರಸ್, ಮೇಣದ ಬತ್ತಿಗಳು, ಬೆಂಕಿಪೊಟ್ಟಣ ಇತ್ಯಾದಿ ಅಗತ್ಯ ವಸ್ತುಗಳು ಅಗತ್ಯವಾಗಿದ್ದು, ಜನರು ತಮ್ಮ ಕೈಲಾದ ಸಹಾಯವನ್ನು ಮಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಸಹಾಯ ಮಾಡಿದವರಗೆ ರಶೀದಿ: ಸಂತ್ರಸ್ತರ ನೆರವಿಗೆ ಆಗಮಿಸುವ ನಾಗರಿಕರಿಗೆ ವಸ್ತುಗಳನ್ನು ಪಡೆದಿರುವುದಾಗಿ ಪಾಲಿಕೆ ವತಿಯಿಂದ ರಶೀದಿಯನ್ನು ನೀಡುವ, ಪ್ರತಿಯೊಂದು ವಸ್ತುಗಳು ಹಾಗೂ ಸಹಾಯ ಮಾಡಿದ ವ್ಯಕ್ತಿಗಳ ಹೆಸರು, ಮೊಬೈಲ್ ಸಂಖ್ಯೆಯನ್ನು ದಾಖಲಿಸಿಕೊಳ್ಳುವ ಕಾರ್ಯ ಮಾಡಲಾಗುತ್ತಿದೆ.