Advertisement

ಜಿಲ್ಲಾಡಳಿತ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

07:11 PM Apr 29, 2021 | Team Udayavani |

ಗದಗ: ಕರ್ಫ್ಯೂ ಮಾರ್ಗಸೂಚಿಯಂತೆ ಬೆಳಗ್ಗೆ 6ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಯಿತು. ನಾಮಜೋಶಿ ರಸ್ತೆಯಲ್ಲಿ ಕಿರಾಣಿ ಅಂಗಡಿಗಳು ಬಾಗಿಲು ತೆರೆದು ವ್ಯಾಪಾರ ವಹಿವಾಟು ನಡೆಸಿದವು. ಜೊತೆಗೆ ತರಕಾರಿ ಮಾರುಕಟ್ಟೆಯಲ್ಲಿ ಜನಸಂದಣಿ ತಪ್ಪಿಸಲು ಇಲ್ಲಿನ ಭೂಮರೆಡ್ಡಿ ಸರ್ಕಲ್‌ನಿಂದ ಕೆ.ಎಚ್‌ .ಪಾಟೀಲ ವೃತ್ತದ ವರೆಗೆ ರಸ್ತೆ ಬದಿಯಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿರುವ ಜಿಲ್ಲಾಡಳಿತದ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದಿತು.

Advertisement

ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದಲ್ಲಿ ನೋಂದಾಯಿತರ ಪೈಕಿ ಸುಮಾರು 170ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ತರಕಾರಿ, ಹಣ್ಣು ಮತ್ತು ಹೂವು ಮಾರಾಟದಲ್ಲಿ ತೊಡಗಿದ್ದರು. ಸುಮಾರು ಅರ್ಧ ಕಿ.ಮೀ. ಹೆಚ್ಚು ದೂರದುದ್ದಕ್ಕೂ ಎರಡೂ ಬದಿಗೆ ಕುಳಿತು ವ್ಯಾಪಾರ ಮಾಡಿದರು.

ಈ ವೇಳೆ ತರಕಾರಿ, ಹಣ್ಣು ಖರೀದಿಗಾಗಿ ನೂರಾರು ಸಂಖ್ಯೆಯಲ್ಲಿ ಜನರು ಆಗಮಿದ್ದರೂ ವಿಶಾಲವಾದ ರಸ್ತೆಯಿದ್ದುದ್ದರಿಂದ ಹೆಚ್ಚಿನ ಜನ ಸಂದಣಿ ಕಂಡು ಬರಲಿಲ್ಲ. ಮಾಸ್ಕ್ ಧರಿಸಿ ಆಗಮಿಸಿದ್ದ ಗ್ರಾಹಕರು ತಮಗೆ ಬೇಕಾದದ್ದುನ್ನು ಖರೀದಿಸಿದರು. ಸ್ಥಳ ಸಿಗದಿದ್ದಕ್ಕೆ ತಗಾದೆ: ಈ ವೇಳೆ ರಸ್ತೆಯಲ್ಲಿ ಕೂರಲು ತಮ್ಮವರಿಗೆ ಅವಕಾಶ ಸಿಗದಿದ್ದರಿಂದ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ, ಗೌರವ ಅಧ್ಯಕ್ಷ ಉಮರ್‌ ಫಾರೂಕ್‌ ಹುಬ್ಬಳ್ಳಿ ಹಾಗೂ ನಗರಸಭೆ ಪೌರಾಯುಕ್ತ ರಮೇಶ್‌ ಜಾದವ್‌ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಇಲ್ಲಿನ ವೀರೇಶ್ವರ ಲೈಬ್ರರಿ ಬಳಿ ಜಮಾಯಿಸಿದ್ದ ಬೀದಿ ಬದಿ ವರ್ತಕರು, ತಮಗೆ ಕೂರಲು ಸ್ಥಳ ಸಿಕ್ಕಿಲ್ಲ. ನಾಳೆಯಿಂದ ನಗರದಲ್ಲಿ ತಿರುಗಾಡಿ ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಬೇಡಿಕೆಯನ್ನು ನಯವಾಗಿಯೇ ತಿರಸ್ಕರಿಸಿದ ಪೌರಾಯುಕ್ತರ ರಮೇಶ್‌ ಜಾದವ್‌, ಮಂಗಳವಾರ ಶಹರ ಪೊಲೀಸ್‌ ಠಾಣೆಯಲ್ಲಿ ಕರೆದಿದ್ದ ವರ್ತಕರನ್ನು ಪ್ರತಿನಿಧಿಸುವ ಮೂರೂ ಸಂಘಟನೆಗಳ ಒಪ್ಪಿಗೆಯಂತೆ ಇಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಂದೊಮ್ಮೆ ತಿರುಗಾಟಕ್ಕೆ ಅವಕಾಶ ಕೇಳುವು ದಾದರೆ, ಇಲ್ಲಿ ಯಾರೊಬ್ಬರೂ ಕೂರುವಂತಿಲ್ಲ. ಈ ಬಗ್ಗೆ ಯೋಚಿಸುವಂತೆ ನಿರ್ಧಾರ ತಿಳಿಸುವಂತೆ ಕಡ್ಡಿಮುರಿದಂತೆ ಹೇಳಿದರು.

ಬಳಿಕ ಪೂರ್ವ ನಿರ್ಧಾರದಂತೆ ರಸ್ತೆಯಲ್ಲಿ ತರಕಾರಿ ಮಾರಾಟದ ವೇಳೆ ಸಾಮಾಜಿ ಅಂತರ ಇರುವಂತೆ ವರ್ತಕರಿಗೆ ಸ್ಥಳ ನಿಗದಿಗೊಳಿಸಲಾಯಿತು. ಹಿರಿಯ ಅಧಿಕಾರಿಗಳ ಭೇಟಿ ಪರಿಶೀಲನೆ: ಮಾರುಕಟ್ಟೆ ತಾತ್ಕಾಲಿಕವಾಗಿ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ವರ್ತಕರ ಅಹವಾಲು ಆಲಿಸಿ ಎಸ್ಪಿ ಯತೀಶ್‌ ಎನ್‌., ಹೆಚ್ಚಿನ ವ್ಯಾಪಾರಿಗಳಿದ್ದಲ್ಲಿ ರಸ್ತೆಯ ಇನ್ನುಳಿದ ಭಾಗದಲ್ಲೂ ಕೂರಬಹುದು. ಹಣ್ಣು, ತರಕಾರಿ ಹಾಗೂ ಹೂವು ಮಾರಾಟಗಾರರಿಗೆ ಪ್ರತ್ಯೇಕವಾಗಿ ಸ್ಥಳ ಸೂಚಿಸುತ್ತೇವೆ. ಆದರೆ, ನಗರದಲ್ಲಿ ಸಂಚರಿಸಿ ಮಾರಾಟಕ್ಕೆ ಅವಕಾಶ ಇಲ್ಲ ಸ್ಪಷ್ಟಪಡಿಸಿದರು. ಇನ್ನು, ನಿಗದಿತ ಅವಧಿ ಪೂರ್ಣಗೊಂಡು, ವ್ಯಾಪಾರ ಮುಕ್ತಾಯವಾಗುತ್ತಿದ್ದಂತೆ ನಗರಸಭೆ ಸಿಬ್ಬಂದಿ ರಸ್ತೆಯನ್ನು ಸ್ವತ್ಛಗೊಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next