ನವದೆಹಲಿ: ಇಂದಿನಿಂದ ಭಾರತದಲ್ಲಿ ಪಬ್ ಜಿ ಮೊಬೈಲ್ ಮತ್ತು ಪಬ್ ಜಿ ಮೊಬೈಲ್ ಲೈಟ್ ಅಧಿಕೃತವಾಗಿ ತನ್ನ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದೆ. ಈ ಕುರಿತು ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ ಪಬ್ ಜಿ ಸಂಸ್ಥೆ , ಭಾರತದಲ್ಲಿ ತನ್ನೆಲ್ಲಾ ಸರ್ವರ್ ಗಳನ್ನು ಬಂದ್ ಮಾಡುತ್ತಿರುವುದಾಗಿ ತಿಳಿಸಿದೆ.
ದೇಶದ ಭದ್ರತೆಗೆ ಧಕ್ಕೆ ತರುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಪಬ್ ಜಿ, ಟಿಕ್ ಟಾಕ್ ಸೇರಿದಂತೆ ಹಲವು ಚೀನಾ ಆ್ಯಪ್ ಗಳನ್ನು ಬ್ಯಾನ್ ಮಾಡಿತ್ತು. ಆದರೇ ಈಗಾಗಲೇ ಸ್ಮಾರ್ಟ್ ಫೋನ್ ಗಳಲ್ಲಿ ಇನ್ ಸ್ಟಾಲ್ ಆಗಿದ್ದ ಪಬ್ ಜೀ ಗೇಮ್ ಎಂದಿನಂತೆ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಸರ್ವರ್ ಅನ್ನು ಸ್ಥಗಿತಗೊಳಿಸಲಾಗಿದ್ದು, ಭಾರತದಲ್ಲಿ ತನ್ನ ಸೇವೆ ಅಧಿಕೃತವಾಗಿ ನಿಲ್ಲಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಅದಾಗ್ಯೂ ವಿಪಿಎನ್ ಮೂಲಕ ಪಬ್ ಜಿ ಬಳಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ವರದಿ ತಿಳಿಸಿದೆ.
ಭಾರತದಲ್ಲಿ ಮೊದಲಿಗೆ ಟಿಕ್ ಟಾಕ್ ಸೇರಿದಂತೆ 58 ಆ್ಯಪ್ ಗಳನ್ನು ನಿಷೇಧ ಮಾಡಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ಪಬ್ ಜಿ ಸೇರಿದಂತೆ 117 ಚೀನಾ ಮೂಲದ ಆ್ಯಪ್ ಗಳನ್ನು ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಅದೇಶ ಹೊರಡಿಸಿತ್ತು.