ನವದೆಹಲಿ: ಸೆಪ್ಟೆಂಬರ್‌ನಲ್ಲಿ 117 ಚೀನೀ ಆ್ಯಪ್ ಗಳೊಂದಿಗೆ ನಿಷೇಧಕ್ಕೊಳಗಾಗಿದ್ದ ಪಬ್‌ಜಿ ಈಗ “ಪಬ್‌ಜಿ ಮೊಬೈಲ್ ಇಂಡಿಯಾ’ ಹೆಸರಿನಲ್ಲಿ ದೇಸೀ ಅವತಾರದೊಂದಿಗೆ ಭಾರತದ ಮಾರುಕಟ್ಟೆ ಪ್ರವೇಶಿಸಿದೆ.
ಪಬ್‌ಜಿ ಇಂಡಿಯಾ ಗೇಮ್‌ನ ಪಾತ್ರಗಳಲ್ಲಿ ಸ್ಥಳೀಯ ಬಳಕೆದಾರರ ನಿರೀಕ್ಷೆಗೆ ತಕ್ಕಂತೆ ಬದಲಾವಣೆ ತರಲಾಗಿದೆ. ಪೂರ್ಣ ಉಡುಪು ತೊಟ್ಟ ಪಾತ್ರಗಳು ಕಾಣಿಸಿಕೊಂಡಿವೆ. ಕಡಿಮೆ ವಯಸ್ಸಿನ ಮಕ್ಕಳಿಗೆ ಆಟದ ಮೇಲಿನ ಗೀಳನ್ನು ನಿಯಂತ್ರಿಸಲು, ಗೇಮ್ ಕಾಲಾವಧಿಗೆ ಮಿತಿ ಹೇರಲಾಗಿದೆ.
“ಆ್ಯಪ್ ಬಳಕೆದಾರರ ಡೇಟಾವನ್ನು ಸುರಕ್ಷಿತವಾಗಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಸೂಚಿಸಿದ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿದೆ’ ಎಂದು ಪಬ್‌ಜಿ ಕಾರ್ಪೊರೇಶನ್ ಭರವಸೆ ನೀಡಿದೆ.
ಇದನ್ನೂ ಓದಿ:ವಿಳಂಬವಾಗಿ ಫ್ಲ್ಯಾಟ್ ನೀಡಿದ ನಿರ್ಮಾಣ ಸಂಸ್ಥೆಗೆ 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ
ಪಬ್‌ಜಿ ಕಾರ್ಪೊರೇಶನ್ ಇತ್ತೀಚೆಗಷ್ಟೇ ಭಾರತೀಯ ಬಳಕೆದಾರರ ಡೇಟಾ ಸಂರಕ್ಷಿಸಲು ಮೈಕ್ರೋಸಾಫ್ಟ್ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿತ್ತು. ಭಾರತದಲ್ಲಿ ಸ್ಥಳೀಯ ಶಾಖೆ ತೆರೆಯಲೂ ಸಂಸ್ಥೆ ಯೋಜನೆ ರೂಪಿಸಿದ್ದು, 100ಕ್ಕೂ ಅಧಿಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ.