ನವದೆಹಲಿ:ಪಬ್ ಜಿ ಗೇಮ್ ಮೂಲಕ ಪರಿಚಯವಾದ ಗೆಳೆಯನೊಬ್ಬ ನಂತರ ತನ್ನ ಸ್ನೇಹಿತೆಯ ಫೇಸ್ ಬುಕ್ ಮತ್ತು ಮೇಲ್ ಐಡಿಯನ್ನು ಹ್ಯಾಕ್ ಮಾಡಿ ನಗ್ನ ವಿಡಿಯೋಗೆ ಬೇಡಿಕೆ ಇಟ್ಟಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.ಈ ಹಿನ್ನೆಲೆಯಲ್ಲಿ ಆನ್ ಲೈನ್ ನಲ್ಲಿ ಪರಿಚಯವಾಗುವ ಗೆಳೆಯರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ. ಅಲ್ಲದೇ ತನಗೆ ಇದು ಪಾಠ ಕಲಿಸಿದೆ ಎಂದು 24 ವರ್ಷದ ಯುವತಿ ಅಲವತ್ತುಕೊಂಡಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ.
ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, 24 ವರ್ಷದ(ತಾನ್ಯಾ ಹೆಸರು ಬದಲಾಯಿಸಲಾಗಿದೆ) ಯುವತಿಯೊಬ್ಬಳು ಎರಡು ತಿಂಗಳ ಹಿಂದೆ ತನ್ನ ಮೊಬೈಲ್ ನಲ್ಲಿ ಪಬ್ ಜಿ ಗೇಮ್ ಆಡುತ್ತಿದ್ದಾಗ “ಅಜಯ್ ತುಫಾನ್ ಕಿಲ್ಲರ್” ಎಂಬ ಹೆಸರಿನ ಗೇಮರ್ ಸಂಪರ್ಕಕ್ಕೆ ಬಂದಿದ್ದ. ಈತನ ಹೆಸರು ಜಿತೇಂದ್ರ ಎಂಬುದಾಗಿದ್ದು, ಸ್ನೇಹಿತೆ ಪರಿಚಯ (ತಾನ್ಯಾಗೆ) ಮಾಡಿಕೊಟ್ಟಿದ್ದಳು. ನಂತರ ಆತ ಮೊಬೈಲ್ ನಂಬರ್ ಪಡೆದುಕೊಂಡು ಚಾಟಿಂಗ್ ಆರಂಭಿಸಿದ್ದ ಎಂದು ವರದಿ ತಿಳಿಸಿದೆ.
ಸ್ವಲ್ಪ ದಿನದ ನಂತರ ಜಿತೇಂದ್ರ ತಾನ್ಯಾಳ ಬಳಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದ. ಆಕೆ ಆತನ ಪ್ರಪೋಸಲ್ ಅನ್ನು ಸ್ವೀಕರಿಸಿದ್ದಳು. ಆಕೆಯ ದೂರಿನ ಪ್ರಕಾರ, ಕೆಲವು ದಿನಗಳ ಬಳಿಕ ಜಿತೇಂದ್ರ ಅಸಭ್ಯ ಬೇಡಿಕೆಗಳನ್ನು ಇಡತೊಡಗಿದ್ದ, ಅಲ್ಲದೇ ಅಶ್ಲೀಲವಾಗಿ ಮಾತನಾಡತೊಡಗಿದ್ದ. ಇದರಿಂದಾಗಿ ಆಕೆ ಆತನ ಜತೆಗಿನ ಸಂಪರ್ಕ ಬಿಟ್ಟುಬಿಟ್ಟಿರುವುದಾಗಿ ವಿವರಿಸಿದ್ದಾಳೆ.
ಈ ಘಟನೆ ನಡೆದು ಕೆಲವು ದಿನಗಳ ಬಳಿಕ ತಾನ್ಯಾ ತನ್ನ ಫೇಸ್ ಬುಕ್ ಖಾತೆ ಲಾಗಿನ್ ಆಗಲು ಪ್ರಯತ್ನಿಸಿದ್ದಳು. ಆದರೆ ಆಕೆಗೆ ಲಾಗಿನ್ ಮಾಡಲು ಸಾಧ್ಯವಾಗಿಲ್ಲವಾಗಿತ್ತು. ಮತ್ತೆ ಪ್ರಯತ್ನಿಸಿದಾಗ ಜಿತೇಂದ್ರನ ಮೊಬೈಲ್ ನಂಬರ್ ಕಂಡು ಬಂದಿತ್ತು. ಜಿತೇಂದ್ರ ಯುವತಿಯ ಮೊಬೈಲ್ ನಂಬರ್ , ಫೇಸ್ ಬುಕ್ ಐಡಿ ಬಳಸಿ ಹ್ಯಾಕ್ ಮಾಡಿ ಪಾಸ್ ವರ್ಡ್ ಬದಲಾಯಿಸಿಬಿಟ್ಟಿದ್ದ. ಈ ವಿಷಯ ತಿಳಿದು ಯುವತಿ ವಿಚಾರವನ್ನು ಸಹೋದರನ ಜತೆ ಚರ್ಚಿಸಿದ್ದಳು. ಆತ
ಜಿತೇಂದ್ರನ ಬಳಿ ಮಾತನಾಡಿದಾಗ 50 ಸಾವಿರ ರೂಪಾಯಿ ಹಣ ನೀಡಿದರೆ ಮಾತ್ರ ಪಾಸ್ ವರ್ಡ್ ನೀಡುವುದಾಗಿ ತಿಳಿಸಿದ್ದ.
ಆದರೆ ಈ ಕರಾರು ಒಪ್ಪದ ಯುವತಿ ವಾಪಸ್ ಬಂದಿದ್ದಳು. ಆದರೆ ಒಂದು ದಿನ ಕರೆ ಮಾಡಿದ ಜಿತೇಂದ್ರ ಹಣ ಕೊಡಲು ಸಾಧ್ಯವಾಗದಿದ್ದರೆ ಒಂದು ಬಾರಿ ನಗ್ನ ವಿಡಿಯೋ ಕಾಲ್ ಮಾಡು ಎಂದು ಬೇಡಿಕೆ ಇಟ್ಟಿದ್ದ. ಇದರಿಂದ ರೋಸಿ ಹೋದ ಯುವತಿ ಸೋಲಾ ಪೊಲೀಸ್ ಠಾಣೆಯಲ್ಲಿ ಜಿತೇಂದ್ರ ವಿರುದ್ಧ ದೂರು ದಾಖಲಿಸಿರುವುದಾಗಿ ವರದಿ ತಿಳಿಸಿದೆ.