Advertisement

ಪಿಯು ಮಧ್ಯವಾರ್ಷಿಕ, ಪೂರ್ವ ಸಿದ್ಧತಾ ಪರೀಕ್ಷೆಗೂ ಏಕರೂಪ ಪ್ರಶ್ನೆ ಪತ್ರಿಕೆ

09:35 PM Nov 06, 2021 | Team Udayavani |

ಬೆಂಗಳೂರು: ಕೋವಿಡ್‌ ಮೂರನೇ ಅಲೆಯ ಭೀತಿಯಿಂದ ಶೈಕ್ಷಣಿಕ ಕ್ಷೇತ್ರದ ಮೇಲಾಗಬಹುದಾದ ದುಷ್ಪರಿಣಾಮ ಅಂದಾಜಿಸಿ, ಈ ಶೈಕ್ಷಣಿಕ ವರ್ಷದಿಂದಲೇ ಮಧ್ಯವಾರ್ಷಿಕ, ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಏಕರೂಪದಲ್ಲಿ ನೀಡಲು ನಿರ್ಧರಿಸಲಾಗಿದೆ.

Advertisement

ಕೋವಿಡ್‌ ಹಿನ್ನೆಲೆಯಲ್ಲಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆ ಇಲ್ಲದೇ ಪಾಸ್‌ ಮಾಡಲಾಗಿತ್ತು. ಹಾಗೆಯೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸರಳೀಕೃತ ಪರೀಕ್ಷೆ ಮೂಲಕ ಎಲ್ಲರನ್ನೂ ಪಾಸ್‌ ಮಾಡಲಾಗಿತ್ತು. ಈ ಶೈಕ್ಷಣಿಕ ವರ್ಷದಲ್ಲೂ ಕೊರೊನಾ ಭೀತಿ ಇರುವುದರಿಂದ ಪರೀಕ್ಷಾ ಮಂಡಳಿಯಿಂದಲೇ ಏಕರೂಪ ಪ್ರಶ್ನೆ ಪತ್ರಿಕೆ ನೀಡಲು ನಿರ್ಧರಿಸಲಾಗಿದೆ ಎಂದು ಸರ್ಕಾರ ಉನ್ನತ ಮೂಲಗಳು ಉದಯವಾಣಿಗೆ ಖಚಿತಪಡಿಸಿದೆ.

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನ.20ರ ನಂತರ ಮಧ್ಯವಾರ್ಷಿಕ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ಈ ಬಗ್ಗೆ ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳು ಸಭೆಯನ್ನು ನಡೆಸಿ, ಜಿಲ್ಲಾ ಉಪನಿರ್ದೇಶಕರಿಗೆ, ಪ್ರಾಂಶುಪಾಲರಿಗೆ ಸಿದ್ಧತೆಗೆ ಬೇಕಾದ ಸೂಚನೆಯನ್ನೂ ನೀಡಲಾಗಿದೆ. ಹಾಗೆಯೇ ಮಂಡಳಿಯಿಂದಲೇ ಏಕರೂಪ ಪ್ರಶ್ನೆ ಪತ್ರಿಕೆ ನೀಡುವ ಬಗ್ಗೆಯೂ ಮಾಹಿತಿ ಒದಗಿಸಿದ್ದಾರೆಂದು ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರೊಬ್ಬರು ಮಾಹಿತಿ ನೀಡಿದರು.

ಈ ವರೆಗೂ ಪಿಯುಸಿ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದಲ್ಲಿ ಪ್ರಾಂಶುಪಾಲರ ಸಂಘ ಅಥವಾ ಒಕ್ಕೂಟದಿಂದ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ನೀಡಲಾಗುತ್ತಿತ್ತು. ಎಲ್ಲ ಜಿಲ್ಲೆಗಳಲ್ಲೂ ಇದೇ ರೀತಿ ಕ್ರಮವಿದ್ದು, ಪ್ರಶ್ನೆ ಪತ್ರಿಕೆಯ ಗುಣಮಟ್ಟ ಒಂದೇ ರೀತಿಯಲ್ಲಿದ್ದರೂ ಪ್ರಶ್ನೆಗಳಲ್ಲಿ ಏಕರೂಪತೆ ಇರಲಿಲ್ಲ. ಹೀಗಾಗಿ ಕೃಪಾಂಕ ಇತ್ಯಾದಿ ನೀಡುವಾಗ ಸಮಸ್ಯೆ ಎದುರಾಗುತ್ತಿತ್ತು. ಆದ್ದರಿಂದ ರಾಜ್ಯಮಟ್ಟದಿಂದಲೇ ಏಕರೂಪ ಪ್ರಶ್ನೆಪತ್ರಿಕೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಕೇಂದ್ರ ಕಾರಾಗೃಹದಲ್ಲಿ ಎರೆಹುಳು ಗೊಬ್ಬರ ಘಟಕ: ಸಿಇಒ

Advertisement

ಬದಲಾವಣೆ ಏಕೆ?
ಕೊರೊನಾ ಅಥವಾ ಬೇರೆ ಯಾವುದೇ ಕಾರಣದಿಂದ ವಾರ್ಷಿಕ ಪರೀಕ್ಷೆ ರದ್ದಾದರೆ, ವಿದ್ಯಾರ್ಥಿಗಳ ಫಲಿತಾಂಶ ನೀಡಲು ಎಸ್ಸೆಸ್ಸೆಲ್ಸಿ ಹಾಗೂ ಪ್ರಥಮ ಪಿಯುಸಿ ಪರೀಕ್ಷೆ ಅಂಕ ಹೊರತುಪಡಿಸಿ ಬೇರೆ ಯಾವ ಮಾರ್ಗ ಇರುವುದಿಲ್ಲ. ಆದ್ದರಿಂದ ಆಯಾ ಶೈಕ್ಷಣಿಕ ವರ್ಷದ ಕಲಿಕೆಯ ಆಧಾರದಲ್ಲಿ ಅಂಕ ನೀಡಲು ಅನುಕೂಲ ಆಗುವಂತೆ ಹಾಗೂ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಇನ್ನು ಅನುಕೂಲ ಆಗುವಂತೆ ಏಕರೂಪ ಪ್ರಶ್ನೆ ಪತ್ರಿಕೆಯನ್ನು ಮಧ್ಯವಾರ್ಷಿಕ ಹಾಗೂ ಪೂರ್ವ ಸಿದ್ಧತಾ ಪರೀಕ್ಷೆ ಪಿಯು ಇಲಾಖೆಯಿಂದಲೇ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಅಧಿಕಾರಿಯೊ ಬ್ಬರು ಖಚಿತಪಡಿಸಿದರು.

ಇನ್ನೂ ನಿರ್ಧಾರವಾಗಿಲ್ಲ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮಧ್ಯವಾರ್ಷಿಕ ಹಾಗೂ ಪೂರ್ವ ಸಿದ್ಧತಾ ಪರೀಕ್ಷೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದಲೇ ನೀಡಲಾಗುತ್ತಿತ್ತು. ಕಳೆದ ವರ್ಷದ ಕೊರೊನಾದಿಂದ ಈ ಪರೀಕ್ಷೆಗಳು ನಡೆದಿರಲಿಲ್ಲ. ಈ ವರ್ಷ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ಮಂಡಳಿಯ ನಿರ್ದೇಶಕಿ ವಿ.ಸುಮಂಗಳಾ ಮಾಹಿತಿ ನೀಡಿದರು.

ಮಧ್ಯವಾರ್ಷಿಕ ಹಾಗೂ ಪೂರ್ವ ಸಿದ್ಧತಾ ಪರೀಕ್ಷೆಗೆ ಏಕರೂಪ ಪ್ರಶ್ನೆ ಪತ್ರಿಕೆ ನೀಡುವ ಬಗ್ಗೆ ಈಗಾಗಲೇ ಇಲಾಖೆಯ ಉನ್ನತಾಧಿಕಾರಿಗಳು ಉಪನ್ಯಾಸಕರ ಸಂಘ ಹಾಗೂ ಪ್ರಾಂಶುಪಾಲರ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚಿಸಿ ದ್ದಾರೆ. ಮುಂದಿನ ವಾರ ಈ ಬಗ್ಗೆ ಆದೇಶ ಹೊರಡಿಸುವ ಸಾಧ್ಯತೆಯಿದೆ.
– ಎ.ಎಚ್‌. ನಿಂಗೇಗೌಡ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next