Advertisement

ಪಿಯು ಅತಿಥಿ ಉಪನ್ಯಾಸಕರಿಗಿಲ್ಲ ಗೌರವಧನ ಹೆಚ್ಚಳ ಭಾಗ್ಯ: ಇವರ ಮಾಸಿಕ ಸಂಭಾವನೆ ಈಗಲೂ 9 ಸಾವಿರ!

09:06 AM Jun 23, 2022 | Team Udayavani |

ಉಡುಪಿ: ಸರಕಾರಿ ಶಾಲೆ ಮತ್ತು ಪದವಿ ಕಾಲೇಜುಗಳ ಅತಿಥಿ ಶಿಕ್ಷಕ, ಉಪನ್ಯಾಕರ ಮಾಸಿಕ ಗೌರವಧನವನ್ನು ಪರಿಷ್ಕರಿಸಲಾಗಿದೆ. ಆದರೆ ಸರಕಾರಿ ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರು ಮಾತ್ರ ಕನಿಷ್ಠ ವೇತನಕ್ಕಿಂತಲೂ ಕಡಿಮೆ ಗೌರವಧನ ಪಡೆಯುತ್ತಿದ್ದಾರೆ.

Advertisement

ರಾಜ್ಯದಲ್ಲಿ 1,250ಕ್ಕೂ ಅಧಿಕ ಸರಕಾರಿ ಪದವಿಪೂರ್ವ ಕಾಲೇಜುಗಳಿದ್ದು, 3,267 ಅತಿಥಿ ಉಪನ್ಯಾಸಕರಿದ್ದಾರೆ. ಅವರಿಗೆ ಮಾಸಿಕ 9 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ 9 ಸಾವಿರ ರೂ. ಯಾವುದಕ್ಕೂ ಸಾಲದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದರೂ ಸರಕಾರ ಪರಿಷ್ಕರಣೆ ಮಾಡುತ್ತಿಲ್ಲ.

ಕಾಲೇಜಿನ ಕಾರ್ಯಭಾರಕ್ಕೆ ಅನುಗುಣವಾಗಿ ಇವರು ಸೇವೆ ಸಲ್ಲಿಸಬೇಕಾಗುತ್ತದೆ. ಅತಿಥಿ ಉಪನ್ಯಾಸಕರಿಗೆ ಬೇರೆ ಉದ್ಯೋಗ ಮಾಡುವುದು ಕಷ್ಟ. ಬೆಳಗ್ಗೆ ಅಥವಾ ಮಧ್ಯಾಹ್ನ ಎರಡೆರೆಡು ತರಗತಿ ಇದ್ದರೆ ಬೇರೆ ಉದ್ಯೋಗಕ್ಕೆ ಸಮಯ ಹೊಂದಿಸಿಕೊಳ್ಳಲು ಸಾಧ್ಯವಿಲ್ಲ. ಪೂರ್ಣ ಇದರಲ್ಲೇ ಇದ್ದರೆ ಜೀವನ ನಡೆಸುವುದು ಕಷ್ಟ.

ಯಾರ್ಯಾರಿಗೆ ಗೌರವ ಧನ
ಎಷ್ಟಿತ್ತು? ಈಗ ಎಷ್ಟಾಗಿದೆ?
ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಮಾಸಿಕ 15 ಸಾವಿರ ರೂ.ನೀಡುತ್ತಿದ್ದರು. ಕಳೆದ ವರ್ಷ ರಾಜ್ಯ ಸರಕಾರದ ಇವರ ಗೌರವಧವನ್ನು ಪರಿಷ್ಕರಿಸಿದೆ. ಅದರಂತೆ ಐದು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಅತಿಥಿ ಉಪನ್ಯಾಸಕರಾಗಿದ್ದು ಯುಜಿಸಿಯ ವಿದ್ಯಾರ್ಹತೆ (ನೆಟ್‌, ಪಿಎಚ್‌.ಡಿ ಇತ್ಯಾದಿ) ಹೊಂದಿದ್ದರೆ 32 ಸಾವಿರ ರೂ., ಐದು ವರ್ಷಕ್ಕಿಂತಲೂ ಹೆಚ್ಚುಕಾಲ ಅತಿಥಿ ಉಪನ್ಯಾಸಕರಾಗಿದ್ದು ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದಿದ್ದರೆ 28 ಸಾವಿರ ರೂ. ಹಾಗೂ 5 ವರ್ಷಕ್ಕಿಂತ ಕಡಿಮೆ ಅನುಭವ, ಯುಜಿಸಿ ವಿದ್ಯಾರ್ಹತೆ ಇಲ್ಲದೇ ಇದ್ದರೆ 26 ಸಾವಿರ ರೂ. ನೀಡಲಾಗುತ್ತದೆ.

ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿದ್ದವರಿಗೆ 7,500 ರೂ. ನೀಡುತ್ತಿದ್ದರು. ಈಗ 10 ಸಾವಿರ ರೂ.ಗೆ ಏರಿಸಲಾಗಿದೆ. ಪ್ರೌಢಶಾಲೆಯ ಅತಿಥಿ ಶಿಕ್ಷಕರಿಗೆ 8 ಸಾವಿರ ರೂ. ನೀಡುತ್ತಿದ್ದು, ಈಗ 10,500 ರೂ.ಗೆ ಏರಿಸಲಾಗಿದೆ. ಆದರೆ ಸರಕಾರಿ ಪಿಯು ಕಾಲೇಜಿನ ಉಪನ್ಯಾಸಕರಿಗೆ ಅನೇಕ ವರ್ಷಗಳಿಂದ 9 ಸಾವಿರ ರೂ. ಮಾತ್ರ ನೀಡುತ್ತಿದ್ದು, ಪರಿಷ್ಕರಣೆಯೇ ಆಗಿಲ್ಲ.

Advertisement

ಬೇಡಿಕೆ ಏನು?
ಪದವಿ ಹಾಗೂ ಶಾಲೆಯ ಅತಿಥಿ ಉಪನ್ಯಾಸಕ, ಶಿಕ್ಷಕರಿಗೆ ಈಗಾಗಲೇ ಗೌರವ ಧನ ಪರಿಷ್ಕರಣೆ ಮಾಡಲಾಗಿದೆ. ಆದರೆ ಪಿಯು ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಕಳೆದ ಐದಾರು ವರ್ಷದಿಂದ ಒಮ್ಮೆಯೂ ವೇತನ ಪರಿಷ್ಕರಣೆ ಮಾಡಿಲ್ಲ. ಶೈಕ್ಷಣಿಕ ಕಾರ್ಯಭಾರದ ಆಧಾರದಲ್ಲಿ ತರಗತಿಗಳನ್ನು ನಡೆಸುವ ನಮಗೆ ಸರಕಾರದ ಕನಿಷ್ಠ ವೇತನ ನೀತಿಯಂತೆಯೂ ವೇತನ ಸಿಗುತ್ತಿಲ್ಲ. ಹೀಗಾಗಿ ಕನಿಷ್ಠ ತಿಂಗಳಿಗೆ 20 ಸಾವಿರ ರೂ. ಗೌರವಧನ ನೀಡಬೇಕು ಎಂಬ ಬೇಡಿಕೆಯನ್ನು ಅತಿಥಿ ಉಪನ್ಯಾಸಕರು ಸರಕಾರದ ಮುಂದಿಟ್ಟಿದ್ದಾರೆ.

ಚರ್ಚೆ ನಡೆಯುತ್ತಿದೆ
ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಸಂಬಂಧ ಸರಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಈವರೆಗೆ ಯಾವುದೇ ನಿರ್ಧಾರ ಆಗಿಲ್ಲ. ಈಗಾಗಲೇ ಪದವಿ ಹಾಗೂ ಶಾಲೆಯ ಅತಿಥಿ ಶಿಕ್ಷಕ, ಉಪನ್ಯಾಸಕರ ಗೌರವಧನ ಪರಿಷ್ಕರಿಸಿರುವುದರಿಂದ ಪಿಯು ಕಾಲೇಜಿನ ಅತಿಥಿ ಉಪನ್ಯಾಸಕರ ಗೌರವಧನವನ್ನು ಪರಿಷ್ಕರಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಿಸಬೇಕು ಎಂದು ಹಲವು ಬಾರಿ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಅನೇಕ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಲ್ಲದೆ ತರಗತಿ ನಡೆಸುವುದೇ ಕಷ್ಟ. ಕನಿಷ್ಠ 20 ಸಾವಿರ ರೂ. ಗೌರವಧನ ನೀಡಲು ತತ್‌ಕ್ಷಣವೇ ಆದೇಶ ಹೊರಡಿಸುವಂತೆ ಎರಡು ದಿನದೊಳಗೆ ಸರಕಾರ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ.
– ಎ.ಎಚ್‌. ನಿಂಗೇಗೌಡ, ಅಧ್ಯಕ್ಷ,
ಸರಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next