Advertisement

ಪಿಯು ಪರೀಕ್ಷೆಗೆ ಕೋವಿಡ್ ಸೋಂಕಿತ ವಿದ್ಯಾರ್ಥಿನಿ, ಸತ್ಯಕ್ಕೆ ದೂರ: ಸುರೇಶ್‍ಕುಮಾರ್

05:35 PM Jun 20, 2020 | sudhir |

ಬೆಂಗಳೂರು: ಗುರುವಾರ ನಡೆದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಬೆಂಗಳೂರಿನ ಜಯನಗರದ ಬಿಇಎಸ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿ ಕ್ವಾರಂಟೈನ್ ಮೊಹರನ್ನು ಅಳಿಸಿಕೊಂಡು ಹಾಜರಾಗಿದ್ದಾಳೆಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್, ಈ ವಿದ್ಯಾರ್ಥಿನಿಯ ಕೋವಿಡ್ ಟೆಸ್ಟ್ ಮಾಡಿಸಲಾಗಿದ್ದು, ‘ಕೋವಿಡ್ ನೆಗೆಟೀವ್’ ಎಂಬುದು ಸ್ಪಷ್ಟವಾಗಿ ದೃಢಪಟ್ಟಿದೆ ಎಂದು ಹೇಳಿದ್ದಾರೆ.

Advertisement

ವಿದ್ಯಾರ್ಥಿನಿಯೊಬ್ಬಳು ಕ್ವಾರಂಟೈನ್ ಮೊಹರು ಅಳಿಸಿ ಪರೀಕ್ಷೆಗೆ ಹಾಜರಾಗಿದ್ದಾಳೆಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿದ್ಯಾರ್ಥಿನಿಯ ಕೋವಿಡ್ ಟೆಸ್ಟ್ ಮಾಡಿಸಲಾಗಿದ್ದು, ಇಂದು ಮಧ್ಯಾಹ್ನ 2.54ಕ್ಕೆ ವರದಿಯನ್ನೂ ಸಹ ಪಡೆಯಲಾಗಿದೆ. ಈ ವರದಿಯಲ್ಲಿ ‘ಕೋವಿಡ್ ನೆಗೆಟೀವ್’ ಎಂಬುದು ಸ್ಪಷ್ಟವಾಗಿ ದೃಢಪಟ್ಟಿದೆ. ಹಾಗಾಗಿ ಆಕೆ ಪರೀಕ್ಷೆ ಬರೆದ ಕೊಠಡಿಯಲ್ಲಿ ಹಾಜರಿದ್ದ ಯಾವುದೇ ಪರೀಕ್ಷಾರ್ಥಿಗಳು ಭಯಪಡಬೇಕಾದ ಅಗತ್ಯವಿಲ್ಲ, ಯಾವುದೇ ವಿದ್ಯಾರ್ಥಿ ಕ್ವಾರಂಟೈನ್‍ಗೆ ಒಳಗಾಗಬೇಕಾದ ಅಗತ್ಯವೂ ಇಲ್ಲ ಎಂದು ತಿಳಿಸಿದರು.

ಆ ವಿದ್ಯಾರ್ಥಿನಿಯೂ ಸಹ ಆರೋಗ್ಯದ ದೃಷ್ಟಿಯಿಂದ ಸುರಕ್ಷಿತವಾಗಿದ್ದಾಳೆ. ಆಕೆಯ ತಂದೆ ಈಗಾಗಲೇ ಕ್ವಾರಂಟೈನ್‍ನಲ್ಲಿದ್ದು, ಆರೋಗ್ಯ ಇಲಾಖೆಯ ನಿಗಾದಲ್ಲಿ ಸೂಕ್ತ ಚಿಕಿತ್ಸೆಗೊಳಗಾಗಿದ್ದಾರೆ. ಅವರೂ ಸಹ ಯಾವುದೇ ವಿಶೇಷ ಆರೋಗ್ಯದ ತೊಂದರೆಗೆ ಒಳಗಾಗಿಲ್ಲ ಎಂದು ಸುರೇಶ್ ಕುಮಾರ್ ತಿಳಿಸಿದರು.

ಜೂ. 18ರಂದು ಇಂಗ್ಲಿಷ್ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಸುಮಾರು ಆರು ಲಕ್ಷ ವಿದ್ಯಾರ್ಥಿಗಳು ಅತ್ಯಂತ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆದಿದ್ದಾರೆ. ಶಿಕ್ಷಣ ಇಲಾಖೆಯೊಂದಿಗೆ ಆರೋಗ್ಯ, ಸಾರಿಗೆ, ಗೃಹ ಇಲಾಖೆಗಳು ಸೇರಿದಂತೆ ರಾಜ್ಯದಲ್ಲಿ ಆಯಾ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆದಿವೆ. ಎಲ್ಲಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳ ಹಿತರಕ್ಷಣೆಯೇ ನಮ್ಮ ಮೊದಲ ಆದ್ಯತೆಯಾದ್ದರಿಂದ ಮಕ್ಕಳ ಸುರಕ್ಷತೆ ಹೆಚ್ಚು ಒತ್ತು ನೀಡಲಾಗಿದ್ದು, ಈ ಸಂಬಂಧಲ್ಲಿ ಮಕ್ಕಳನ್ನು ಮನೆಯಿಂದ ಪರೀಕ್ಷಾ ಕೇಂದ್ರ ಹಾಗೆಯೇ ಪರೀಕ್ಷಾ ಕೇಂದ್ರದಿಂದ ಮನೆಯವರೆಗೂ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಕರೆತರಲಾಗಿತ್ತು ಎಂದು ಸಚಿವರು ವಿವರಿಸಿದರು.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಸ್ಪಷ್ಟ ನಿರ್ದೇಶನಗಳನ್ನು ಪರೀಕ್ಷಾ ಪೂರ್ವದಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರುಗಳಿಗೆ ನೀಡಲಾಗಿದ್ದು, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಕ್ಕೆ ಪ್ರವೇಶಿಸಲು ಅನುಮತಿ ನೀಡಿರುವುದನ್ನು ಮಾಧ್ಯಮಗಳ ಮೂಲಕ ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಈಗಾಗಲೇ ಸೂಚನೆ ನೀಡಿದ್ದೇನೆ. ಅದೇ ರೀತಿ ಇಂಗ್ಲಿಷ್ ಭಾಷಾ ಪರೀಕ್ಷೆಯ ದಿನದಂದು ಕಂಡುಬಂದ ನ್ಯೂನತೆಗಳನ್ನು ಅವಕಾಶಗಳನ್ನಾಗಿ ಬಳಸಿಕೊಂದು ಜೂನ್ 25ರಿಂದ ಆರಂಭವಾಗಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳಲ್ಲಿ ಈ ರೀತಿಯ ಯಾವುದೇ ಸಮಸ್ಯೆಗಳು ಎದುರಾಗದ ರೀತಿಯಲ್ಲಿ ಎಲ್ಲ ಕ್ರಮಗಳನ್ನೂ ಅನುಸರಿಸಲು ಈಗಾಗಲೇ ಇಲಾಖಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದೂ ಸುರೇಶ್‍ಕುಮಾರ್ ತಿಳಿಸಿದರು.

Advertisement

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿರುವ ಯಾವುದೇ ವಿದ್ಯಾರ್ಥಿಯ ಪೋಷಕರು, ಜೊತೆಯಲ್ಲಿ ವಾಸಿಸುವ ಹತ್ತಿರದ ಸಂಬಂಧಿಕರು ಕೋವಿಡ್ ಹಿನ್ನೆಲೆಯಲ್ಲಿ ಕ್ವಾರಂಟೈನ್‍ಗೆ ಒಳಗಾಗಿದ್ದಲ್ಲಿ ಅಂತಹ ಪ್ರಕರಣಗಳನ್ನು ಪೂರ್ವಭಾವಿಯಾಗಿ ಪತ್ತೆ ಹಚ್ಚಿ ನಮ್ಮ ಇಲಾಖೆಯ ದಾಖಲೆ/ದತ್ತಾಂಶಗಳೊಂದಿಗೆ ತಾಳೆ ಮಾಡಿ ಅಂತಹ ವಿದ್ಯಾರ್ಥಿಗಳಿಗೆ ಈ ಬಾರಿ ಪರೀಕ್ಷೆಗೆ ಹಾಜರಾಗಲು ವಿನಾಯ್ತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿರುತ್ತೇನೆ. ಜೊತೆಗೆ ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಹಾಜರಾಗಲು ಅವಕಾಶ ದೊರಕಿಸುವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next