Advertisement

ಆಲೂರಿಗೆ ಬರಲಿ ಪಿಯು ಕಾಲೇಜು

01:24 PM Jun 20, 2022 | Team Udayavani |

ಆಲೂರು: ಹರ್ಕೂರು ಹಾಗೂ ಆಲೂರು ಗ್ರಾಮವನ್ನೊಳಗೊಂಡ ಆಲೂರು ಗ್ರಾ.ಪಂ. ವ್ಯಾಪ್ತಿಗೆ ಮುಖ್ಯವಾಗಿ ಸರಕಾರಿ ಪ.ಪೂ. ಕಾಲೇಜೊಂದರ ಬೇಡಿಕೆಯಿದೆ. ಪ್ರೌಢಶಾಲೆಯವರೆಗೆ ಕಲಿತ ವಿದ್ಯಾರ್ಥಿಗಳು ಪಿಯುಸಿಗಾಗಿ ಹತ್ತಾರು ಕಿಲೋ ಮೀಟರ್‌ ದೂರದ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ.

Advertisement

ಆಲೂರಲ್ಲಿ ಪ.ಪೂ. ಕಾಲೇಜು ಸಾಧ್ಯವಾದರೆ ಹರ್ಕೂರು, ಆಲೂರು, ಕಳಿ ಮಾತ್ರವಲ್ಲದೆ ನಾಡ ಗುಡ್ಡೆಯಂಗಡಿ, ಹುಂತನಗೋಳಿಯಲ್ಲಿ ಶಾಸಕರ ಮುತುವರ್ಜಿಯಲ್ಲಿ ಸೇತುವೆಯೂ ಆಗಿರುವುದರಿಂದ ಕಾಲ್ತೋಡು, ಹೇರೂರು ಗ್ರಾಮಗಳ ಮಕ್ಕಳಿಗೂ ಪಿಯುಸಿ ವ್ಯಾಸಂಗಕ್ಕೆ ಅನುಕೂಲವಾಗಲಿದೆ.

ಈ ಭಾಗದ ಮಕ್ಕಳೆಲ್ಲ ಪಿಯುಸಿಗಾಗಿ ನಾವುಂದ, ಕುಂದಾಪುರ, ಗಂಗೊಳ್ಳಿಗೆ ಹೋಗಬೇಕಿದೆ. ವಂಡ್ಸೆಯಲ್ಲಿ ಕಾಲೇಜಿದ್ದರೂ ಅಲ್ಲಿಗೆ ಸರಿಯಾದ ಬಸ್‌ ವ್ಯವಸ್ಥೆಯಿಲ್ಲ. ಆಲೂರಲ್ಲಿಯೇ ಪ್ರತೀ ವರ್ಷ 100ಕ್ಕೂ ಮಿಕ್ಕಿ ಮಂದಿ ವಿದ್ಯಾರ್ಥಿಗಳು ಎಸೆಸೆಲ್ಸಿ ಮಕ್ಕಳಿದ್ದು, ಸುತ್ತಮುತ್ತಲಿನ ಪ್ರದೇಶಗಳ 200ಕ್ಕೂ ಅಧಿಕ ವಿದ್ಯಾರ್ಥಿಗಳಾಗುತ್ತಾರೆ. ಈ ನೆಲೆಯಲ್ಲಿ ಆಲೂರಿಗೆ ಪ.ಪೂ. ಕಾಲೇಜು ತುರ್ತಾಗಿ ಅಗತ್ಯವಿದೆ.

ಕಾಲೇಜಿನ ಕುರಿತು ಈ ಹಿಂದೆಯೇ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಈಗ ಈ ಪ್ರಸ್ತಾವ ಶಿಕ್ಷಣ ಇಲಾಖೆಯ ಪ್ರ. ಕಾರ್ಯದರ್ಶಿ ಮಟ್ಟದಲ್ಲಿದೆ. ಅದು ತ್ವರಿತಗತಿಯಲ್ಲಿ ಕಾರ್ಯರೂಪಕ್ಕೆ ಬರುವಲ್ಲಿ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸಬೇಕಿದೆ.

ಹೊಸ ಕಟ್ಟಡ

Advertisement

ಗ್ರಾ.ಪಂ. ಕಚೇರಿ ಕಟ್ಟಡ 40 ವರ್ಷಗಳಿಗೂ ಹಿಂದಿನದ್ದಾಗಿದ್ದು, ಹೊಸ ಸುಸಜ್ಜಿತ ಕಟ್ಟಡದ ಬೇಡಿಕೆಯೂ ಇದೆ.

ಕೈಗಾರಿಕೆ ಆರಂಭವಾಗಲಿ…

ಆಲೂರಲ್ಲಿ ಕಲಿತ ಯುವಜನರು ಉದ್ಯೋಗ ಅರಸಿಕೊಂಡು ಬೇರೆ ಜಿಲ್ಲೆಗಳು, ಪರ ಊರಿಗೆ ವಲಸೆ ಹೋಗಬೇಕಿದೆ. ಇಲ್ಲಿ ಯಾವುದೇ ಕೈಗಾರಿಕೆ, ಉದ್ಯಮವಾಗಲಿ ಇಲ್ಲ. ಗ್ರಾಮದ ಜನರಿಗೆ ಉದ್ಯೋಗ ಕಲ್ಪಿಸುವಂಥ ಬಟ್ಟೆ ಅಥವಾ ಇನ್ನಿತರ ಯಾವುದಾದರೂ ಕೈಗಾರಿಕೆ ಸ್ಥಾಪನೆಯಾದರೆ ಅನುಕೂಲವಾಗಲಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ವೇ ನಂಬರ್‌ 102ರಲ್ಲಿ 330.67 ಎಕರೆ ಜಾಗವಿದೆ. ಇದರಲ್ಲಿ ಒಂದಷ್ಟು ಮೀಸಲು ಅರಣ್ಯ ಸಮಸ್ಯೆಯಿದ್ದರೂ, ಅದನ್ನು ನಿವಾರಿಸಿ, ಕೈಗಾರಿಕೆ ಆರಂಭಿಸಲು ಅವಕಾಶವಿದೆ.

ನಿವೇಶನ ಕೊಡಿ: ಆಲೂರಿಗೆ ಅಗತ್ಯವಾಗಿ ಪಿಯುಸಿ ಕಾಲೇಜು ಬೇಕಿದೆ. ಇನ್ನು ಗ್ರಾಮದಲ್ಲಿ ಅನೇಕ ಮಂದಿ ನಿವೇಶನ ರಹಿತರಿದ್ದು, ಸಾಕಷ್ಟು ಸರಕಾರಿ ಜಾಗವಿದ್ದರೂ, ಡೀಮ್ಡ್ ಫಾರೆಸ್ಟ್‌ ಸಮಸ್ಯೆ ನಿವಾರಿಸಿದರೆ ಇದು ಸುಗಮವಾಗಲಿದೆ. ವಸತಿ ರಹಿತರಿಗೂ ತ್ವರಿತಗತಿಯಲ್ಲಿ ಮನೆ ಮಂಜೂರಾಗಬೇಕಿದೆ. ಇನ್ನು ಇಲ್ಲಿನ ಯುವಜನರಿಗೆ ಉದ್ಯೋಗ ಕಲ್ಪಿಸಲು ಕೈಗಾರಿಕೆಗಳು ಆರಂಭವಾಗಬೇಕು. –ಪ್ರಶಾಂತ್‌ ಕುಲಾಲ್‌ ಆಲೂರು, ಗ್ರಾಮಸ್ಥರು

ಪ್ರಯತ್ನಿಸಲಾಗುವುದು: ನಿವೇಶನ ರಹಿತರಿಗೆ ಅರ್ಜಿ ಸಲ್ಲಿಸಲು ಈಗಾಗಲೇ ಗ್ರಾಮಸ್ಥರಿಗೆ ತಿಳಿಸಿದ್ದು, ಅದನ್ನು ನಿರ್ಣಯಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗುವುದು. ಪಿಯುಸಿ ಕಾಲೇಜು ಬೇಡಿಕೆ ಬಗ್ಗೆ ಈ ಹಿಂದೆಯೇ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮತ್ತೆ ಸಂಬಂಧಪಟ್ಟ ಸಚಿವರು, ಇಲಾಖಾ ಅಧಿಕಾರಿಗಳ ಗಮನಕ್ಕೆ ತರಲಾಗುವುದು. –ರವಿ ಶೆಟ್ಟಿ ಉಪಾಧ್ಯಕ್ಷರು, ಆಲೂರು ಗ್ರಾ.ಪಂ.

„ ಪ್ರಶಾಂತ್‌ ಪಾದೆ

 

 

Advertisement

Udayavani is now on Telegram. Click here to join our channel and stay updated with the latest news.

Next