Advertisement

ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಪಿಯು ಮೌಲ್ಯಮಾಪನ

08:22 AM May 16, 2020 | Lakshmi GovindaRaj |

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಕ್ಕೆ ಸಿದ್ಧತೆ ಆರಂಭವಾಗಿದೆ. ವಿಕೇಂದ್ರೀಕೃತ ವ್ಯವಸ್ಥೆಯ ಮೂಲಕ ಮೌಲ್ಯಮಾಪನ ಕಾರ್ಯಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ  ನಿರ್ಧರಿಸಿದ್ದು, ಆಯಾ ಜಿಲ್ಲೆ ಮತ್ತು ತಾಲೂಕು ಅಥವಾ ಅಂತರ್‌ ಜಿಲ್ಲಾ ವ್ಯವಸ್ಥೆಯ ಮೂಲಕ ಇಂಗ್ಲಿಷ್‌ ಹೊರತುಪಡಿಸಿ, ಉಳಿದೆಲ್ಲ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಅತಿ ಶೀಘ್ರದಲ್ಲೇ ಇಲಾಖೆ ಆರಂಭಿಸಲಿದೆ  ಎಂದು ಉನ್ನತ ಮೂಲ ಖಚಿತಪಡಿಸಿದೆ.

Advertisement

ಮೌಲ್ಯಮಾಪನ ಕೇಂದ್ರದ ಪಟ್ಟಿಯನ್ನು ಜಿಲ್ಲಾಮಟ್ಟದಲ್ಲಿ ಸಿದ್ಧಪಡಿಸಲಾಗುತ್ತಿದೆ. ಸರ್ಕಾರ ಅನುಮತಿ ನೀಡಿದ ಕೂಡಲೇ ಕಾಲೇಜು ಗಳಿಗೆ ಮತ್ತು ಮೌಲ್ಯಮಾಪಕರಿಗೆ ಸೂಚನೆ ನೀಡುತ್ತೇವೆಂದು ಪಿಯು ಉಪನಿರ್ದೇಶಕರೊಬ್ಬರು ವಿವರಿಸಿ ದರು. ಇಂಗ್ಲಿಷ್‌ ಪರೀಕ್ಷೆ ಆರಂಭಕ್ಕೂ ಮೊದಲೇ ಮೌಲ್ಯಮಾಪನ ಕಾರ್ಯ ಆರಂಭಿಸಿದರೆ, ಇಂಗ್ಲಿಷ್‌ ಪರೀಕ್ಷೆ ಮುಗಿದ ಕೆಲವೇ ದಿನಗಳಲ್ಲಿ ಫಲಿತಾಂಶ ನೀಡಲು  ಸಹಕಾರಿಯಾಗಲಿದೆ.

ಇದು ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷಕ್ಕೂ ಅನುಕೂಲ ವಾಗಲಿದೆ. ಹೀಗಾಗಿ ಇಲಾಖೆ ಆದಷ್ಟು ಬೇಗ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಲು ಕಾರ್ಯ ಯೋಜನೆ ಸಿದ್ಧಪಡಿಸಿದೆ ಎಂದರು. ಫಲಿತಾಂಶ ಹೊರಬಿದ್ದ ತಕ್ಷಣದಿಂದಲೇ ಸರ್ಕಾರದ ಆದೇಶದನ್ವಯ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲಾಗುತ್ತದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದು, ಫಲಿತಾಂಶ ಬಂದ ನಂತರವಷ್ಟೇ ಅಧಿಕೃತವಾಗಿ ಪ್ರವೇಶ ಪ್ರಕ್ರಿಯೆ ಆರಂಭಿಸಿ,  ನಂತರ ತರಗತಿ ಆರಂಭಿಸಬೇಕಾಗುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಕೆಲ ಜಿಲ್ಲೆಗಳಲ್ಲಿ ಮೌಲ್ಯಮಾಪಕರ ಕೊರತೆ: ಎಲ್ಲ ಜಿಲ್ಲೆಗಳಲ್ಲೂ ಎಲ್ಲ ವಿಷಯದ ಮೌಲ್ಯಮಾಪಕರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲ. ಕನ್ನಡ ಸಹಿತವಾಗಿ ಕೆಲವೊಂದು ವಿಷಯಕ್ಕೆ ಎಲ್ಲ ಜಿಲ್ಲೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ  ಮೌಲ್ಯಮಾಪಕರು ಸಿಗುತ್ತಾರೆ. ಆದರೆ, ಇನ್ನೂ ಕೆಲ ವಿಷಯಕ್ಕೆ ಕೆಲವು ಜಿಲ್ಲೆಗಳಲ್ಲಿ ಮೌಲ್ಯಮಾಪಕರ ಕೊರತೆಯಿದೆ. ಈ ಹಿಂದಿನ ವರ್ಷಗಳಲ್ಲಿ ನಡೆಯುತ್ತಿದ್ದಂತೆ ಮೌಲ್ಯಮಾಪನ ಕಾರ್ಯ ಮಾಡಲು ಸಾಧ್ಯವಿಲ್ಲ. ಕೆಲ ಮಾರ್ಪಾಡು  ಮಾಡಬೇಕಾಗುತ್ತದೆ. ಅದಕ್ಕೂ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಪಿಯು ಇಲಾಖೆಯ ನಿರ್ದೇಶಕಿ ಕನಗವಲ್ಲಿ ಮಾಹಿತಿ ನೀಡಿದರು.

ಮೌಲ್ಯಮಾಪನ ಕಾರ್ಯ ಆರಂಭಿಸುವ ಬಗ್ಗೆ ಮುಂದಿನ ವಾರದಲ್ಲಿ ಸೂಚನೆ ಹೊರಡಿಸುತ್ತೇವೆ. ಮೌಲ್ಯಮಾಪನ ಕೇಂದ್ರ, ಮೌಲ್ಯಮಾಪಕರ ಲಭ್ಯತೆ ಮೊದಲಾದ ಎಲ್ಲ ಅಂಶಗಳ ಕೂಲಂಕಷವಾಗಿ ಚರ್ಚಿಸಿ, ಸೂಕ್ತ ಕಾರ್ಯಸೂಚಿ  ಸಿದ್ಧಪಡಿಸಿಕೊಂಡಿದ್ದೇವೆ. ಸರ್ಕಾರದ ಸೂಚನೆಯಂತೆ ಮುಂದುವರಿಯಲಿದ್ದೇವೆ. 
-ಕನಗವಲ್ಲಿ, ನಿರ್ದೇಶಕಿ, ಪಿಯು ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next