ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವಪೂರ್ವ ಕಾಲೇಜಿನ ಉಪನ್ಯಾಸಕರ ವರ್ಗಾವಣೆಯ ಪರಿಷ್ಕೃತ ವೇಳಾಪಟ್ಟಿಯನ್ನು ಇಲಾಖೆ ಪ್ರಕಟಿಸಿದೆ.
ಜೂನ್ 21ರಿಂದ 24ರವರೆಗೆ ವರ್ಗಾವಣೆ ಕೌನ್ಸೆಲಿಂಗ್ ನಡೆಸುವುದಾಗಿ ಹೇಳಿದ್ದ ಇಲಾಖೆ, ತಾಂತ್ರಿಕ ಕಾರಣದಿಂದ ವರ್ಗಾವಣೆ ದಿನಾಂಕವನ್ನು ಜೂನ್ 23ರವರೆಗೂ ಮುಂದೂಡಿ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ವರ್ಗಾವಣೆ ಕೌನ್ಸೆಲಿಂಗ್ ಮಲ್ಲೇಶ್ವರದ 18ನೇ ಕ್ರಾಸ್‌ನಲ್ಲಿರುವ ಬಾಲಕರ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ನಡೆಯಲಿದೆ.
ಜೂ. 26ರಂದು ಐಚ್ಛಿಕ ಕನ್ನಡ, ಸಂಸ್ಕೃತ, ಹಿಂದಿ, ಉರ್ದು, ತರ್ಕಶಾಸ್ತ್ರ, ಶಿಕ್ಷಣ, ಭೂಗೋಳಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ ಮತ್ತು ಕನ್ನಡ ವಿಷಯದ ಉಪನ್ಯಾಸಕರ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ. ಜೂ. 27ರಂದು ಇತಿಹಾಸ, ಭೌತಶಾಸ್ತ್ರ, ಜೂ. 28ರಂದು ರಸಾಯನಶಾಸ್ತ್ರ, ಅರ್ಥಶಾಸ್ತ್ರ, ಜೂ. 29ರಂದು ರಾಜ್ಯಶಾಸ್ತ್ರ, ಗಣಿತ, ಜೂ.30ರಂದು ಜೀವಶಾಸ್ತ್ರ, ಸಮಾಜಶಾಸ್ತ್ರ, ಜುಲೈ 1ರಂದು ಆಂಗ್ಲಭಾಷೆ, ವ್ಯವಹಾರ ಅಧ್ಯಯನ ವಿಷಯದ ಉಪನ್ಯಾಸಕರ ವರ್ಗಾವಣೆ ಕೌನ್ಸೆಲಿಂಗ್ ನಿಗದಿಯಾಗಿದೆ.
ಎರಡನೇ ಹಂತದಲ್ಲಿ ಜುಲೈ 4ರಂದು ಐಚ್ಛಿಕ ಕನ್ನಡ, ಸಂಸ್ಕೃತ, ಹಿಂದಿ, ಉರ್ದು, ತರ್ಕಶಾಸ್ತ್ರ, ಶಿಕ್ಷಣ, ಭೂಗೋಳಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ ಮತ್ತು ಕನ್ನಡ, ಭೌತಶಾಸ್ತ್ರ, ಜುಲೈ 5ರಂದು ಇತಿಹಾಸ, ರಸಾಯನಶಾಸ್ತ್ರ, ಅರ್ಥಶಾಸ್ತ್ರ, ಗಣಿತ, ಜುಲೈ 6ರಂದು ರಾಜ್ಯಶಾಸ್ತ್ರ, ಜೀವಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಜುಲೈ 7ರಂದು ಇಂಗ್ಲಿಷ್ ಮತ್ತು ವ್ಯವಹಾರ ಅಧ್ಯಯನ ವಿಷಯದ ಕೌನ್ಸೆಲಿಂಗ್ ನಡೆಯಲಿದೆ ಎಂದು ಪಿಯು ಇಲಾಖೆ ಪ್ರಕಟಣೆ ತಿಳಿಸಿದೆ.
ಶಾಲಾ ಶಿಕ್ಷಕರ ವರ್ಗಾವಣೆ ಅರ್ಜಿ ಇಂದು ವಿಚರಣೆ:
ಶಾಲಾ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿರುವ ಅರ್ಜಿ ವಿಚಾರಣೆ ಗುರುವಾರ ಬೆಳಗ್ಗೆ ಹೈಕೋರ್ಟ್‌ನಲ್ಲಿ ನಡೆಯಲಿದೆ. ವರ್ಗಾವಣೆ ಪ್ರಕ್ರಿಯೆಗೆ ಬೇಕಾದ ಎಲ್ಲ ಸಿದ್ಧತೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಡಿಕೊಂಡಿದ್ದಾರೆ. ಹೈಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸುವ ಸಾಧ್ಯತೆ ಇದೆ ಎಂಬ ನಿರೀಕ್ಷೆಯೊಂದಿಗೆ ಮುಂದಿನ ಎರಡು ದಿನದೊಳಗೆ ಕೌನ್ಸೆಲಿಂಗ್ ಸಂಬಂಧಿಸಿದ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲು ಸಿದ್ಧತೆ ನಡೆಸಲಾಗಿದೆ.